ಕುಂಬಾರಿಕೆಗೆ ಮಣ್ಣಿನ ಕೊರತೆ!

ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.
Published on
ಹರಿಪ್ರಸಾದ್ ನಂದಳಿಕೆ ಕಾರ್ಕಳ
ಒಂದು ಕಾಲದಲ್ಲಿ ಹಳ್ಳಿಗಳ ಬದುಕಿನ ಅವಿಭಾಜ್ಯ ಅಂಗವಾಗಿ, ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದ್ದ ಕುಂಬಾರಿಕೆ ಇಂದು ಅಳಿವಿನಂಚಿನತ್ತ ಸಾಗುತ್ತಿದೆ.
ಕಲಾತ್ಮಕ ಮಡಿಕೆಗಳು, ದೀಪಗಳು ಮತ್ತು ದೈನಂದಿನ ಬಳಕೆಯ ವಸ್ತುಗಳನ್ನು ಸೃಷ್ಟಿಸುತ್ತಿದ್ದ ಕುಂಬಾರರ ಕೈಗಳು, ಮಣ್ಣಿನ ಕೊರತೆಯಿಂದಾಗಿ ಖಾಲಿಯಾಗುತ್ತಿವೆ. ಹಿಂದೆ ಅದೆಷ್ಟೋ ಕುಟುಂಬಗಳಿಗೆ ಮೂಲ ವೃತ್ತಿಯಾಗಿದ್ದ ಕುಂಬಾರಿಕೆ ಈಗ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿರುವುದು ನೋವಿನ ಸಂಗತಿ.
ಕುಂಬಾರಿಕೆಗೆ ಬಳಸುವ ಮಣ್ಣಿನ ಗುಣಮಟ್ಟ ಅತ್ಯಂತ ಮುಖ್ಯ. ಎಲ್ಲೆಡೆ ದೊರೆಯುವ ಮಣ್ಣಿನಿಂದ ಉತ್ತಮ ಮಡಿಕೆಗಳನ್ನು ತಯಾರಿಸಲು ಸಾಧ್ಯವಿಲ್ಲ. ಬೆಳಪು ಪ್ರದೇಶದ ಆವೆ ಮಣ್ಣಿನಲ್ಲೇ ಬಾಳಿಕೆ ಬರುವ ವಸ್ತುಗಳನ್ನು ತಯಾರಿಸಲಾಗುತ್ತಿತ್ತು. ಈಗ ಸ್ಥಳೀಯವಾಗಿ ಸಿಗುವ ಮಣ್ಣು ಗುಣಮಟ್ಟದಲ್ಲಿಲ್ಲದ ಕಾರಣ ಮಡಿಕೆಗಳು ಬೇಗ ಒಡೆಯುತ್ತಿವೆ. ಪರಿಣಾಮವಾಗಿ ಗ್ರಾಹಕರ ವಿಶ್ವಾಸವೂ ಕುಸಿಯುತ್ತಿದ್ದು, ಕುಂಬಾರರ ಆದಾಯ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ.
ಹಿಂದೆ ಗ್ರಾಮಕ್ಕೊಂದೆರಡು ಮಡಿಕೆ ತಯಾರಿಕೆಯ ಕುಟುಂಬಗಳಿತ್ತು. ಆದರೆ ಇಂದು ಕಾಲ ಕಳೆದಂತೆ ಮಣ್ಣಿನ ಮಡಿಕೆ, ಕುಂಬಾರಿಕೆ ವೃತ್ತಿಯನ್ನು ವಾಡುವ ಕುಟುಂಬಗಳು ಕಡಿಮೆಯಾಗಿವೆ. ಹೀಗಾಗಿ ಇಡೀ ಜಿಲ್ಲೆಯಲ್ಲಿ ಬೆರಳೆಣಿಕೆಯ ಕೆಲವು ಕುಟುಂಬಗಳು ಕುಲಕಸುಬನ್ನು ನಡೆಸುತ್ತಿವೆ.
ಕಾರ್ಕಳ ತಾಲೂಕಿನಲ್ಲಿರುವ ಕುಂಬಾರ ವೃತ್ತಿಯಲ್ಲಿ ತೊಡಗಿದ ಮಂದಿ ಗುಣಮಟ್ಟದ ಮಣ್ಣು ಸಿಗದ ಪರಿಣಾಮ ಇದೀಗ ಬೆಳ್ತಂಗಡಿ ತಾಲೂಕಿನ ದಿಡುಪೆ ಹಾಗೂ ಕಾಜೂರು ಭಾಗಗಳಿಂದ ಮಣ್ಣನ್ನು ತರಬೇಕಾದ ಪರಿಸ್ಥಿತಿ ನಿರ್ವಾಣವಾಗಿದೆ. ಇದಕ್ಕಾಗಿ ಹೆಚ್ಚಿನ ಸಾರಿಗೆ ವೆಚ್ಚ ಭರಿಸಬೇಕಾಗುತ್ತಿದ್ದು, ಈಗಾಗಲೇ ಅಲ್ಪ ಆದಾಯದ ಈ ವೃತ್ತಿಯಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬಗಳಿಗೆ ಇದು ಮತ್ತೊಂದು ದೊಡ್ಡ ಹೊರೆಯಾಗಿದೆ.
ಈ ಹಿಂದೆ ಅವಿಭಜಿತ ದ.ಕ. ಜಿಲ್ಲೆಯ ನೂರಾರು ಕುಟುಂಬಗಳ ಬದುಕಿಗೆ ಆಸರೆಯಾಗಿದ್ದ ಕುಂಬಾರಿಕೆ, ಇಂದು ಕಚ್ಚಾ ವಸ್ತುವಿನ ಕೊರತೆಯಿಂದ ನಿಧಾನವಾಗಿ ಕುಸಿಯುತ್ತಿದೆ. ಹಿರಿಯ ಕುಂಬಾರರ ಕಣ್ಣಲ್ಲಿ ತಮ್ಮ ಮಕ್ಕಳೂ ಈ ವೃತ್ತಿಯನ್ನು ಮುಂದುವರಿಸುವುದಿಲ್ಲ ಎಂಬ ನೋವು ಕಾಣುತ್ತದೆ.
ಪರಿಸರ ಸ್ನೇಹಿ ಉತ್ಪನ್ನಗಳ ಬಳಕೆ ಹೆಚ್ಚುತ್ತಿರುವ ಈ ಕಾಲದಲ್ಲಿಯೂ ಮಣ್ಣಿನ ವಸ್ತುಗಳಿಗೆ ಬೇಡಿಕೆ ಇದೆ. ಆದರೆ ಆ ಬೇಡಿಕೆ ಪೂರೈಸುವ ಕರಕುಶಲಿಗಳಿಗೆ ಮಣ್ಣೇ ದೊರೆಯದಿರುವುದು ದುರಂತ. ಒಂದು ವೃತ್ತಿ ನಶಿಸಿದರೆ ಕೇವಲ ಉದ್ಯೋಗವಷ್ಟೇ ಕಳೆದು ಹೋಗುವುದಿಲ್ಲ, ಅದರೊಂದಿಗೆ ಶತವಾನಗಳ ಸಂಸ್ಕೃತಿ, ಕಲೆ, ಕೌಶಲ ಮತ್ತು ಪರಂಪರೆಯೂ ಕಣ್ಮರೆಯಾಗುತ್ತವೆ.

ಗುಣಮಟ್ಟದ ಮಣ್ಣಿಗಾಗಿ ಪರದಾಟ

ಕುಂಬಾರಿಕೆಗೆ ಅತ್ಯಗತ್ಯವಾದ ಆವೆ ಮಣ್ಣು ಮರೀಚಿಕೆಯಾಗಿದೆ. ಈ ಹಿಂದೆ ಕಾಪು ಸಮೀಪದ ಬೆಳಪುವಿನಲ್ಲಿ ದೊರಕುತ್ತಿದ್ದ ವಿಶೇಷ ಆವೆ ಮಣ್ಣು ಕುಂಬಾರರ ಜೀವನಾಡಿಯಾಗಿತ್ತು. 100 ಎಕರೆಯಷ್ಟು ವಿಸ್ತಾರವಾಗಿದ್ದ ಆ ಮಣ್ಣಿನ ಪ್ರದೇಶ ಇದೀಗ ಖಾಸಗಿ ಕಂಪನಿಯ ಸ್ವಾಧೀನಕ್ಕೆ ಒಳಪಟ್ಟಿದ್ದು, ಕುಂಬಾರರಿಗೆ ಮಣ್ಣು ಪಡೆಯುವುದು ಅಸಾಧ್ಯವಾಗಿದೆ. ಬೆಳಪುವಿನ ಆವೆ ಮಣ್ಣಿನಲ್ಲಿದ್ದ ಜಿಗುಟುತನವೇ ನಮ್ಮ ಉತ್ಪನ್ನಗಳ ಬಾಳಿಕೆಗೆ ಕಾರಣವಾಗಿತ್ತು. ಈಗ ಲಭ್ಯವಿರುವ ಕಳಪೆ ಮಣ್ಣಿನಿಂದ ತಯಾರಿಸುವ ಪಾತ್ರೆಗಳು ಬೇಗ ಒಡೆಯುತ್ತಿದ್ದು, ಗ್ರಾಹಕರ ವಿಶ್ವಾಸ ಕಳೆದುಕೊಳ್ಳುವಂತಾಗಿದೆ ಎಂದು ಕುಂಬಾರರು ಅಳಲು ತೋಡಿಕೊಳ್ಳುತ್ತಾರೆ.

ಸರ್ಕಾರದತ್ತ ಕಣ್ಣು

ಪರಿಸರ ಸ್ನೇಹಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಈ ಕಾಲದಲ್ಲಿ, ಅವುಗಳನ್ನು ತಯಾರಿಸುವ ಕರಕುಶಲಿಗರಿಗೆ ಅಗತ್ಯವಾದ ಮಣ್ಣನ್ನು ಒದಗಿಸಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ. ಕುಂಬಾರರ ಬಳಕೆಗಾಗಿ ಮಣ್ಣಿನ ಪ್ರದೇಶಗಳನ್ನು ಗುರುತಿಸಿ ಮೀಸಲಿಡಬೇಕು. ಸರ್ಕಾರಿ ಜಾಗಗಳಿಂದ ಮಣ್ಣು ಪಡೆಯಲು ಸುಲಭ ನಿಯಮಗಳನ್ನು ರೂಪಿಸಬೇಕು. ಖಾಸಗಿ ಸ್ವಾಧೀನದಲ್ಲಿರುವ ಸಾಂಪ್ರದಾಯಿಕ ಮಣ್ಣಿನ ಪ್ರದೇಶಗಳ ಕುರಿತು ಸರ್ಕಾರ ಸಮಗ್ರ ಪರಿಶೀಲನೆ ನಡೆಸಬೇಕು ಎನ್ನುವುದು ಕುಂಬಾರರ ವಾತು.

ನಮ್ಮ ಕೈಯಲ್ಲಿ ಮಣ್ಣಿಗೆ ರೂಪ ಕೊಡಬಹುದು. ಆದರೆ ಮಣ್ಣೇ ಸಿಗದಿದ್ದರೆ ನಮ್ಮ ಬದುಕಿಗೆ ರೂಪ ಕೊಡುವವರು ಯಾರು? ಮಣ್ಣಿನ ಪಾತ್ರೆಯನ್ನು ವಾಡಲು ಮುಖ್ಯವಾಗಿ ಬೇಕಾಗಿರುವ ಆವೆ ಮಣ್ಣೇ ಸಿಗುತ್ತಿಲ್ಲ. ಸಿಕ್ಕರೂ ದುಬಾರಿ ವೆಚ್ಚ ನೀಡಿ ತರುವ ಪರಿಸ್ಥಿತಿಯಿದೆ. ಮಣ್ಣಿನ ಪಾತ್ರೆಗೆ ಬೇಡಿಕೆ ಇದ್ದರೂ ಪೂರೈಕೆ ವಾಡಲು ಆಗುತ್ತಿಲ್ಲ.

— ಸಂಜೀವ ಕುಲಾಲ್, ಕುಂಬಾರ

ಕುಂಬಾರಿಕೆಗೆ ಮಣ್ಣೇ ಸಿಗದ ಪರಿಸ್ಥಿತಿ ನಿರ್ವಾಣವಾಗಿದೆ. ಹೀಗೇ ಮುಂದುವರಿದರೆ ಕುಂಬಾರಿಕೆ ಎಂಬ ಶತವಾನಗಳ ಪರಂಪರೆಯ ವೃತ್ತಿ ಮುಂದಿನ ಪೀಳಿಗೆಗೆ ಉಳಿಯುವುದೇ ಅನುವಾನ. ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಿ ಪರಿಹಾರ ಕಲ್ಪಿಸಬೇಕು.

— ಶಂಕರ ಕುಲಾಲ್ ಸಾಣೂರು ಮಣ್ಣಿನ ಮಡಿಕೆಗಳ ತಯಾರಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net