ಹಿರಿಯಡಕ ಜೋಡಿ ಕೊಲೆ ಪ್ರಕರಣ ಅಪರಾಧಿಗೆ ಜೀವಾವಧಿ ಶಿಕ್ಷೆ

ಹರೀಶ್​ ಆರ್​. ಅಲಿಯಾಸ್​ ಗಣೇಶ್
ಹರೀಶ್​ ಆರ್​. ಅಲಿಯಾಸ್​ ಗಣೇಶ್
Published on
ಉಡುಪಿ: ಹಿರಿಯಡಕ ಪೊಲೀಸ್​ ಠಾಣಾ ವ್ಯಾಪ್ತಿಯ ಆತ್ರಾಡಿ ಮದಗ ಎಂಬಲ್ಲಿ 2022ರಲ್ಲಿ ನಡೆದಿದ್ದ ತಾಯಿ ಮತ್ತು ಮಗಳ ಭೀಕರ ಕೊಲೆ ಪ್ರಕರಣದ ಅಪರಾಧಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಭದ್ರಾವತಿ ತಾಲೂಕಿನ ಜನ್ನಾಪುರದ ಕುರುಬರ ಬೀದಿ ನಿವಾಸಿ ಹರೀಶ್​ ಆರ್​. ಅಲಿಯಾಸ್​ ಗಣೇಶ್​ (30) ಶಿಕ್ಷೆಗೆ ಒಳಗಾದವನು.
ಪ್ರಕರಣದ ಹಿನ್ನೆಲೆ
2022, ಮೇ 8ರಂದು ಆತ್ರಾಡಿ ಮದಗ ನಿವಾಸಿ ಚೆಲುವಿ ಮತ್ತು ಆಕೆಯ 15 ವರ್ಷದ ಮಗಳು ಪ್ರಿಯಾ ಅವರು ರಾತ್ರಿ ತಮ್ಮ ಶೆಡ್​ನಲ್ಲಿ ಮಲಗಿದ್ದಾಗ ಹರೀಶ್​ ಕತ್ತು ಹಿಸುಕಿ ಇಬ್ಬರನ್ನೂ ಹತ್ಯೆ ಮಾಡಿ ಪರಾರಿಯಾಗಿದ್ದ. ಚೆಲುವಿಯ ಫೋನ್​ ಸ್ವಿಚ್​ ಆಫ್​ ಬಂದ ಕಾರಣ, ಆಕೆಯ ತಂಗಿ ದೇವಿ ಮಗನನ್ನು ಕಳುಹಿಸಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ತಾಯಿ ಚೆಲುವಿ ಅವರ ಮೂಗು ಮತ್ತು ಬಾಯಿಯಲ್ಲಿ ರಕ್ತ ಸೋರುತ್ತಿದ್ದರೆ, ಮಗಳು ಪ್ರಿಯಾಳ ಕುತ್ತಿಗೆಯಲ್ಲಿ ಕಪ್ಪು ಬಣ್ಣದ ಗುರುತುಗಳು ಕಂಡುಬಂದಿದ್ದವು. ಈ ಬಗ್ಗೆ ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ ಪ್ರಕರಣದ ತನಿಖೆ ನಡೆಸಿ, ನ್ಯಾಯಲಯಕ್ಕೆ ಆರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ನ್ಯಾಯಾಲಯದ ತೀರ್ಪು
ಸುದೀರ್ಘ ವಿಚಾರಣೆ ನಡೆಸಿದ ಉಡುಪಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು, ಲಭ್ಯವಿರುವ ಸಾಕ್ಷ್ಯಾಧಾರಗಳನ್ನು ಪುರಸ್ಕರಿಸಿ ಆರೋಪಿಯ ಮೇಲಿನ ಅಪರಾಧ ಸಾಬೀತಾಗಿದೆ ಎಂದು ತೀರ್ಪು ನೀಡಿದರು. ಅಪರಾಧಿಗೆ ಜೀವಾವಧಿ ಕಾರಾಗೃಹ ವಾಸದ ಜೊತೆಗೆ 20,000 ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ತೀರ್ಪಿನ ಮೂಲಕ ನಾಲ್ಕು ವರ್ಷದಲ್ಲಿ ತಾಯಿ- -ಮಗಳ ಹತ್ಯೆ ಪ್ರಕರಣಕ್ಕೆ ನ್ಯಾಯ ಸಿಕ್ಕಂತಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net