

ಉಡುಪಿ: ವಿದ್ಯಾರ್ಥಿಗಳಿಗೆ ಸಂವಿಧಾನದ ಆಶಯ, ಸಂಸದೀಯ ವ್ಯವಸ್ಥೆ, ಪ್ರಜಾಪ್ರಭುತ್ವದ ಮೌಲ್ಯ ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿ ಅರಿತುಕೊಳ್ಳಲು ಕಲ್ಪಿತ ಯುವ ಸಂಸತ್ ಉತ್ತಮ ವೇದಿಕೆಯಾಗಿದೆ. ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ನಾಯಕತ್ವದ ಗುಣ, ವಾಕ್ಚಾತುರ್ಯ, ವಿಷಯ ಮಂಡನೆಯ ಕೌಶಲ, ತಾರ್ಕಿಕ ಚಿಂತನೆ ಮತ್ತು ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದು ವೈಕುಂಠ ಬಾಳಿಗಾ ಕಾನೂನು ಕಾಲೇಜ್ನ ಪ್ರಾಂಶುಪಾಲೆ ಡಾ.ಸುರೇಖಾ ಕೆ. ಅಭಿಪ್ರಾಯಪಟ್ಟರು.
ಉಡುಪಿ ಮತ್ತು ಕಾರ್ಕಳ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ಕಾನೂನು ಇಲಾಖೆ, ತಾಪಂ ವತಿಯಿಂದ ಕಾಲೇಜ್ನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲ್ಪಿತ ಯುವ ಸಂಸತ್ ಸ್ಪರ್ಧೆಯಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಬೇಕು. ಕಲ್ಪಿತ ಯುವಸಂಸತ್ ಸ್ಪರ್ಧೆಯ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುವ ತಾವುಗಳು ರಾಜ್ಯಮಟ್ಟಕ್ಕೂ ಆಯ್ಕೆಯಾಗಿ ಗೆಲುವು ಸಾಧಿಸಿ ಕಾಲೇಜ್ನ ಕೀರ್ತಿ ಹೆಚ್ಚಿಸಬೇಕು. ಇತರ ವಿದ್ಯಾರ್ಥಿಗಳಿಗೂ ಮಾದರಿಯಾಗಬೇಕು ಎಂದರು.
ಕಾಲೇಜ್ನ ಉಪಪ್ರಾಂಶುಪಾಲೆ ಡಾ.ಪ್ರೀತಿ ಹರೀಶರಾಜ್, ಪ್ರಾಧ್ಯಾಪಕರಾದ ಡಾ.ನವೀನಚಂದ್ರ, ಡಾ.ಜಯಮೋಲ್ ಪಿ.ಎಸ್. ಉಪಸ್ಥಿತರಿದ್ದರು.
ಕಾರ್ಕಳ ಹಾಗೂ ಉಡುಪಿ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಮಾತುಗಾರರಾಗಿ ಆಯ್ಕೆಯಾದ ವಿದ್ಯಾರ್ಥಿಗಳಾದ ದೀಪಕ ಕಾಮತ ಎಳ್ಳಾರೆ, ಸುಮಂತ, ಲಕ್ಷ್ಮೀಕಾಂತ, ವಸುದೇವ ತಿಲಕ್, ಗಣೇಶ ಶ್ಯಾನುಭಾಗ, ವಿನ್ಯಾಸ ಪೈ, ಗಣೇಶ ಭಟ್ಟ ಪ್ರಶಸ್ತಿ ಸ್ವೀಕರಿಸಿದರು.