ಕಿನ್ನಿಗೋಳಿ ಹಾಗೂ ಮೂಲ್ಕಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಬಹುಕೋಟಿ ವೆಚ್ಚದ ‘ಅಮೃತ್ 2.0’ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಸಾರ್ವಜನಿಕರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ರಾಜ್ಯ ಹೆದ್ದಾರಿಯ ಉದ್ದಕ್ಕೂ ಅಗೆದಿರುವ ಗುಂಡಿಗಳು ಹಾಗೂ ರಸ್ತೆಯಲ್ಲೇ ರಾಶಿ ಹಾಕಲಾದ ಮಣ್ಣಿನಿಂದಾಗಿ ವಾಹನ ಸವಾರರು ಮತ್ತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಿಲ್ಪಾಡಿ ಪಂಚಾಯಿತಿ ವ್ಯಾಪ್ತಿಯ ಕುಬೆವೂರು ಬಳಿ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಹೆದ್ದಾರಿಯ ತಿರುವುಗಳಲ್ಲೇ ಮಣ್ಣನ್ನು ಅಗೆದು ರಸ್ತೆಯ ಅರ್ಧಭಾಗಕ್ಕೆ ಹರಡಿರುವುದರಿಂದ ಇಡೀ ಪರಿಸರ ಧೂಳುಮಯವಾಗಿದೆ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಕಣ್ಣು ಬಿಡಲಾಗದೆ ಪರದಾಡುವಂತಾಗಿದೆ. ರಸ್ತೆಯ ಮೇಲಿರುವ ಮಣ್ಣಿನಿಂದಾಗಿ ವಾಹನಗಳು ಸ್ಕಿಡ್ ಆಗುವ ಅಪಾಯವಿದ್ದು, ಮಳೆ ಬಂದರೆ ಈ ಭಾಗ ಸಂಪೂರ್ಣ ಕೆಸರುಮಯವಾಗಿ ಸಂಚಾರ ದುಸ್ತರಗೊಳ್ಳಲಿದೆ ಎಂದು ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ
ಕೆಲವೆಡೆ ಪೈಪ್‌ಲೈನ್ ಅಳವಡಿಸಲು ಹೆದ್ದಾರಿಯನ್ನು ಅಗೆದು ಸರಿಯಾಗಿ ಮುಚ್ಚದ ಕಾರಣ ರಸ್ತೆ ಕುಸಿಯುವ ಭೀತಿ ಎದುರಾಗಿದೆ. ಕಳೆದ ಮಳೆಗಾಲದಲ್ಲೂ ಇದೇ ರೀತಿಯ ಸಮಸ್ಯೆ ಎದುರಾದಾಗ ಸ್ಥಳೀಯರು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದರು. ಕಾಮಗಾರಿ ವೇಳೆ ಧೂಳು ನಿಯಂತ್ರಿಸಲು ನೀರು ಸಿಂಪಡಿಸುವುದು ಅಥವಾ ರಾತ್ರಿ ವೇಳೆ ಕೆಲಸ ನಿರ್ವಹಿಸುವ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮೌನಕ್ಕೆ ಶರಣಾಗಿದ್ದಾರೆ ಎಂಬುದು ಸಾರ್ವಜನಿಕರ ದೂರು.
ಹಳೆಯ ಕಹಿ ನೆನಪಿನ ಆತಂಕ
ಮೂಲ್ಕಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಏಳೆಂಟು ವರ್ಷಗಳ ಹಿಂದೆ ನಡೆದ ಪೈಪ್‌ಲೈನ್ ಕಾಮಗಾರಿ ಕೂಡ ಇದೇ ರೀತಿ ಅರ್ಧಕ್ಕೆ ನಿಂತು, ಸಾರ್ವಜನಿಕರ ಹಣ ವ್ಯರ್ಥವಾಗಿತ್ತು. ಈಗಿನ ‘ಅಮೃತ್ 2.0’ ಯೋಜನೆ ಕೂಡ ಅದೇ ಹಾದಿ ಹಿಡಿಯುತ್ತದೆಯೇ ಎಂಬ ಆತಂಕ ನಾಗರಿಕರನ್ನು ಕಾಡುತ್ತಿದೆ. ವರ್ಷದ ಹಿಂದೆ ಆರಂಭವಾದ ಈ ಯೋಜನೆ ಹಲವೆಡೆ ಅವೈಜ್ಞಾನಿಕವಾಗಿ ನಡೆದಿದ್ದು, ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಮಳೆಗಾಲ ಆರಂಭವಾಗುವ ಮೊದಲು ಈ ಕಾಮಗಾರಿ ಮುಗಿಯದಿದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ಈಗಿನಿಂದಲೇ ಮಳೆ ನೀರು ಹರಿಯುವ ತೋಡುಗಳನ್ನೇ ಅಗೆದು ಪೈಪ್ ಹಾಕುತ್ತಿದ್ದಾರೆ. ಇದು ಮಳೆಗಾಲದಲ್ಲಿ ರಸ್ತೆಯ ಮೇಲೆ ನೀರು ನಿಲ್ಲಲು ಕಾರಣವಾಗುತ್ತದೆ.