

ಪಡುಬಿದ್ರಿ: ಕಾಪು ತಾಲೂಕು ಬೆಳಪು ಗ್ರಾಮದ ಪಣಿಯೂರು ಜಂಕ್ಷನ್ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಚಿರತೆ ಅಡ್ಡಾಡಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಆ ದಾರಿಯಲ್ಲಿ ಸಾಗುತ್ತಿರುವ ವಾಹನವೊಂದರಿಂದ ಚಿರತೆ ಸಂಚಾರದ ಚಿತ್ರ ಸೆರೆಹಿಡಿಯಲಾಗಿದ್ದು, ಭಾನುವಾರ ಮುಂಜಾನೆಯಿಂದಲೇ ಸಾಮಾಜಿಕ ಜಾಲತಾಣವಲ್ಲದೆ ಕೆಲ ಮಂದಿಯ ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿಯೂ ಹರಿದಾಡುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ವಿಚಾರಿಸಿದರೂ ಸತ್ಯಾಸತ್ಯತೆ ಪರಿಶೀಲನೆ ಇನ್ನಷ್ಟೇ ಆಗಬೇಕೆಂದು ಉತ್ತರಿಸಿದ್ದಾರೆ. ಕೆಲ ದಿನಗಳ ಹಿಂದೆ ಎಲ್ಲೂರು, ಮುದರಂಗಡಿ ಚಿರತೆ ಅಡ್ಡಾಡುತ್ತಿರುವುದನ್ನು ಜನರು ಗಮನಿಸಿದ್ದು, ಇದೀಗ ಪಣಿಯೂರಿನಲ್ಲಿ ಪ್ರತ್ಯಕ್ಷವಾಗಿರುವ ಬಗ್ಗೆ ಜನರಲ್ಲಿ ಇನ್ನಷ್ಟು ಭಯ ಮೂಡಿಸಿದೆ.
ಎಲ್ಲೂರು ಮತ್ತು ಮುದರಂಗಡಿ ಭಾಗದಲ್ಲಿ ಚಿರತೆ ಸಂಚಾರ ಬಗ್ಗೆ ದೂರುಗಳು ಬರುತ್ತಿದ್ದಂತೆ ಅರಣ್ಯ ಇಲಾಖೆಯಿಂದ ಅದನ್ನು ಹಿಡಿಯಲು ಪ್ರಯತ್ನಗಳು ಸಾಗಿವೆ. ಈ ನಡುವೆ ಕೆಲ ದುಷ್ಕರ್ಮಿಗಳು ಎಐ ತಂತ್ರಜ್ಞಾನ ಬಳಸಿ ಚಿರತೆ ಸಂಚಾರದ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿರುವ ಪ್ರಸಂಗಗಳು ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಪಣಿಯೂರಿನಲ್ಲಿನ ಚಿತ್ರವೂ ಅಸಲಿಯೋ ನಕಲಿಯೋ ಎಂಬುವುದನ್ನು ಪತ್ತೆ ಹಚ್ಚುವಲ್ಲಿ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.