ಅಪಾಯಕಾರಿ ಕಂಬ ತೆರವಾಗಲಿ

 ಮೂಲ್ಕಿ ಉಪ ವಿಭಾಗದ ವಿದ್ಯುತ್ ಗ್ರಾಹಕರ ಕುಂದುಕೊರತೆಗಳ ಸಭೆ ಕಾರ್ನಾಡು ಮೆಸ್ಕಾಂ ಕಚೇರಿಯ ಸಭಾಂಗಣದಲ್ಲಿ ನಡೆಯಿತು. ಮಂಗಳೂರು ಮೆಸ್ಕಾಂ ಇಂಜಿನಿಯರ್ ಅಧೀಕ್ಷಕ ಕೃಷ್ಣರಾಜ, ಕಿಲ್ಪಾಡಿ ಗ್ರಾಪಂ ಮಾಜಿ ಉಪಾಧ್ಯಕ್ಷ ಗೋಪಿನಾಥ ಪಡಂಗ ಮೊದಲಾದವರಿದ್ದರು.
ಮೂಲ್ಕಿ ಉಪ ವಿಭಾಗದ ವಿದ್ಯುತ್ ಗ್ರಾಹಕರ ಕುಂದುಕೊರತೆಗಳ ಸಭೆ ಕಾರ್ನಾಡು ಮೆಸ್ಕಾಂ ಕಚೇರಿಯ ಸಭಾಂಗಣದಲ್ಲಿ ನಡೆಯಿತು. ಮಂಗಳೂರು ಮೆಸ್ಕಾಂ ಇಂಜಿನಿಯರ್ ಅಧೀಕ್ಷಕ ಕೃಷ್ಣರಾಜ, ಕಿಲ್ಪಾಡಿ ಗ್ರಾಪಂ ಮಾಜಿ ಉಪಾಧ್ಯಕ್ಷ ಗೋಪಿನಾಥ ಪಡಂಗ ಮೊದಲಾದವರಿದ್ದರು.
Published on

ಮೂಲ್ಕಿ: ಮಂಗಳೂರು ವಿದ್ಯುತ್ ಶಕ್ತಿ ಸರಬರಾಜು ಕಂಪನಿಯ ಮೂಲ್ಕಿ ಉಪವಿಭಾಗದ ವಿದ್ಯುತ್ ಗ್ರಾಹಕರ ಕುಂದುಕೊರತೆಗಳ ಸಭೆ ಕಾರ್ನಾಡು ಮೆಸ್ಕಾಂ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆಯಿತು.

ಪಡುಪಣಂಬೂರು ಗ್ರಾಪಂ ವ್ಯಾಪ್ತಿಯ ಬೆಳ್ಳಾಯರು ಮಾಂಟ್ರಾಡಿ, ಬೆಳ್ಳಾಯರು ಎಸ್‌ಸಿ ಕಾಲನಿಯಲ್ಲಿ ವಿದ್ಯುತ್ ಕಂಬ ಅಪಾಯಕಾರಿಯಾಗಿ ವಾಲಿದ ಸ್ಥಿತಿಯಲ್ಲಿದ್ದು, ಕೂಡಲೇ ತೆರವುಗೊಳಿಸಬೇಕು ಹಾಗೂ ಕೆರೆಕಾಡು ಘನತ್ಯಾಜ್ಯ ಘಟಕದ ಬಳಿ ಟ್ರಾನ್ಸ್‌ಫಾರ್ಮರ್‌ನಲ್ಲಿ ಸಮಸ್ಯೆ ಇರುವುದನ್ನು ನಿವಾರಿಸಬೇಕು ಎಂದು ಪಡುಪಣಂಬೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು ಆಗ್ರಹಿಸಿದರು.
ಮಂಗಳೂರು ಮೆಸ್ಕಾಂ ಇಂಜಿನಿಯರ್ ಅಧೀಕ್ಷಕ ಕೃಷ್ಣರಾಜ ಮಾತನಾಡಿ, ಗಾಳಿ ಮಳೆಗೆ ತಾಲೂಕು ವ್ಯಾಪ್ತಿಯ ಹಳೆಯಂಗಡಿ, ಮೂಲ್ಕಿ, ಕಿನ್ನಿಗೋಳಿ ಮೆಸ್ಕಾಂ ವ್ಯಾಪ್ತಿಯಲ್ಲಿ 201 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, 24 ಲಕ್ಷ ರೂ.ನಷ್ಟ ಸಂಭವಿಸಿದೆ ಎಂದರು.
ಕುಡಿಯುವ ನೀರಿನ ಜೆಜೆಎಂಗೆ ಜಿಲ್ಲಾ ವ್ಯಾಪ್ತಿಯಲ್ಲಿ ಮೆಸ್ಕಾಂನಿಂದ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದರು.
ಕಿನ್ನಿಗೋಳಿ ಮೆಸ್ಕಾಂನ ಎಳತ್ತೂರು ಫೀಡರ್‌ನಲ್ಲಿ ಪ್ರತಿ ಬಾರಿ ತಾಂತ್ರಿಕ ದೋಷ ಕಾಣುತ್ತಿದ್ದು ದುರಸ್ತಿಪಡಿಸಬೇಕು ಹಾಗೂ ಕೊಲ್ಲೂರು ಬಹುಗ್ರಾಮ ನೀರಿನ ಯೋಜನೆಯಿಂದ ನೀರು ಸರಬರಾಜಾಗುವ ದಿನಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ ಎಂದು ಕಿನ್ನಿಗೋಳಿ ಗ್ರಾಪಂ ಮಾಜೀ ಸದಸ್ಯ ಚಂದ್ರಶೇಖರ್ ಗೋಳಿಜೋರಾ ಹೇಳಿದರು.
ಮೂಲ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾರಿದೀಪ ಉರಿಯುತ್ತಿಲ್ಲ, ಟೋಲ್ ಕಟ್ಟಿದರೂ ಮೂಲಸೌಕರ್ಯಗಳನ್ನು ಒದಗಿಸಲು ಹೆದ್ದಾರಿ ಇಲಾಖೆ ನಿರ್ಲಕ್ಷೃ ವಹಿಸಿದೆ ಎಂದು ಗ್ರಾಹಕರೊಬ್ಬರು ದೂರಿದರು.

ಮೆಸ್ಕಾಂ ಸಲಹಾ ಸಮಿತಿ ಸದಸ್ಯ ಧರ್ಮಾನಂದ ಶೆಟ್ಟಿಗಾರ್, ಕಾರ್ಯನಿರ್ವಾಹಕ ಇಂಜಿನಿಯರ್ ಅಭಿಷೇಕ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಕೃಷ್ಣ ಐತಾಳ, ಎಇ ಟೆಕ್ನಿಕಲ್ ಉಪೇಂದ್ರ ಮತ್ತಿತರರು ಉಪಸ್ಥಿತರಿದ್ದರು.

ಅವ್ಯವಹಾರ ನಡೆದಿದ್ದರೆ ತನಿಖೆ

ಮೂಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಗೃಹಜ್ಯೋತಿಯಲ್ಲಿ ಅವ್ಯವಹಾರ ನಡೆದಿದ್ದರೆ ತನಿಖೆ ನಡೆಸುತ್ತೇವೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆಲ್ವಿನ್ ಪಕ್ಷಿಕೆರೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕಿನ್ನಿಗೋಳಿ ಮೆಸ್ಕಾಂನಲ್ಲಿ ಸಬ್ ಡಿವಿಜನ್ ಬೇಕು ಎಂದು ಗ್ರಾಮಸ್ಥ ಬಾಲಕೃಷ್ಣ ಶೆಟ್ಟಿಗಾರ್ ಆಗ್ರಹಿಸಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೃಷ್ಣರಾಜ್ ಇಲಾಖೆಗೆ ಸೂಚನೆ ನೀಡಿದರು.

ಸರ್ಕಾರಿ ಜಾಗದಲ್ಲಿ ಲೇಔಟ್

ಮೂಲ್ಕಿ ರೈಲ್ವೆ ನಿಲ್ದಾಣ ಬಳಿ ಸರ್ಕಾರಿ ಜಾಗ ಅತಿಕ್ರಮಣ ನಡೆಸಿ ಲೇಔಟ್ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ನಡೆಯುವ ಸ್ಥಳ ಬೆಳ್ಳಾಯರು ಹಾಗೂ ಕಿಲ್ಪಾಡಿ ಗ್ರಾಮಕ್ಕೆ ಸೇರುತ್ತಿದ್ದು ಯಾವುದೇ ಕಾರಣಕ್ಕೂ ಪರಿಶೀಲನೆ ನಡೆಸದೆ ವಿದ್ಯುತ್ ಸಂಪರ್ಕ ನೀಡಬಾರದು ಎಂದು ವಿನೋದ್ ಸಾಲ್ಯಾನ್ ಬೆಳ್ಳಾಯರು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net