ಗಂಗೊಳ್ಳಿ ಬಂದರು ಅಭಿವೃದ್ಧಿಗೆ ಚಾಲನೆ

 ಗಂಗೊಳ್ಳಿ ಬಂದರು ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಮತ್ಸೃಸಂಪದ ಯೋಜನೆಯಡಿ ಬಂದರು ಅಭಿವೃದ್ಧಿಗೆ ಚಾಲನೆ ದೊರಕಿದೆ.
ಗಂಗೊಳ್ಳಿ ಬಂದರು ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಮತ್ಸೃಸಂಪದ ಯೋಜನೆಯಡಿ ಬಂದರು ಅಭಿವೃದ್ಧಿಗೆ ಚಾಲನೆ ದೊರಕಿದೆ.
Published on
ಕುಂದಾಪುರ: ಜಿಲ್ಲೆಯ ಪ್ರಮುಖ ಮೀನುಗಾರಿಕಾ ವಲಯ ಗಂಗೊಳ್ಳಿ ಬಂದರು ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಮತ್ಸೃಸಂಪದ ಯೋಜನೆಯಡಿ ಬಂದರು ಅಭಿವೃದ್ಧಿಗೆ ಚಾಲನೆ ದೊರಕಿದೆ.
ಕಳೆದ 3-4 ವರ್ಷಗಳಿಂದ ಎದುರಾಗಿರುವ ಮತ್ಸ್ಯಕ್ಷಾಮ, ಬಂದರು ದುಸ್ಥಿತಿ, ಮೂಲಸೌಕರ್ಯ ಕೊರತೆ, ಪ್ರಾಕೃತಿಕ ವಿಕೋಪದಿಂದ ನಲುಗಿಹೋಗಿದ್ದ ಈ ಬಂದರಿನಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದು ಹೊಸ ವಿಶ್ವಾಸ ಮೂಡಿಸಿದೆ. ಪ್ರಧಾನಮಂತ್ರಿ ಮತ್ಸೃಸಂಪದ ಯೋಜನೆಯಡಿ ಹಳೇ ಜೆಟ್ಟಿಯ ಸಮೀಪ ಎರಡು ಮೀನುಗಾರಿಕಾ ಪ್ರಾಂಗಣ, ಎರಡು ವಿಶ್ರಾಂತಿ ಗೃಹ ಕಟ್ಟಡ ನಿರ್ಮಾಣಕ್ಕೆ ಚಾಲನೆ ದೊರಕಿದೆ. ಬಂದರಿನ ಸುತ್ತಲೂ ಆವರಣಗೋಡೆ ರಚನೆಯಾಗಲಿದೆ.

ಕುಸಿದ ಜೆಟ್ಟಿ ಮೇಲೇಳಲಿ

2018ರಲ್ಲಿ ಬಂದರಿನ ಜೆಟ್ಟಿ ಕುಸಿತ ನಂತರ 12 ಕೋಟಿ ರೂ. ವೆಚ್ಚದಲ್ಲಿ 379 ಮೀ. ಉದ್ದದ ಹೊಸ ಜೆಟ್ಟಿ ಮರು ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. 2022ರಲ್ಲಿ ನಿರ್ಮಾಣ ಹಂತದಲ್ಲೇ 50 ಮೀ. ಜೆಟ್ಟಿ ಕುಸಿದು ಕಡಲ ಸೇರಿತ್ತು. ಸರ್ಕಾರ ತಜ್ಞರನ್ನು ನೇಮಿಸಿ ವರದಿ ಪಡೆದಿತ್ತು. ಮೀನುಗಾರಿಕಾ ಸಚಿವರು ವರದಿ ಸ್ವೀಕರಿಸಿ ಪುನಃ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದ್ದರು. ಜೆಟ್ಟಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಕೆಲಸ ಆರಂಭಿಸಲೆಂದು 2023ರ ಡಿಸೆಂಬರ್‌ನಲ್ಲಿ ತಯಾರಿ ನಡೆಸಿದ್ದರು. ಈ ನಡುವೆ ಮೀನುಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ವಿನ್ಯಾಸ ಬದಲಾಯಿಸುವಂತೆ ತಿಳಿಸಿದ್ದಲ್ಲದೆ ಸಿಐಸಿಎಫ್ ವರದಿಯಂತೆ ಕಾರ್ಯನಿರ್ವಹಿಸಬೇಕೆಂದು ಸೂಚನೆ ನೀಡಿದ್ದರಿಂದ ಕಾಮಗಾರಿ ಆರಂಭಿಸಲು ಸಾಧ್ಯವಾಗಿರಲಿಲ್ಲ.
ಈ ಮಧ್ಯೆ ಕಳಪೆ ಕಾಮಗಾರಿ ಪ್ರಶ್ನಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿರುವುದರಿಂದ ಜೆಟ್ಟಿ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿದೆ. ಇದರಿಂದ ಬೋಟ್ ನಿಲುಗಡೆ, ಮೀನು ದಡ ಸೇರಿಸಲು ಅಡೆತಡೆಯಿದೆ. ಸರ್ಕಾರ ಮತ್ತು ಸಂಬಂಧಿತ ಇಲಾಖೆ ಗಮನಹರಿಸಿ ಕುಸಿದ ಜೆಟ್ಟಿಯ ಮರು ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಬೇಕು ಎಂಬುದು ಮೀನುಗಾರರ ಒಕ್ಕೊರಲ ಆಗ್ರಹ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದೊಂದಿಗೆ ಪ್ರಧಾನಮಂತ್ರಿ ಮತ್ತ್ವ ಸಂಪದ ಯೋಜನೆಯಡಿ 22.14 ಕೋಟಿ ರೂ. ವೆಚ್ಚದಲ್ಲಿ 5 ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಬಂದರಿನ ಸಮಗ್ರ ಪ್ರಗತಿಗೆ ಆದ್ಯತೆ ನೀಡಲಾಗುವುದು.

ದಶಕದಿಂದ ಅಭಿವೃದ್ಧಿ ಕಾಣದೆ ಸೊರಗಿರುವ ಗಂಗೊಳ್ಳಿ ಬಂದರಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಸಿಕ್ಕಿರುವುದು ಸಂತೋಷ. ಮೂಲ ಸೌಕರ್ಯಗಳಿಂದ ನಲುಗಿರುವ ಬಂದರಿಗೆ ನವಚೈತನ್ಯ ತುಂಬಿದೆ. ಉದ್ದೇಶಿತ ಕಾಮಗಾರಿಗಳು ಬೇಗನೆ ಪೂರ್ಣಗೊಂಡು ಮೀನುಗಾರರಿಗೆ ಅನುಕೂಲವಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net