ಉಡುಪಿ: ಕುಂತಲನಗರದ ದೇವಳಗುಜ್ಜಿ ಎಂಬಲ್ಲಿ ಅರಣ್ಯ ಇಲಾಖೆಯವರು ಇಟ್ಟಿದ್ದ ಪಂಜರದಲ್ಲಿ ಚಿರತೆಯೊಂದು ರವಿವಾರ (ಫೆ.22) ನಸುಕಿನಲ್ಲಿ ಸೆರೆಯಾಗಿದೆ.
ದೇವಳಗುಜ್ಜಿ ಪರಿಸರದಲ್ಲಿ ಎರಡು ವಾರದ ಹಿಂದೆ ಚಿರತೆಯೊಂದು ಓಡಾಡುತ್ತಿದೆ ಎಂಬ ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಕಳೆದ ವಾರ ಚಿರತೆ ಸೆರೆಗಾಗಿ ಬೋನು ಅಳವಡಿಸಿದ್ದರು. ರವಿವಾರ ಬೆಳಗ್ಗೆ ಆಹಾರ ಅರಸುತ್ತ ಬಂದ ಚಿರತೆ ಸೆರೆಯಾಗಿದೆ. ಅದನ್ನು ಕಂಡು ಸ್ಥಳೀಯರು ಉಡುಪಿ ವಲಯ ಅರಣ್ಯ ಇಲಾಖೆ ಅಧಿಕಾರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಸ್ಥಳೀಯರ ಸಹಕಾರದಲ್ಲಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಅಭಯಾರಣ್ಯಕ್ಕೆ ಬಿಟ್ಟರು. ಸೆರೆಯಾದ ಹೆಣ್ಣು ಚಿರತೆಗೆ ಅಂದಾಜು 3 ವರ್ಷವಾಗಿದ್ದು, ವೈದ್ಯಾಧಿಕಾರಿಗಳು ತಪಾಸಣೆ ನಡೆಸಿದ ಬಳಿಕ ಅಭಯಾರಣ್ಯದಲ್ಲಿ ಬಿಡಲಾಗಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಉಡುಪಿ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಮೊಹಮ್ಮದ್ ಜುನೇದ್ ಅಖ್ತರ್, ಶಿವಾನಂದ್, ಗಸ್ತು ಅರಣ್ಯ ಪಾಲಕ ಶ್ರೀನಿವಾಸ್ ಜೋಗಿ ಹಾಗೂ ಅಕ್ಷಯ ಶೇಟ್ ಪಾಲ್ಗೊಂಡಿದ್ದರು.