ಜಗದಗಲಕ್ಕೆ ಪಸರಿಸಲಿ ತುಳು ಸಂಸ್ಕೃತಿ

ಉಬಾರ್ ಕಂಬಳೋತ್ಸವಕ್ಕೆ ಉಪ್ಪಿನಂಗಡಿ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ನಾಕ್ ಚಾಲನೆ ನೀಡಿದರು. ರವೀಂದ್ರ ಶೆಟ್ಟಿ, ಕರುಣಾಕರ ಸುವರ್ಣ, ಅಶೋಕ್ ಕುಮಾರ್ ರೈ ಮತ್ತಿತರರಿದ್ದರು.
ಉಬಾರ್ ಕಂಬಳೋತ್ಸವಕ್ಕೆ ಉಪ್ಪಿನಂಗಡಿ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ನಾಕ್ ಚಾಲನೆ ನೀಡಿದರು. ರವೀಂದ್ರ ಶೆಟ್ಟಿ, ಕರುಣಾಕರ ಸುವರ್ಣ, ಅಶೋಕ್ ಕುಮಾರ್ ರೈ ಮತ್ತಿತರರಿದ್ದರು.
Published on
ಉಪ್ಪಿನಂಗಡಿ: ಕಂಬಳ ತುಳುನಾಡ ಜಾನಪದ ಕ್ರೀಡೆಯಾಗಿದ್ದು, ತುಳುನಾಡ ಜನರ ಕೃಷಿಪ್ರಧಾನ ಬದುಕಿನ ನಂಟಿದೆ ಮತ್ತು ಸೊಬಗಿದೆ. ಕಂಬಳ ಪ್ರೋತ್ಸಾಹಿಸುವ ಮೂಲಕ ನಮ್ಮ ಸಂಸ್ಕೃತಿ-ಸಂಸ್ಕಾರಗಳ ಶ್ರೀಮಂತಿಕೆ ಜಗದಗಲಕ್ಕೆ ಪ್ರಸರಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ನಾಕ್ ತಿಳಿಸಿದರು.
ಉಪ್ಪಿನಂಗಡಿಯ ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿ ಆಯೋಜಿಸಿರುವ 40ನೇ ವರ್ಷದ ಉಬಾರ್ ಕಂಬಳೋತ್ಸವವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಧಾರ್ಮಿಕ ಪರಿಷತ್‌ನ ಸದಸ್ಯೆ ಮಲ್ಲಿಕಾ ಪಕ್ಕಳ ಮಲಾರುಬೀಡು ಮಾತನಾಡಿ, ಕಂಬಳ ತುಳುನಾಡಿನ ರೈತಾಪಿ ವರ್ಗದ ಕ್ರೀಡೆಯಾಗಿದ್ದು, ಕಂಬಳಕ್ಕೂ ಕೃಷಿಕರಿಗೂ ಅವಿನಾಭವ ಸಂಬಂಧವಿದೆ. ಕಂಬಳ ಕೋಣಗಳನ್ನು ಸಾಕುವವರಿಗೂ ಕಂಬಳ ಕೋಣಗಳಿಗೂ ತಾಯಿ-ಮಕ್ಕಳ ಬಾಂಧವ್ಯವಿದೆ. ಆದರೂ ಕಂಬಳವನ್ನು ನಿಲ್ಲಿಸುವ ಪ್ರಯತ್ನಗಳು ನಡೆದಿತ್ತು. ಆಗ ಕಂಬಳ ಸಮಿತಿ, ಕಂಬಳಾಭಿಮಾನಿಗಳ ಹೋರಾಟದೊಂದಿಗೆ ಅಶೋಕ್ ಕುಮಾರ್ ರೈ ಕೂಡಾ ವೈಯಕ್ತಿಕವಾಗಿ ಪೇಟಾದವರ ವಿರುದ್ಧ ಕಾನೂನು ಹೋರಾಟ ನಡೆಸಿದರು. ಅದೆಲ್ಲದರ ಫಲವಾಗಿ ಇಂದು ಕಂಬಳ ನಿರಾಂತಕವಾಗಿ ನಡೆಯುತ್ತಿದೆ ಎಂದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವೀಂದ್ರ ಶೆಟ್ಟಿ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಳ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ ಮಾತನಾಡಿದರು. ಶಾಸಕ, ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ, ಶ್ರೀ ಮಹಿಷಮರ್ದಿನಿ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿರಂಜನ್ ರೈ, ಉಪ್ಪಿನಂಗಡಿ ಗ್ರಾಪಂ ಮಾಜಿ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಅಘೋರ ಟೀಮ್ ಉಬಾರ್‌ನ ಗೌರವಾಧ್ಯಕ್ಷ ಸಂತೋಷ್ ಶೆಟ್ಟಿ, ಪುತ್ತೂರು ಬಂಟರ ಸಂಘ ಮಾಜಿ ಸಂಚಾಲಕ ದಯಾನಂದ ರೈ ಮನವಳಿಕೆ, ಉಪ್ಪಿನಂಗಡಿ ಪೊಲೀಸ್ ಉಪನಿರೀಕ್ಷಕ ಸುತೇಶ್ ಕೆ.ಪಿ., ಪ್ರವೀಣ್ ಕುಮಾರ್, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಸುಮಾ ಅಶೋಕ್ ರೈ, ಶೈಲಜಾ ರಾಜೇಶ್, ಪುತ್ತೂರು ಮಹಿಳಾ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷೆ ಚಂದ್ರಪ್ರಭಾ ಗೌಡ, ಕಂಬಳ ಸಮಿತಿ ಗೌರವಾಧ್ಯಕ್ಷ ಎನ್.ಉಮೇಶ್ ಶೆಣೈ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ, ಉಪಾಧ್ಯಕ್ಷರಾದ ಮುರಳೀಧರ ರೈ, ವಿದ್ಯಾಧರ ಜೈನ್, ರಾಮಚಂದ್ರ ಮಣಿಯಾಣಿ, ದಾಸಪ್ಪ ಗೌಡ, ಸಂಘಟನಾ ಕಾರ್ಯದರ್ಶಿಗಳಾದ ಯೋಗೀಶ್ ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು, ಕೃಷ್ಣಪ್ರಸಾದ್ ಬೊಳ್ಳಾವು, ದಿಲೀಪ್ ಕರಾಯ ಉಪಸ್ಥಿತರಿದ್ದರು.
ಕಂಬಳ ಸಮಿತಿ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ ವಂದಿಸಿದರು. ಬಾಲಕೃಷ್ಣ ಪೂಜಾರಿ ನಿರೂಪಿಸಿದರು. ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಳ ಪ್ರಧಾನ ಅರ್ಚಕ ಹರೀಶ್ ಉಪಾಧ್ಯಾಯ ಧಾರ್ಮಿಕ ವಿಧಿ-ವಿಧಾನ ನೆರವೇರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net