

ಪಡುಬಿದ್ರಿ: ಮುದರಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊಸರ್ಮದಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಚಿರತೆ ಕಂಡು ಬಂದಿದ್ದು, ಪ್ರದೇಶದ ಜನರಲ್ಲಿ ಆತಂಕ ಸೃಷ್ಟಿಸಿದೆ. ಈ ಪ್ರದೇಶದ ಮನೆಯೊಂದರ ಆವರಣಗೋಡೆ ಹಾರಿ ಸಾಕುನಾಯಿಯನ್ನು ಚಿರತೆ ಹೊತ್ತೊಯ್ದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಚಿರತೆ ಹಾವಳಿಯಿಂದ ಭಯಭೀತರಾಗಿರುವ ಜನರು ಬೋನು ಇಡಲು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಕೆಲಸಮಯದ ಹಿಂದೆ ಎಲ್ಲೂರು ಗ್ರಾಮದಲ್ಲಿ ಚಿರತೆ ಸಂಚಾರ ಕಂಡು ಬಂದಿತ್ತು.
ಪಡುಬಿದ್ರಿ: ಚಿನ್ನ ಹಾಗೂ ಶೈಕ್ಷಣಿಕ ದಾಖಲೆಗಳನ್ನು ನೀಡದೆ ಹಣಕ್ಕೆ ಬೇಡಿಕೆಯಿಟ್ಟು ಕಿರುಕುಳ ನೀಡುತ್ತಿರುವ ಬಗ್ಗೆ ಕಾಪುವಿನ ರೂಹಿ ಪರ್ವಿನ್ ಎಂಬುವರು ಪತಿ ಹಾಗೂ ಅವರ ಮನೆಯವರ ವಿರುದ್ಧ ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರೂಹಿ ಉದ್ಯಾವರದ ಬಿಲಾಲ್ ಸೈಯದ್ ಮೊಹಮ್ಮದ್ನೊಂದಿಗೆ ಮದುವೆಯಾಗಿದ್ದು, ಅ ಸಮಯದಲ್ಲಿ ತವರು ಮನೆಯವರಿಂದ 52 ಪವನ್ ಚಿನ್ನ ಹಾಕಿದ್ದರು. ಉದ್ಯಾವರದಲ್ಲಿರುವ ಗಂಡನ ಮನೆಯಲ್ಲಿ ಅತ್ತೆ, ನಾದಿನಿ, ಆಕೆಯ ಗಂಡ ಮದುವೆಯಾದ ದಿನದಿಂದಲೇ ಕಿರುಕುಳ ನೀಡಲು ಪ್ರಾರಂಭಿಸಿದ್ದು, ಅಬುಧಾಬಿಯಲ್ಲಿದ್ದಾಗಲೂ ಪತಿ ತನ್ನೊಂದಿಗೆ ಇರುತ್ತಿರಲಿಲ್ಲ.ಇದನ್ನು ಮನೆಯವರ ಸಮ್ಮುಖದಲ್ಲಿ ಪ್ರಶ್ನಿಸಿದಾಗ ಗಂಡ ಹಲ್ಲೆ ಮಾಡಿ ಕೊಲ್ಲಲು ಪ್ರಯತ್ನಿಸಿದ್ದರು. ತನ್ನ 70 ಪವನ್ ಚಿನ್ನವನ್ನು ತಮ್ಮಿಬ್ಬರ ಜಂಟಿ ಖಾತೆಯ ಬ್ಯಾಂಕ್ ಲಾಕರ್ನಲ್ಲಿ ಇಟ್ಟಿದ್ದು, ಊರಿಗೆ ಬಂದಿದ್ದ ಬಿಲಾಲ್ 2026 ಜೂನ್ 9ರಂದು ತನಗೆ ತಿಳಿಸದೆ ಲಾಕರಿನಲ್ಲಿದ್ದ ಎಲ್ಲ ಚಿನ್ನವನ್ನು ತೆಗೆದುಕೊಂಡಿದ್ದರು. ಚಿನ್ನ ಕೇಳಿದಾಗ ಹಿಂಸೆ ನೀಡಿದ್ದರು. ಈ ನಡುವೆ ಅವರಿಗೆ ಬೇರೆ ಮದುವೆ ವಾಡುವ ಸಲುವಾಗಿ ಖುಲಾನಮಕ್ಕೆ ಸಹಿ ವಾಡುವಂತೆ ಒತ್ತಾಯಿಸಿ ತಲಾಕ್ ನೀಡುವುದಾಗಿ ಬೆದರಿಕೆ ಹಾಕಿದ್ದರು. ಪತಿಯ ತಂದೆಯ ಅಣ್ಣನ ಮಗಳು ಶವಾ ಚಿನ್ನವನ್ನು ಕೊಡಬೇಡಿ, ಗಂಡ ಬೇಕಾದರೆ 30 ಲಕ್ಷ ರೂ. ತರಬೇಕು. ಇಲ್ಲದಿದ್ದರೆ ನಾವು ಆತನಿಗೆ ಬೇರೆ ಮದುವೆ ವಾಡುತ್ತೇವೆ ಎಂದು ಬೇಡಿಕೆ ಇಟ್ಟಿರುತ್ತಾರೆ. ತನ್ನ ಎಲ್ಲ ವೈಯಕ್ತಿಕ ಹಾಗೂ ಶೈಕ್ಷಣಿಕ ದಾಖಲೆಗಳು ಅಬುಧಾಬಿಯಲ್ಲಿದ್ದು, ಅದನ್ನು ನೀಡದೆ ಸತಾಯಿಸುತ್ತಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಪಡುಬಿದ್ರಿ: ಹೆಜವಾಡಿ ಗ್ರಾಮದ ವಿಶ್ವನಾಥ್(48) ಎಂಬುವರು ಅ.30ರಂದು ಮನೆ ಬಿಟ್ಟು ಹೋದವರು ನಾಪತ್ತೆಯಾಗಿರುವ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹುಟ್ಟಿನಿಂದಲೂ ಬುದ್ಧಿಮಾಂದ್ಯನಾಗಿರುವ ಅವರು ಮನೆಯಲ್ಲಿಯೇ ವಾಸವಾಗಿದ್ದು, ಮೂಲ್ಕಿಯ ಬಪ್ಪನಾಡು ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟು ಹೋಗಿದ್ದು, ವಾಪಸು ಮನೆಗೆ ಬಂದಿರುವುದಿಲ್ಲ. ಎಲ್ಲ ಕಡೆ ಹುಡುಕಾಡಿದ್ದು, ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿರುವುದಾಗಿ ಅವರ ಸಹೋದರ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.