ಮುಳ್ಳೇರಿಯ: ಮುಳ್ಳೇರಿಯ ಸಮೀಪದ ಆಲಂತಡ್ಕ ಪರಿಸರದಲ್ಲಿ ಚಿರತೆ ಸಂಚರಿಸುವುದು ಅರಣ್ಯ ಇಲಾಖೆ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದ್ದು, ಈ ಭಾಗದ ಜನರಲ್ಲಿ ಭೀತಿ ಸೃಷ್ಟಿಸಿದೆ. ಕಳೆದ ಒಂದು ವಾರದಲ್ಲಿ ಹಲವು ಮನೆಗಳ ಸಾಕುನಾಯಿಗಳನ್ನು ಚಿರತೆ ಹೊತ್ತೊಯ್ದಿದ್ದು ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಚಿರತೆ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಆಲಂತಡ್ಕದಲ್ಲಿ ಸ್ಥಳೀಯರ ಸಭೆ ನಡೆಸಿ ಚಿರತೆ ಭೀತಿ ದೂರ ಮಾಡಲು ಹಾಗೂ ಹಿಡಿಯಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.
ಪರಿಸರದಲ್ಲಿ ಅರಣ್ಯ ಪಾಲಕರ ಗಸ್ತು ವ್ಯವಸ್ಥೆ, ಕ್ಯಾಮರಾಗಳಲ್ಲಿ ಪತ್ತೆಯಾದ ಚಿರತೆಯ ಚಲನವಲನವನ್ನು ಆಧರಿಸಿ ಬೋನು ಅಳವಡಿಸಲಾಗುವುದು. ಮುಂಜಾಗ್ರತಾ ಕ್ರಮವಾಗಿ ಸಂಜೆ ಬಳಿಕ ಅನಗತ್ಯವಾಗಿ ಹೊರಗೆ ಬರುವುದನ್ನು ಕಡಿಮೆ ಮಾಡಬೇಕು ಹಾಗೂ ಸಾಕುಪ್ರಾಣಿಗಳನ್ನು ಸುರಕ್ಷಿತವಾಗಿ ಕಟ್ಟಿ ಹಾಕುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸಲಹೆ ನೀಡಿದರು.
ಕಾರಡ್ಕ ಪಂಚಾಯಿತಿ ಅಧ್ಯಕ್ಷೆ ಎಂ.ಜನನಿ, ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ವಸಂತಿ, ಎ.ಸವಿತಾ ಕುಮಾರಿ, ವಿಜಯ್ ಕುಮಾರ್, ಅರಣ್ಯ ಇಲಾಖೆಯ ರೇಂಜ್ ಅಧಿಕಾರಿ ಸಿ.ವಿ.ವಿನೋದ್ ಕುಮಾರ್, ಉಪ ರೇಂಜ್ ಅಧಿಕಾರಿ ಎನ್.ವಿ.ಸತ್ಯನ್, ಸೆಕ್ಷನ್ ಅರಣ್ಯಾಧಿಕಾರಿ ಕೆ.ಎ.ಬಾಬು ಉಪಸ್ಥಿತರಿದ್ದರು.