ಮನಸ್ಸು ಅರಳಿಸುವ ಕಲೆ ಸಾಹಿತ್ಯ

ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿಶಾಲೆಯಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಧನ್ಯಶ್ರೀ ಉದ್ಘಾಟಿಸಿದರು
ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿಶಾಲೆಯಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಧನ್ಯಶ್ರೀ ಉದ್ಘಾಟಿಸಿದರು
Published on
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಮನಸ್ಸನ್ನು ಅರಳಿಸುವ, ಕುತೂಹಲವನ್ನು ಕೆರಳಿಸುವ ವಿಶಿಷ್ಟ ರೀತಿಯ ಕಲೆ ಸಾಹಿತ್ಯ. ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿಯನ್ನು ಹೆಚ್ಚಿಸಲು, ಹಿರಿಯ ಸಾಹಿತಿಗಳ ಅನುಭವ ಮತ್ತು ವಾರ್ಗದರ್ಶನ ಹೊಸ ಪೀಳಿಗೆಯ ಬರಹಗಾರರಿಗೆ ತಲುಪಲು ಸಾಹಿತ್ಯ ಸಮ್ಮೇಳನಗಳು ಸಹಕಾರಿ. ಸಾಹಿತ್ಯ ಸಮ್ಮೇಳನಗಳು ಮಕ್ಕಳಲ್ಲಿ ಭಾಷೆಯ ಬಳಕೆ ಮತ್ತು ಹಿರಿಮೆ ಸಾರಲು ಪ್ರೇರಣೆ ನೀಡುತ್ತದೆ. ಮಕ್ಕಳಿಗೆ ತಮ್ಮ ಕಥೆ, ಕವನಗಳನ್ನು ಪ್ರಸ್ತುತ ಪಡಿಸಲು ವೇದಿಕೆ ಸಿಕ್ಕಂತಾಗುತ್ತದೆ ಎಂದು ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿ ಧನ್ಯಶ್ರೀ ಹೇಳಿದರು.
ಸಾಲಿಗ್ರಾಮ ಡಾ.ಕೋಟ ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ, ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಮತ್ತು ವಿಜಯಪುರ ಸಿಂದಗಿ ವಿದ್ಯಾಚೇತನ ಪ್ರಕಾಶನದ ಸಹಭಾಗಿತ್ವದಲ್ಲಿ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿಶಾಲೆಯ ಭಕ್ತಿ ಸುಧೆ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ವಾತನಾಡಿದರು.
ಕಲೆ, ಸಂಸ್ಕೃತಿ, ಸಾಹಿತಿಗಳ ತವರು ಕನ್ನಡ ನಾಡು. ಇಂತಹ ಪುಣ್ಯಭೂಮಿಯಲ್ಲಿ ಜನಿಸಿದ ನಾವು ಕನ್ನಡ ಸಾಹಿತ್ಯಕ್ಕೆ ಏನಾದರೂ ಕೊಡುಗೆ ನೀಡಬೇಕು. ಕೇವಲ ಪಠ್ಯಪುಸ್ತಕಗಳ ಪಾಠಕ್ಕಿಂತ ಕಥೆ, ಕವನ, ಕಾದಂಬರಿಗಳನ್ನು ಓದುವುದರಿಂದ ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳಲು ಸಾಧ್ಯ. ಕಥೆ, ಕವನ ರಚನೆ ಮೂಲಕ ನಮ್ಮ ಅನುಭವ ಹೊರಹಾಕಲು ಸಾಧ್ಯ. ಉತ್ತಮ ಓದುಗನಾದರೆ ಒಬ್ಬ ಉತ್ತಮ ಸಾಹಿತಿಯಾಗಲು ಸಾಧ್ಯ ಎಂದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು. ಕುಂದಾಪುರದ ಸಾಹಿತಿ ಡಾ.ಪಾರ್ವತಿ ಜಿ.ಐತಾಳ್, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿಶಾಲೆ ಪ್ರಾಂಶುಪಾಲ ಶರಣ ಕುವಾರ, ಶಾಲೆ ಆಡಳಿತಾಧಿಕಾರಿ ವೀಣಾರಶ್ಮಿ ಎಂ., ಸಾಲಿಗ್ರಾಮ ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಮಾತನಾಡಿದರು.
ಬೆಂಗಳೂರು ಇಂಡಿಯನ್ ಹೈಸ್ಕೂಲ್‌ನ ಸೃಜನ್ ಎನ್., ಮೈಸೂರು ಸರ್ಕಾರಿ ಆದರ್ಶ ವಿದ್ಯಾಲಯದ ಸಿದ್ದೇಶ್ ಟಿ., ಕುಂದಾಪುರ ಶ್ರೀ ವೆಂಕಟರಮಣ ಆಂಗ್ಲ ವಾಧ್ಯಮ ಶಾಲೆಯ ಶ್ರಾವಣಿ ನಾಯ್ಕ ಉಪಸ್ಥಿತರಿದ್ದರು.
ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯ ಅವನಿ ಹೊಳ್ಳ ಸ್ವಾಗತಿಸಿದರು. ಕುಮಟಾ ಸಿವಿಎಸ್‌ಕೆ ಪ್ರೌಢಶಾಲೆಯ ಪನ್ನಗ ವಿ.ಶ್ಯಾನುಭಾಗ್ ವಂದಿಸಿದರು. ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿಶಾಲೆಯ ಶ್ರೀಹರಿ ಮಹಾಂತೇಶ್ ಕಾರ್ಯಕ್ರಮ ನಿರ್ವಹಿಸಿದರು.

ವಿದ್ಯಾರ್ಥಿ ದೆಸೆಯಿಂದಲೇ ನಾವು ನಾಡು, ನುಡಿಯ ಬಗ್ಗೆ, ಕಲೆ ಸಾಹಿತ್ಯದ ಒಲವನ್ನು ಹೊಂದಿರಬೇಕು. ಕರುನಾಡು ಕಲೆ ಸಂಸ್ಕೃತಿಯ ನೆಲೆವೀಡು, ಇದು ಸಾಧಕರ ಕರ್ಮಭೂಮಿ. ಕನ್ನಡ ಭಾಷೆಯ ಸಾಹಿತ್ಯ ಅನನ್ಯ, ಅನುಕರಣೀಯ. ಕನ್ನಡ ನಾಡು, ನುಡಿಯನ್ನು ಉಳಿಸಿ ಬೆಳೆಸುವ ಕಾರ್ಯ ನಮ್ಮಿಂದಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net