ಸೂಕ್ಷ್ಮವಾಗಿ ಬದುಕು ಅರ್ಥೈಸಲು ಸಾಹಿತ್ಯ ಸಹಕಾರಿ

ಉಡುಪಿಯ ನಗರ ಕೇಂದ್ರ ಗ್ರಂಥಾಲಯದಲ್ಲಿ ಆಯೋಜಿಸಿದ್ದ 'ಗ್ರಂಥಾಲಯದಲ್ಲಿ ನಮ್ಮ ಸಾಹಿತಿ' ಕಾರ್ಯಕ್ರಮದಲ್ಲಿ ಡಾ. ರೇಖಾ ವಿ. ಬನ್ನಾಡಿ ಮಾತನಾಡಿದರು. ರವಿರಾಜ್​ ಎಚ್​.ಪಿ., ರಂಜನಿ ವಸಂತ್​, ಶಕುಂತಲಾ ಇದ್ದರು.
ಉಡುಪಿಯ ನಗರ ಕೇಂದ್ರ ಗ್ರಂಥಾಲಯದಲ್ಲಿ ಆಯೋಜಿಸಿದ್ದ 'ಗ್ರಂಥಾಲಯದಲ್ಲಿ ನಮ್ಮ ಸಾಹಿತಿ' ಕಾರ್ಯಕ್ರಮದಲ್ಲಿ ಡಾ. ರೇಖಾ ವಿ. ಬನ್ನಾಡಿ ಮಾತನಾಡಿದರು. ರವಿರಾಜ್​ ಎಚ್​.ಪಿ., ರಂಜನಿ ವಸಂತ್​, ಶಕುಂತಲಾ ಇದ್ದರು.
Published on: 

* ಖ್ಯಾತ ಸಾಹಿತಿ ಡಾ. ರೇಖಾ ವಿ. ಬನ್ನಾಡಿ ಅನಿಸಿಕೆ

* 'ಗ್ರಂಥಾಲಯದಲ್ಲಿ ನಮ್ಮ ಸಾಹಿತಿ' ಕಾರ್ಯಕ್ರಮ

ಉಡುಪಿ: ಕರಾವಳಿಯು ಸಮೃದ್ಧ ಸಾಂಸ್ಕೃತಿಕ ಹಾಗೂ ಮೌಖಿಕ ಪರಂಪರೆ ಹೊಂದಿದ್ದು ಅದನ್ನು ಕಥೆ, ಕವನಗಳಲ್ಲಿ ಕಾಣಬಹುದು. ಆದರೆ, ಇಂದು ಹೇಳುವ ಹಾಗೂ ಕೇಳುವ ಅಭ್ಯಾಸ ಕ್ಷೀಣವಾಗಿದೆ. ಸಾಹಿತ್ಯ ಆಸ್ವಾದಿಸುವ ಮನಸ್ಸು ಕಡಿಮೆಯಾಗಿದೆ. ಸಾಹಿತ್ಯ ಕೃತಿಗಳು ಬದುಕನ್ನು ಸೂಕ್ಷ್ಮವಾಗಿ ಅರ್ಥೈಸಲು ಸಹಕಾರಿ. ಯುವ ಜನರು ಸಾಹಿತ್ಯವನ್ನು ಹೆಚ್ಚು ಓದುವಂತಾಗಬೇಕು ಎಂದು ಖ್ಯಾತ ಸಾಹಿತಿ ಡಾ ರೇಖಾ ವಿ. ಬನ್ನಾಡಿ ಅನಿಸಿಕೆ ವ್ಯಕ್ತಪಡಿಸಿದರು.

ಉಡುಪಿಯ ಅಜ್ಜರಕಾಡಿನಲ್ಲಿರುವ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ನಗರ ಕೇಂದ್ರ ಗ್ರಂಥಾಲಯದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಕೇಂದ್ರ ಗ್ರಂಥಾಲಯ ಉಡುಪಿ ಹಾಗೂ ಕನ್ನಡ ಸಾಹಿತ್ಯ ಪರಿಷತ್​ ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ಶುಕ್ರವಾರ (ಅ.9) ಆಯೋಜಿಸಿದ್ದ 'ಗ್ರಂಥಾಲಯದಲ್ಲಿ ನಮ್ಮ ಸಾಹಿತಿ' ಕಾರ್ಯಕ್ರಮದಲ್ಲಿ ಮಾತನಾಡಿದರು.

ಅರ್ಥಪೂರ್ಣ ಕಾರ್ಯಕ್ರಮ

ಈ ಹಿಂದೆ ಎಲ್ಲ ಗ್ರಂಥಾಲಯಗಳು ತುಂಬಿ ತಳುಕುತ್ತಿದ್ದವು. ಆದರೀಗ ಬಿಕೋ ಎನ್ನುತ್ತಿವೆ. ಕುವೆಂಪು, ಕಾರಂತ, ವೈದೇಹಿ, ಸಾರಾ, ಲಂಕೇಶ್​, ತೇಜಸ್ವಿ, ದೇವನೂರ ಅವರಂತಹ ಮೇರು ಸಾಹಿತಿಗಳ ನಾಡು ನಮ್ಮದು. ಪುಸ್ತಕಗಳು ಇಂದು ಕಪಾಟಿನ ಒಳಗೆ ಸೀಮಿತವಾಗಿವೆ. ಅದಕ್ಕೆ ಬದಲಾಗುತ್ತಿರುವ ಸಮಾಜದ ಆದ್ಯತೆ ಕಾರಣ. ಇಂತಹ ಸಂದರ್ಭದಲ್ಲಿ ಸಾಹಿತಿಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಹಾಗೂ ಗ್ರಂಥಾಲಯಗಳು ನಡೆಸುವ ಈ ಕಾರ್ಯಕ್ರಮ ಅರ್ಥಪೂರ್ಣ ಎಂದರು.

ಇಂದಿನ ಲಾಭನಫ್ಟದ ಲೆಕ್ಕಾಚಾರದ ಜಗತ್ತಿನಲ್ಲಿ ಸಾಹಿತ್ಯ ಪ್ರೀತಿ ಕಡಿಮೆಯಾಗಿದೆ. ಮಾನಸಿಕ ಒತ್ತಡದ ಬದುಕನ್ನು ಧೈರ್ಯ, ಸಂಯಮದಿಂದ ಎದುರಿಸಲು ಸಾಹಿತ್ಯ ಸಹಾಯಕ. ಜೀವನದಲ್ಲಿ ಗೆಲುವಿನೊಂದಿಗೆ ಸೋಲನ್ನೂ ಹೇಗೆ ಸವಾಲಾಗಿ ಸ್ವೀಕರಿಸಬೇಕು ಎನ್ನುವುದನ್ನು ಹಾಗೂ ಮೂಲ ಮಾನವಿಕ ಮೌಲ್ಯಗಳನ್ನು ವೈಚಾರಿಕ ಸಾಹಿತ್ಯದ ಮೂಲಕ ಅರಿಯಬಹುದು. ಸಾಹಿತ್ಯವು ಎಲ್ಲರನ್ನೂ ಸಮಾನತೆ, ಸಹಾನುಭೂತಿಯಿಂದ ನೋಡಲು ಕಲಿಸಿಕೊಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್​ ತಾಲೂಕು ಘಟಕದ ಅಧ್ಯಕ್ಷ ರವಿರಾಜ್​ ಎಚ್​.ಪಿ., ಗೌರವ ಕಾರ್ಯದರ್ಶಿ ರಂಜನಿ ವಸಂತ್​ ಉಪಸ್ಥಿತರಿದ್ದರು. ಪ್ರಥಮ ದರ್ಜೆ ಸಹಾಯಕಿ ಶಕುಂತಲಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net