ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜೂ.13ರಿಂದ 18ರ ವರೆಗೆ ರಾಜ್ಯದ ಐದು ಮಾರ್ಗಗಳಲ್ಲಿ ಆಯೋಜಿಸಿರುವ ಎಸ್ಐಆರ್ ಜನಜಾಗೃತಿ ಅಭಿಯಾನದ ಕರಪತ್ರ ಬಿಡುಗಡೆ ಮಾಡಲಾಯಿತು. ಪ್ರೊ. ಬಿ.ಎ. ಶ್ರೀಧರ್, ಪ್ರೊ. ಕೆ.ಣಿರಾಜ್, ಪ್ರಶಾಂತ್ ಜತ್ತನ್ನ, ಶ್ಯಾಮರಾಜ್ ಬಿರ್ತಿ, ಸುಂದರ್ ಮಾಸ್ಟರ್ ಇದ್ದರು.
Published on:
Copied
Follow Us
* ಸಂಚಾಲಕ ಪ್ರೊ. ಬಿ.ಎ. ಶ್ರೀಧರ್ ಮಾಹಿತಿ
* ಜೂ.20ರಂದು ಬೆಂಗಳೂರಿನಲ್ಲಿ ಸಮಾವೇಶ
ಉಡುಪಿ: ಕೇಂದ್ರ ಸರ್ಕಾರ ಜಾರಗೊಳಿಸಿರುವ ಎಸ್ಐಆರ್ ಪ್ರಕ್ರಿಯೆಯಿಂದ ದೇಶದ ಕೋಟ್ಯಂತರ ಜನರು ಸಾಂವಿಧಾನಿಕ ಮತದಾನದ ಹಕ್ಕಿನಿಂದ ವಂಚಿತರಾಗಲಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಎಸ್ಐಆರ್ ಪ್ರಕ್ರಿಯೆ ಜಾರಿಗೊಳಿಸದಂತೆ ಸರ್ಕಾರಕ್ಕೆ ಮನವಿ ಮಾಡಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಪ್ರಗತಿಪರ ಸಂಟನೆಗಳು ಮತ್ತು ಜಾತ್ಯತಿತ ಪಕ್ಷಗಳ ಒಕ್ಕೂಟದಿಂದ 'ಎಸ್ಐಆರ್ ವಿರೋಧಿ ಕರ್ನಾಟಕ' ವೇದಿಕೆ ರಚನೆಯಾಗಿದೆ. ಜೂ.13ರಿಂದ 18ರ ವರೆಗೆ ರಾಜ್ಯದ ಐದು ಮಾರ್ಗಗಳಲ್ಲಿ ಜನಜಾಗೃತಿ ಅಭಿಯಾನ ನಡೆಯಲಿದ್ದು, ಜೂ.20ರಂದು ಬೆಂಗಳೂರಿನಲ್ಲಿ 'ಎಸ್ಐಆರ್ ವಿರೋಧಿ ಬೃಹತ್ ಪ್ರತಿರೋಧ ಸಮಾವೇಶ' ಆಯೋಜಿಸಲಾಗಿದೆ ಎಂದು ಅಭಿಯಾನದ 5ನೇ ಮಾರ್ಗದ ಸಂಚಾಲಕ ಪ್ರೊ. ಬಿ.ಎ. ಶ್ರೀಧರ್ ಮಾಹಿತಿ ನೀಡಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಶನಿವಾರ (ಜೂ.13) ಸುದ್ದಿಗೋಷ್ಠಿಯಲ್ಲಿ ಅಭಿಯಾನದ ಕರಪತ್ರ ಬಿಡುಗಡೆ ಮಾಡಿ ಮಾತನಾಡಿ ಬೀದರ್, ವಿಜಯಪುರ, ಉತ್ತರ ಕನ್ನಡ, ತುಮಕೂರು ಹಾಗೂ ಉಡುಪಿ ಜಿಲ್ಲೆ ಈ ಐದು ಮಾರ್ಗಗಳ ಮೂಲಕ ಸಂಪೂರ್ಣ ರಾಜ್ಯದಲ್ಲಿ ಎಸ್ಐಆರ್ನಿಂದ ಆಗಲಿರುವ ತೊಡಕುಗಳ ಕುರಿತು ಜನಜಾಗೃತಿ ಮೂಡಿಸಲಿದ್ದೇವೆ ಎಂದರು.
ಅಭಿಯಾನದ 5ನೇ ಮಾರ್ಗದ ಸಂಚಾಲಕ ಪ್ರೊ. ಬಿ.ಎ. ಶ್ರೀಧರ್ ಮಾತನಾಡಿದರು.
ಸರ್ಕಾರದ ಮುಖವಾಣಿಯಾದ ಆಯೋಗ
ಎಸ್ಐಆರ್ ಪ್ರಕ್ರಿಯೆಯಿಂದ ಮತದಾನದ ಹಕ್ಕು ಕಳೆದುಕೊಂಡವರಿಗೆ ಈ ದೇಶದ ಪ್ರಜೆಗಳಾಗಿರಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ. ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮುಖವಾಣಿಯಂತೆ ಕಾರ್ಯನಿರ್ವಹಿಸುತ್ತಿದೆ. ಇದರಿಂದ ದೇಶದ ಪ್ರಜಾಪ್ರಭುತ್ವ ತೀವ್ರವಾಗಿ ಬದಲಾಗುವ ಆತಂಕವಿದೆ. ಇದು ರಕ್ತರಹಿತ ಜನಾಂಗೀಯ ಹತ್ಯೆಯಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಸರ್ಕಾರದ್ದೇ ಹೊರತು ಚುನಾವಣಾ ಆಯೋಗದ್ದಲ್ಲ. ಈ ವಿಚಾರವಾಗಿ ನ್ಯಾಯಾಲಯವೂ ಸಹ ಜನರ ಸಹಕಾರಕ್ಕೆ ಬರುವ ಸಾಧ್ಯತೆ ಇಲ್ಲ. ಹೀಗಾಗಿ ಎಸ್ಐಆರ್ ವಿರೋಧಕ್ಕೆ ಜನಜಾಗೃತಿಯೇ ಆಧಾರವಾಗಿದೆ ಎಂದರು.
ಅಸಂವಿಧಾನಿಕ ಕಾರ್ಯ
ಸಹಬಾಳ್ವೆಯ ಪ್ರಮುಖ ಪ್ರೊ. ಕೆ.ಣಿರಾಜ್ ಮಾತನಾಡಿ, ಎಸ್ಐಆರ್ ಪ್ರಕ್ರಿಯೆಯು ಅಸಂವಿಧಾನಿಕ ಕಾರ್ಯವಾಗಿದೆ.ಪೌರತ್ವ ಸಾಬೀತುಪಡಿಸಲು 11 ಬಗೆಯ ದಾಖಲೆ ಕೇಳಲಾಗಿದೆ. ಇದರಿಂದ ದೇಶದಲ್ಲಿರುವ ಶೇ.70ರಷ್ಟು ಇರುವ ದಲಿತರು, ಕೂಲಿ ಕಾರ್ಮಿಕರು, ಬುಡಕಟ್ಟು ಹಾಗೂ ಇನ್ನಿತರ ಜನಾಂಗದವರಿಗೆ ಮತದಾನದ ಹಕ್ಕು ತಪ್ಪಿಹೋಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಕೂಡಲೇ ಎಸ್ಐಆರ್ ಪ್ರಕ್ರಿಯೆ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಇದು ಸಂವಿಧಾನದಲ್ಲಿ ಮಾರಕವಾಗಲಿರುವ ವಿಕೋಪವಾಗಲಿದೆ. ದೇಶದ ಶೇ.10 ಜನ ಈಗಾಗಲೇ ಎಸ್ಐಆರ್ ವಿಕೋಪದಿಂದ ಸಂತ್ರಸ್ತರಾಗಿದ್ದಾರೆ ಎಂದರು.