ಹಳ್ಳಿಯ ಕ್ರೀಡೆ ಕಂಬಳ ರಾಷ್ಟ್ರದ ಆಕರ್ಷಣೆಗೆ ಒಳಗಾಗಲಿ

ಉಪ್ಪಿನಂಗಡಿಯ ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿಯಿಂದ ಆಯೋಜನೆಗೊಂಡ ಉಬಾರ್ ಕಂಬಳೋತ್ಸವದ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ವಕೀಲ ಮಹೇಶ್ ಕಜೆ, ಶಾಸಕ, ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ  ಮೊದಲಾದವರಿದ್ದರು.
ಉಪ್ಪಿನಂಗಡಿಯ ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿಯಿಂದ ಆಯೋಜನೆಗೊಂಡ ಉಬಾರ್ ಕಂಬಳೋತ್ಸವದ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ವಕೀಲ ಮಹೇಶ್ ಕಜೆ, ಶಾಸಕ, ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಮೊದಲಾದವರಿದ್ದರು.
Published on
ಉಪ್ಪಿನಂಗಡಿ: ಕಂಬಳವೆನ್ನುವುದು ನಮ್ಮ ಸಂಸ್ಕೃತಿ, ಹೆಮ್ಮೆ ಮತ್ತು ಗೌರವವಾಗಿದೆ. ಹಳ್ಳಿಗೆ ಸೀಮಿತವಾಗಿದ್ದ ಕಂಬಳವನ್ನು ರಾಜ್ಯದಲ್ಲಿ ಈಗಾಗಲೇ ಆಯೋಜನೆ ಮಾಡಲಾಗಿದ್ದು, ಇದು ಮುಂದಕ್ಕೆ ರಾಷ್ಟ್ರದ ಆಕರ್ಷಣೆಗೆ ಒಳಗಾಗುವಂತೆ ಮಾಡಬೇಕಾಗಿದೆ ಎಂದು ವಕೀಲ ಮಹೇಶ್ ಕಜೆ ಹೇಳಿದರು.
ಉಪ್ಪಿನಂಗಡಿಯ ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿಯಿಂದ ಆಯೋಜನೆಗೊಂಡ ಉಬಾರ್ ಕಂಬಳೋತ್ಸವದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಸಕ, ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಸರ್ಕಾರ ಈಗಾಗಲೇ ಕಂಬಳಕ್ಕೆ ಅನುದಾನ ಮಂಜೂರು ಮಾಡಿದ್ದು, ಈ ಭಾಗದ 13 ಜನ ಶಾಸಕರು ರಾಜಕೀಯ ಬಿಟ್ಟು ಒಮ್ಮತದಿಂದ ಕಂಬಳಕ್ಕಾಗಿ ಧ್ವನಿಯೆತ್ತಿದಾಗ ಕಂಬಳಕ್ಕೆ ಎಷ್ಟು ಬೇಕಾದರೂ ಅನುದಾನ ತರಿಸಬಹುದು. ಸರ್ಕಾರಿ ಜಾಗ ಇರುವ ಪ್ರತಿ ಊರಿನಲ್ಲಿಯೂ ಕಂಬಳದ ಕರೆ ನಿರ್ಮಿಸಿ ಕಂಬಳ ನಡೆಸಬಹುದು ಎಂದರು.
ವೇದಿಕೆಯಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯೆ ನಳಿನಿ ಪಿ.ಶೆಟ್ಟಿ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುದರ್ಶನ ನಾಕ್ ಕಂಪ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ನೋಟರಿ ವಕೀಲೆ ಅರುಣಾ ದಿನಕರ್ ರೈ, ಪುಡಾ ಸದಸ್ಯ ನಿಹಾಲ್ ಶೆಟ್ಟಿ, ಸುಮಾ ಅಶೋಕ್ ಕುಮಾರ್ ರೈ ಮತ್ತಿತರರು ಉಪಸ್ಥಿತರಿದ್ದರು.
ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ಸ್ವಾಗತಿಸಿದರು. ಗೌರವ ಸಲಹೆಗಾರ ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ

ಹಗ್ಗ ಹಿರಿಯ ವಿಭಾಗದಲ್ಲಿ 13 ಜೊತೆ ಕೋಣಗಳು ಭಾಗವಹಿಸಿ ನಂದಳಿಕೆ ಶ್ರೀಕಾಂತ್ ಭಟ್ ಬಿ-ಪ್ರಥಮ, ಅವರದೇ ಎ ವಿಭಾಗದ ಕೋಣಗಳು ದ್ವಿತೀಯ ಬಹುಮಾನ ಪಡೆದವು. ಬಂಬ್ರಾಣ ಬೈಲು ವಂದಿತ್ ಶೆಟ್ಟಿ ಕೋಣ ಓಡಿಸಿದರು.
ಹಗ್ಗ ಕಿರಿಯ ವಿಭಾಗದಲ್ಲಿ 18 ಜೊತೆ ಕೋಣಗಳು ಭಾಗವಹಿಸಿದ್ದು, ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ನರಸಿಂಹ ಕೆ.ಶೆಟ್ಟಿ ಬಿ-ಪ್ರಥಮ(ಓಡಿಸಿದವರು: ಮಾಳ ಆದಿಶ್ ಪೂಜಾರಿ), ಅವರದೇ ಎ ವಿಭಾಗದ ಕೋಣಗಳು ದ್ವಿತೀಯ(ಓಡಿಸಿದವರು: ಕಾವೂರು ದೋಟ ಸುದರ್ಶನ್).
ಅಡ್ಡ ಹಲಗೆಯಲ್ಲಿ 8 ಜೊತೆ ಕೋಣಗಳು ಭಾಗವಹಿಸಿದ್ದು, ಇರುವೈಲು ದೊಡ್ಡಗುತ್ತು ಜಗದೀಶ್ ಎಂ.ಶೆಟ್ಟಿ(ಓಡಿಸಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ) ಪ್ರಥಮ ಹಾಗೂ ನಾರಾವಿ ರಕ್ಷಿತ್ ಜೈನ್(ಕೋಣ ಓಡಿಸಿದವರು: ಭಟ್ಕಳ ಹರೀಶ್)ದ್ವಿತೀಯ.
ನೇಗಿಲು ಹಿರಿಯ ವಿಭಾಗದಲ್ಲಿ 18 ಜೊತೆ ಕೋಣಗಳು ಭಾಗವಹಿಸಿ, ಬೆಳುವಾಯಿ ದರೆಗುಡ್ಡೆ ಮನನ್ ಕಾರ್ತಿಕ್ ಪೂಜಾರಿ ಎ ವಿಭಾಗದ ಕೋಣಗಳು-(ಓಡಿಸಿದವರು: ಕುಂದಬಾರಂದಡಿ ಮಾಸ್ತಿಕಟ್ಟೆ ಸ್ವರೂಪ ) ಪ್ರಥಮ, ಜೈ ತುಳುನಾಡ್ ಕಕ್ಯಪದವು ಪುಣ್ಕೆದಡಿ ರೆಹಾನ್ಸ್ ಭಂಡಾರಿ(ಓಡಿಸಿದವರು: ಭಟ್ಕಳ ಶಂಕರ)ದ್ವಿತೀಯ.
ನೇಗಿಲು ಹಿರಿಯ ವಿಭಾಗದಲ್ಲಿ 61 ಜೊತೆ ಕೋಣಗಳು ಭಾಗವಹಿಸಿ, ಎರ್ಮಾಳ್ ಪುಚ್ಟೊಟ್ಟುಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ ಎ(ಕೋಣ ಓಡಿಸಿದವರು: ಕುಂದಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್) ಹಾಗೂ ಶ್ರೀ ಪಂಚಲಿಂಗೇಶ್ವರ ಉರುವಾಲು ನೇಕಾಳುಗುತ್ತು ಸದಾನಂದ ಗೌಡ ಅವರ ಕೋಣಗಳು(ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ) ಪ್ರಥಮ ಬಹುಮಾನ ಪಡೆದವು.
ಕನೆಹಲಗೆ ವಿಭಾಗದಲ್ಲಿ 10 ಜೊತೆ ಕೋಣಗಳು ಭಾಗವಹಿಸಿದ್ದು, ಇಲ್ಲಿ ಯಾವ ಕೋಣಗಳೂ ನಿಶಾನೆಗೆ ನೀರು ಹಾಯಿಸದ ಕಾರಣ 10 ಜೊತೆ ಕೋಣಗಳ ಯಜಮಾನರಿಗೆ ಟ್ರೋಫಿ ನೀಡಿ ಗೌರವಿಸಲಾಯಿತು.

ಪ್ರಾಣಾಪಾಯಕ್ಕೆ ಸಿಲುಕಿದ ಯುವಕನ ರಕ್ಷಣೆ

ಕಂಬಳದ ಕೋಣವೊಂದು ನದಿ ನೀರಿಗೆ ಇಳಿದಿದ್ದು ಅದರೊಂದಿಗೆ ಅದನ್ನು ನಿಯಂತ್ರಿಸುತ್ತಿದ್ದ ಯುವಕನೂ ಎಳೆದೊಯ್ಯಲ್ಪಟ್ಟು ನೀರಿನಲ್ಲಿ ಮುಳುಗಿ ಅಪಾಯಕ್ಕೆ ಸಿಲುಕಿದಾಗ ಕಂಬಳ ಕೋಣಗಳ ಬೇರೆ ತಂಡದೊಂದಿಗೆ ಬಂದಿದ್ದ ರಕ್ಷಿತ್ ಎಂಬ ತರುಣ ನದಿಗೆ ಹಾರಿ ಅಪಾಯದಲ್ಲಿದ್ದ ವ್ಯಕ್ತಿಯನ್ನು ರಕ್ಷಿಸಿ ದಡಕ್ಕೆ ತಂದಿದ್ದರು. ರಕ್ಷಿತ್ ಅವರನ್ನು ಶಾಸಕ ಅಶೋಕ್ ಕುಮಾರ್ ರೈ ಶ್ಲಾಘಿಸಿ ಸನ್ಮಾನಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net