ಉಡುಪಿ: ಹಲವು ಆಧುನಿಕ ಕಲಾಪ್ರಕಾರಗಳ ಅಬ್ಬರದ ನಡುವೆಯೂ ಯಕ್ಷಗಾನದ ಶ್ರೇಷ್ಠತೆ ಸ್ವಲ್ಪವೂ ಕಡಿಮೆಯಾಗಿಲ್ಲ. ಸಾಲಿಗ್ರಾಮವು ನರಸಿಂಹ ದೇವರ ಸನ್ನಿಧಾನವಾಗಿದ್ದು ಪ್ರಹ್ಲಾದ ಸ್ವರೂಪಿ ವಿದ್ಯಾರ್ಥಿಗಳಿಗೆ ಆತನ ಶ್ರೀರಕ್ಷೆ ಇರಲಿದೆ. ಮಕ್ಕಳು ಯಕ್ಷಗಾನ ಕಲಿತರೆ ಪುರಾಣ ಜ್ಞಾನ ಸುಲಭವಾಗಿ ಲಭಿಸುತ್ತದೆ. ಅವರಲ್ಲಿ ಭಾಷಾ ಕೌಶಲ, ಆತ್ಮಸ್ಥೈರ್ಯ ಬೆಳೆಸುವಲ್ಲಿಯೂ ಸಹಕಾರಿ ಎಂದು ಸಾಲಿಗ್ರಾಮ ದೇವಳದ ಆಡಳಿತ ಸಮಿತಿಯ ಅಧ್ಯಕ್ಷ ಡಾ. ಕೆ.ಎಸ್. ಕಾರಂತ ತಿಳಿಸಿದರು.
ಸಾಲಿಗ್ರಾಮದ ಗುರು ನರಸಿಂಹ ದೇವಳದ ಸಹಯೋಗದಲ್ಲಿ ಅಲ್ಲಿನ ವಠಾರದಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ಉಡುಪಿ ವತಿಯಿಂದ ಸೋಮವಾರ ರಾತ್ರಿ (ಡಿ.15) ಆಯೋಜಿಸಿದ್ದ ಕುಂದಾಪುರ ತಾಲೂಕಿನ ಎಂಟು ಶಾಲೆಗಳ ವಿದ್ಯಾರ್ಥಿಗಳಿಂದ ನಡೆದ 'ಕಿಶೋರ ಯಕ್ಷಗಾನ ಸಂಭ್ರಮ-2025' ಅಭಿಯಾನದ ಪ್ರದರ್ಶಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಬಹು ಮೇಳಗಳ ಯಜಮಾನ ಪಿ.ಕಿಶನ್ ಹೆಗ್ಡೆ ಎಲ್ಲ ಕಲಾವಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ತೆಕ್ಕಟ್ಟೆ ಯಶಸ್ವಿ ಕಲಾವೃಂದದ ಕಾರ್ಯದರ್ಶಿ ವೆಂಕಟೇಶ ವೈದ್ಯ, ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಸುಜಯೀಂದ್ರ ಹಂದೆ, ಶಿಕ್ಷಕ ಸಹಕಾರಿ ಬ್ಯಾಂಕ್ನ ಪ್ರಬಂಧಕ ಕೆ.ಸಂತೋಷಕುಮಾರ ಶೆಟ್ಟಿ, ಯಕ್ಷದೇಗುಲದ ಸುದರ್ಶನ ಉರಾಳ, ಟ್ರಸ್ಟ್ನ ಕೋಶಾಧಿಕಾರಿ ಗಣೇಶ್ ಬ್ರಹ್ಮಾವರ, ಕಲಾರಂಗದ ಡಾ. ರಾಜೇಶ್ ನಾವುಡ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಅರುಷ್, ಉನ್ನತಿ, ಸೃಷ್ಟಿ, ಭರತ್ ಇತರರು ಯಕ್ಷಶಿಕ್ಷಣದಿಂದ ಲಭಿಸಿದ ಅವಿಸ್ಮರಣಿಯ ಅನುಭವ ಹಂಚಿಕೊಂಡರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ್ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಮೊದಲು ವಡ್ಡರ್ಸೆಯ ಶ್ರೀ ನಾರಾಯಣ ಗುರು ವಸತಿ ಶಾಲೆಯ ವಿದ್ಯಾರ್ಥಿಗಳಿಂದ 'ಸೂರ್ಯ ರತ್ನ' ಯಕ್ಷಗಾನ ಹಾಗೂ ವಿವೇಕ ಪದವಿ ಪೂರ್ವ ಕಾಲೇಜಿನ ಬಾಲಕರ ವಿಭಾಗದಿಂದ 'ತಾಮ್ರಧ್ವಜ ಕಾಳಗ' ಪ್ರಸಂಗ ಪ್ರದರ್ಶನಗೊಂಡಿತು.
"
ಕುಂದಾಪುರದ ಶಾಸಕ ಕಿರಣಕುಮಾರ್ ಕೊಡಗಿ ಅವರು ಕ್ಷೇತ್ರದ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಹಾಗೂ ಕಿಶೋರ ಯಕ್ಷಗಾನ ಪ್ರೋತ್ಸಾಹಿಸಲು ಸಹಕರಿಸಿದ್ದಾರೆ. ತನ್ನದೇ ಕಾರ್ಯಕ್ರಮವೆಂಬಂತೆ ವೈಯಕ್ತಿಕವಾಗಿ ಆರ್ಥಿಕ ನೆರವನ್ನೂ ನೀಡುತ್ತಿದ್ದಾರೆ. ಯಕ್ಷಗಾನ ಕಲಾರಂಗವು ಯಕ್ಷಶಿಕ್ಷಣವನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ. ಕಿಶೋರ ಯಕ್ಷಗಾನಕ್ಕೆ ಸಾಲಿಗ್ರಾಮ ದೇವಳದಿಂದಲೂ ಪ್ರೋತ್ಸಾಹ ಸದಾ ಇರಲಿದೆ.