ಬೆಳ್ತಂಗಡಿ: ಬದುಕು ಮತ್ತು ಬದುಕಲು ಬಿಡು ಎಂಬುದು ಜೈನಧರ್ಮದ ಉದಾತ್ತ ತತ್ವ. ಭಗವಾನ್ ಮಹಾವೀರರು ಬೋಧಿಸಿದ ಅಹಿಂಸೆ, ಅಪರಿಗ್ರಹ ಮತ್ತು ಅನೇಕಾಂತ ತತ್ವಗಳಿಂದ ವಿಶ್ವದ ಸಕಲ ಸಮಸ್ಯೆಗಳನ್ನೂ ಸೌಹಾರ್ದಯುತವಾಗಿ ಪರಿಹರಿಸಿ ಶಾಂತಿ-ಸಾಮರಸ್ಯದ, ಸುಖ-ಶಾಂತಿ, ನೆಮ್ಮದಿಯ ಜೀವನ ಸಾಧ್ಯವಾಗುತ್ತದೆ. ವಿಶ್ವಶಾಂತಿಗಾಗಿ ಅಣುಬಾಂಬ್ ತ್ಯಜಿಸಿ, ಸತ್ಯ, ಅಹಿಂಸೆ, ತ್ಯಾಗ, ಅಪರಿಗ್ರಹ ಮೊದಲಾದ ಅಣುವ್ರತಗಳನ್ನು ಎಲ್ಲರೂ ಪಾಲಿಸಿದಾಗ ವಿಶ್ವಶಾಂತಿ ಸಾಧ್ಯ ಎಂದು ಏಲಾಚಾರ್ಯ ಪ್ರಸಂಗಸಾಗರ ಮುನಿಮಹಾರಾಜರು ಹೇಳಿದರು.
ಬೆಳ್ತಂಗಡಿಯಲ್ಲಿ ಜೈನಪೇಟೆ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಭಗವಾನ್ ಮಹಾವೀರರ 2625ನೇ ಜಯಂತ್ಯುತ್ಸವ ಆಚರಣೆಯಲ್ಲಿ ಮಂಗಲ ಪ್ರವಚನ ನೀಡಿದರು. ಮಹಾವೀರ ಜಯಂತಿ ಆಚರಣೆಯೊಂದಿಗೆ, ಶ್ರದ್ಧಾ-ಭಕ್ತಿಯಿಂದ ದೇವರ ಪೂಜೆ, ಆರಾಧನೆ ಮಾಡಿ, ವ್ರತ-ನಿಯಮಗಳನ್ನು ಪಾಲಿಸಿ, ಸಾಧು-ಸಂತರ ಸೇವೆ ಮಾಡಿದಾಗ ಜೀವನ ಪಾವನವಾಗುತ್ತದೆ ಎಂದರು.
ಆನುವಂಶಿಕ ಆಡಳಿತ ಮೊಕ್ತೇಸರ ಕೆ.ಜಯವರ್ಮರಾಜ ಬಳ್ಳಾಲ್ ಮತ್ತು ಕುಟುಂಬಸ್ಥರನ್ನು ಅಭಿನಂದಿಸಿದರು. ಹೊಂಬುಜ ಜೈನಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ, ತೀರ್ಥಂಕರರು ರಾಗ-ದ್ವೇಷರಹಿತವಾಗಿ ಸಕಲ ಜೀವಿಗಳಿಗೂ ಆತ್ಮಕಲ್ಯಾಣಕ್ಕಾಗಿ ಧರ್ಮೋಪದೇಶ ನೀಡುವ ಧರ್ಮಸಭೆಗೆ ಸಮವಸರಣ ಎನ್ನುತ್ತಾರೆ. ಸಮವಸರಣದಲ್ಲಿ ಸಕಲ ಜೀವಿಗಳಿಗೂ ಉಪದೇಶ ಆಲಿಸಲು ಸಮಾನ ಅವಕಾಶವಿದೆ. ಜೈನರ ಶ್ರದ್ಧಾಕೇಂದ್ರಗಳಾದ ಬಸದಿಗಳು ಸಮವಸರಣದ ಪ್ರತೀಕವಾಗಿವೆ ಎಂದರು.