ಕುಂಬಳೆ ರೈಲು ನಿಲ್ದಾಣದಲ್ಲಿ ಮೇಲೇರದ ಲಿಫ್ಟ್

 ಕುಂಬಳೆ ರೈಲು ನಿಲ್ದಾಣದಲ್ಲಿ ಸ್ಥಗಿತಗೊಂಡಿರುವ ಲಿಫ್ಟ್
ಕುಂಬಳೆ ರೈಲು ನಿಲ್ದಾಣದಲ್ಲಿ ಸ್ಥಗಿತಗೊಂಡಿರುವ ಲಿಫ್ಟ್
Published on
ವಿಜಯವಾಣಿ ಸುದ್ದಿಜಾಲ ಬದಿಯಡ್ಕ
ಕುಂಬಳೆ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲೆಂದು ನಿರ್ಮಿಸಿರುವ ಲಿಫ್ಟ್ ಕಾರ್ಯಾರಂಭ ಮಾಡಿದ ಕೆಲವೇ ದಿನಗಳಲ್ಲಿ ಸ್ಥಗಿತಗೊಂಡಿದ್ದು ಇನ್ನೂ ಪ್ರಯಾಣಿಕರ ಬಳಕೆಗೆ ತೆರೆದುಕೊಂಡಿಲ್ಲ. ನಿಲ್ದಾಣದ ಬಳಿಯ ಟ್ರಾನ್ಸ್‌ಫಾರ್ಮರ್‌ನ ಸಾಮರ್ಥ್ಯ ಕಡಿಮೆ ಇರುವುದು ಲಿಫ್ಟ್ ಕಾರ್ಯನಿರ್ವಹಣೆಗೆ ಪ್ರಮುಖ ಅಡಚಣೆಯಾಗಿದೆ ಎನ್ನಲಾಗಿದೆ. ಕೆಲವು ದಿನಗಳ ಕಾಲ ಲಿಫ್ಟ್ ಕಾರ್ಯಾರಂಭ ಮಾಡಿದ್ದರೂ ವೋಲ್ಟೇಜ್‌ನಲ್ಲಿ ಏರಿಳಿತ ಉಂಟಾಗಿ ಹಲವಾರು ಪ್ರಯಾಣಿಕರು ಸಿಲುಕಿಕೊಂಡ ನಂತರ ಅಧಿಕಾರಿಗಳು ಲಿಫ್ಟ್ ಅನ್ನು ಸಂಪೂರ್ಣವಾಗಿ ಮುಚ್ಚಿದ್ದಾರೆ.
ಕುಂಬಳೆ ರೈಲು ನಿಲ್ದಾಣಕ್ಕೆ ಪ್ರಸ್ತುತ ಕೆಎಸ್‌ಇಬಿ ಟ್ರಾನ್ಸ್‌ಫಾರ್ಮರ್‌ನಿಂದ ಮೂರು ಲೈನ್(ಥ್ರೀ ಪೇಸ್) ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಆದರೂ ಲಿಫ್ಟ್‌ನ ಸುಗಮ ಕಾರ್ಯನಿರ್ವಹಣೆಗೆ ವಿದ್ಯುತ್ ಸಾಮರ್ಥ್ಯ ಸಾಕಾಗುವುದಿಲ್ಲ. ಇದಲ್ಲದೆ, ವೋಲ್ಟೇಜ್ ಕೊರತೆಯಿಂದಾಗಿ ಲಿಫ್ಟ್ ಇದ್ದಕ್ಕಿದ್ದಂತೆ ನಿಲ್ಲುತ್ತದೆ. ಹೀಗಾಗಿ ರೈಲು ನಿಲ್ದಾಣದ ವಿದ್ಯುತ್ ಮಾರ್ಗವನ್ನು ಹೊಸ ಟ್ರಾನ್ಸ್‌ಫಾರ್ಮರ್‌ಗೆ ಬದಲಾಯಿಸಲು ವಿದ್ಯುತ್ ಇಲಾಖೆಗೆ ತಿಳಿಸಲಾಗಿದೆ. ಕೆಎಸ್‌ಇಬಿ ಈ ಕಾಮಗಾರಿಗಳನ್ನು ಪೂರ್ಣಗೊಳಿಸಿದರೆ ಮಾತ್ರ ಲಿಫ್ಟ್ ಕಾರ್ಯನಿರ್ವಹಿಸಬಹುದು ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಇತರ ನಿಲ್ದಾಣಗಳಲ್ಲಿ ಎರಡು ಹೊಸ ಲಿಫ್ಟ್‌ಗಳನ್ನು ಕಳೆದ ಏಪ್ರಿಲ್‌ನಲ್ಲಿ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗ ಲೋಕಾರ್ಪಣೆ ಮಾಡಿತ್ತು.

ರೋಗಿಗಳಿಗೆ ಪ್ರಯೋಜನಕಾರಿ

ಫ್ಲಾೃಟ್‌ಫಾರ್ಮ್‌ಗಳ ನಡುವಿನ ಪಾದಚಾರಿ ಸೇತುವೆಯನ್ನು ಬಳಸಲು ಸಾಧ್ಯವಾಗದ ಅನಾರೋಗ್ಯ ಪೀಡಿತರು ಮತ್ತು ವೃದ್ಧರಿಗೆ ಲಿಫ್ಟ್ ಪ್ರಯೋಜನಕಾರಿಯಾಗಿತ್ತು. ಕಾಸರಗೋಡು ಜಿಲ್ಲೆಯ ಎನ್‌ಎಸ್‌ಜಿ -5 ವರ್ಗದ ನಿಲ್ದಾಣವಾದ ಕುಂಬಳೆಯನ್ನು ಮುಖ್ಯವಾಗಿ ಶೈಕ್ಷಣಿಕ ಉದ್ದೇಶಗಳಿಗಾಗಿ ಮಂಗಳೂರಿಗೆ ಹೋಗುವ ವಿದ್ಯಾರ್ಥಿಗಳು ಮತ್ತು ಚಿಕಿತ್ಸೆಗಾಗಿ ಹೋಗುವ ರೋಗಿಗಳು ಬಳಸುತ್ತಾರೆ. ಲಿಫ್ಟ್ ಕೆಲಸ ಮಾಡದ ಕಾರಣ ಮೆಟ್ಟಿಲು ಹತ್ತಿಕೊಂಡೇ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.

ನೂತನವಾಗಿ ನಿರ್ಮಿಸಿದ ಲಿಫ್ಟ್ ವ್ಯವಸ್ಥೆ ಕೆಲವೇ ದಿನಗಳಲ್ಲಿ ನಿಷ್ಪ್ರಯೋಜನಕಾರಿಯಾಗಿರುವುದು ಬೇಸರ ತರಿಸಿದೆ. ನಿತ್ಯ ಪ್ರಯಾಣಿಸುವ ನೂರಾರು ಪ್ರಯಾಣಿಕರಲ್ಲಿ ಅಶಕ್ತರು, ವೃದ್ಧರು, ಮಹಿಳಾ ಪ್ರಯಾಣಿಕರಿಗೆ ಲಿಫ್ಟ್ ಅನುಕೂಲವಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷೃದಿಂದಾಗಿ ಲಿಫ್ಟ್ ಮೂಲೆಗುಂಪಾಗುವ ಭೀತಿ ಇದೆ. ಕೂಡಲೇ ಕ್ರಮಕ್ಕೆ ಮುಂದಾಗಬೇಕು.

— ರತೀಶ್ ಕುಮಾರ್ ಎ. ನಿತ್ಯ ಪ್ರಯಾಣಿಕ

ಲಿಫ್ಟ್ ನಿರ್ಮಿಸಿದ್ದು ಮೊದಲಿಗೆ ಸಂತಸ ತಂದಿತ್ತು. ಆದರೆ ಬಳಿಕ ನಿಲುಗಡೆಗೊಂಡಿರುವುದು ಯೋಜನಾ ಅನುಷ್ಠಾನದ ಲೋಪ ಎತ್ತಿ ತೋರಿಸಿದೆ. ಅಧಿಕಾರಿಗಳು ವೋಲ್ಟೇಜ್ ಸಾಮರ್ಥ್ಯವನ್ನು ಮೊದಲೇ ಅರಿಯದೇ ಈಗ ಕಾರಣ ಹೇಳುತ್ತಿರುವುದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ರೈಲ್ವೆ ಅಧಿಕಾರಿಗಳಿಗೆ ಮನವಿ ನೀಡಿ ಶೀಘ್ರ ಪರಿಹಾರಕ್ಕೆ ಒತ್ತಾಯಿಸಲಾಗುವುದು.

— ವಸಂತಿ ನಿತ್ಯ ಪ್ರಯಾಣಿಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net