ನಿರ್ಮಾಣಗೊಂಡ ಒಂದೇ ವರ್ಷದಲ್ಲಿ ರಸ್ತೆ ಕುಸಿತ

ಅಡ್ಕ-ಮುಳ್ಳೇರಿಯ ರಸ್ತೆಯ ಅವ್ಯವಸ್ಥೆ
ಅಡ್ಕ-ಮುಳ್ಳೇರಿಯ ರಸ್ತೆಯ ಅವ್ಯವಸ್ಥೆ
Published on
ಮುಳ್ಳೇರಿಯ: ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ರಸ್ತೆಯೊಂದು ಕಳಪೆ ಕಾಮಗಾರಿಯಿಂದಾಗಿ ನಿರ್ಮಾಣಗೊಂಡ ಒಂದೇ ವರ್ಷದಲ್ಲಿ ಕುಸಿಯಲಾರಂಭಿಸಿದೆ. ಕಾಮಗಾರಿ ನಡೆಸುವಾಗಲೇ ಸ್ಥಳೀಯರು ಹಾಗೂ ಸಾರ್ವಜನಿಕರು ರಸ್ತೆಯ ಲೋಪದೋಷಗಳ ಬಗ್ಗೆ ಗಮನಕ್ಕೆ ತಂದರೂ ನಿರ್ಲಕ್ಷೃ ವಹಿಸಿದ ಪರಿಣಾಮ ಇಂದು ವಿವಿಧ ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಮುಳ್ಳೇರಿಯ ಪೈಕ ರಸ್ತೆಯ ನೀರೋಳಿಪಾರದಿಂದ ಅಡ್ಕ ಮೂಲಕ ಮುಳ್ಳೇರಿಯಕ್ಕೆ ಸಾಗುವ ರಸ್ತೆಯನ್ನು 2.61 ಕೋಟಿ ರೂ. ವೆಚ್ಚದಲ್ಲಿ ಕಳೆದ ವರ್ಷ ಕೇಂದ್ರದ ಗ್ರಾಮೀಣ ಸಡಕ್ ಯೋಜನೆಯಲ್ಲಿ ನಿರ್ಮಿಸಲಾಗಿತ್ತು. ಮುಂಡೋಳು ಜಂಕ್ಷನ್‌ನಿಂದ ಮುಳ್ಳೇರಿಯ ಪಾರ್ಥಕೊಚ್ಚಿವರೆಗಿನ 3 ಕಿ.ಮೀ. ರಸ್ತೆಯನ್ನು ಜರ್ಮನ್ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ. ಆದರೆ ಕಾಮಗಾರಿ ಕಳಪೆಯಾದ್ದರಿಂದ ಮುಳ್ಳೇರಿಯ ಬಳಿಯ ತೋಟದ ಬದಿಯಲ್ಲಿರುವ ನೀರಿನ ಟ್ಯಾಂಕ್ ಬಳಿ ರಸ್ತೆ ಬದಿ ಕುಸಿಯಲಾರಂಭಿಸಿದೆ.
ಕಳೆದ ಮೂರು ದಿನಗಳ ಹಿಂದೆ ಇಲ್ಲಿ ಮಣ್ಣು ಕುಸಿದು ಬಿದ್ದಿದ್ದು, ರಸ್ತೆಯ ಬದಿ ಸುರಕ್ಷತೆಗಾಗಿ ಹಾಕಿದ ಗುರುತು ಕಲ್ಲುಗಳು ಕೂಡಾ ಮಣ್ಣಿನಡಿ ಸೇರಿವೆ. ಅಲ್ಲದೆ ಸೇತುವೆ ಬಳಿಯಲ್ಲಿ ಡಾಂಬರು ಕಿತ್ತು ಹೋಗಿ ರಸ್ತೆಯಲ್ಲಿ ಹೊಂಡ ಸೃಷ್ಟಿಯಾಗಿದೆ. ಕೆಲವು ಕಡೆ ರಸ್ತೆ ಕುಸಿದು ಬಿರುಕು ಬಿಟ್ಟಿದೆ. 15 ವರ್ಷದವರೆಗೆ ಯಾವುದೇ ಹಾನಿ ಉಂಟಾಗದೆಂದು ಹೇಳಲಾಗುತ್ತಿದ್ದ ಈ ರಸ್ತೆ ಒಂದೇ ವರ್ಷದಲ್ಲಿ ಸಮಸ್ಯೆಗಳನ್ನು ಸೃಷ್ಟಿಸಿರುವುದು ಕಾಮಗಾರಿಯ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.

ಜಿಲ್ಲಾಧಿಕಾರಿಗೆ ಮನವಿ ನೀಡಲು ನಿರ್ಧಾರ

ರಸ್ತೆ ಬದಿಯಲ್ಲಿ ಚರಂಡಿ ಕೂಡಾ ಸರಿಯಾಗಿ ನಿರ್ಮಿಸದ ಕಾರಣ ಮಳೆ ನೀರು ರಸ್ತೆಯಲ್ಲೇ ಹರಿದು ರಸ್ತೆ ಕುಸಿಯುತ್ತಿದೆ. ಇರುವ ಚರಂಡಿ ಕೂಡಾ ಮುಚ್ಚಲ್ಪಟ್ಟಿದ್ದು ಹೂಳು, ಗಿಡಗಂಟಿ ತೆರವು ಕಾರ್ಯ ನಡೆಸಿಲ್ಲ. ಮುಳ್ಳೇರಿಯ ಪೇಟೆ ಬಳಿಯ ಕಾಡಗಂ ಸಹಕಾರಿ ಬ್ಯಾಂಕ್ ಮುಂಭಾಗದಲ್ಲೂ ಚರಂಡಿ ಇಲ್ಲದೆ ರಸ್ತೆಗೆ ಹಾನಿಯಾಗುತ್ತಿದೆ. ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳು ಸಡಕ್ ಕಚೇರಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಪಂಚಾಯಿತಿ ಅಧಿಕಾರಿಗಳು ದೂರುತ್ತಾರೆ. ಕಾಮಗಾರಿ ನಡೆಸಿದ ಗುತ್ತಿಗೆದಾರನಿಗೆ ಫೋನ್ ಮಾಡಿದರೂ ಸ್ವೀಕರಿಸುವುದಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ನೀಡಲು ತೀರ್ಮಾನಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
*(ಪೋಟೋ ಬಿಡಿಎಕ_07 ಜುಲೈ_07(1)
ಅಡ್ಕ-ಮುಳ್ಳೇರಿಯ ರಸ್ತೆಯ ಅವ್ಯವಸ್ಥೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net