

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ಮಳೆಗಾಲ ವಾತ್ರವಲ್ಲ ವರ್ಷದ 365 ದಿನಗಳು ಸಹ ಇಲ್ಲಿನ ಜನರು ದೋಣಿ ಮೂಲಕ ಜೀವ ಕೈಯಲ್ಲಿ ಹಿಡಿದುಕೊಂಡೇ ನದಿ ದಾಟಿ, ಬದುಕು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ. ಶಾಲೆ, ಪೇಟೆ, ಅಗತ್ಯ ವಸ್ತುಗಳ ಖರೀದಿ, ಕಚೇರಿ ಕೆಲಸ, ಇನ್ನಿತರ ದೈನಂದಿನ ಕಾರ್ಯಗಳಿಗೆ ಈ ದ್ವೀಪವಾಸಿಗಳಿಗೆ ದೋಣಿಯೊಂದೇ ಆಸರೆ..!
ಇದು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡುಕೋಣೆ ಸಮೀಪದ ‘ಕುರು ಕುದ್ರು’ ದ್ವೀಪವಾಸಿಗಳ ನಿತ್ಯ ಅನುಭವಿಸುತ್ತಿರುವ ಕಷ್ಟ ಕಾರ್ಪಣ್ಯದ ಚಿತ್ರಣ.
ಕುರು ಕುದ್ರುವಿನ ಸುತ್ತ ಸೌಪರ್ಣಿಕಾ ನದಿಯಿದೆ. ಮರವಂತೆ, ಪಡುಕೋಣೆ, ನಾವುಂದ ಗ್ರಾಮಗಳು ಮೂರು ಸುತ್ತಲೂ ಈ ಕುರುವನ್ನು ಆವರಿಸಿಕೊಂಡಿದೆ. ಆದರೆ ಮಧ್ಯೆ ನದಿಯೊಂದು ವಾತ್ರ ಇವುಗಳನ್ನು ಬೇರ್ಪಡಿಸಿದೆ. ಮರವಂತೆಯಿಂದ ದೋಣಿ ಮೂಲಕ, ಮತ್ತೊಂದು ಕಡೆಯಿಂದ ನಾಡದ ಪಡುಕೋಣೆಯಿಂದ ದೋಣಿ ಮೂಲಕ ಜನರು ಕುರು ಕುದ್ರುವಿಗೆ ಬರಬಹುದು. ಇಲ್ಲಿನ ಜನರಿಗೆ ಬೇರೆಲ್ಲ ಸಮಸ್ಯೆಗಳಿಗಿಂತ ತೂಗು ಸೇತುವೆಯೊಂದು ನಿರ್ಮಾಣವಾದರೆ ಮತ್ತೆಲ್ಲ ಈಡೇರಿದಂತೆಯೇ. 2 ದಶಕಗಳಿಗೂ ಹೆಚ್ಚು ಕಾಲದಿಂದ ಈ ಬಗ್ಗೆ ಬೇಡಿಕೆ ಇಡುತ್ತಿದ್ದು, ಇನ್ನೂ ಈಡೇರಿಲ್ಲ. ದ್ವೀಪವಾಸಿಗಳ ಬದುಕು ವಾತ್ರ ದೋಣಿಯಲ್ಲೇ ಕಳೆದು ಹೋಗುತ್ತಿದೆ.
ಕುರು ಕುದ್ರು 40 ಎಕರೆ ವಿಸ್ತೀರ್ಣ ಹೊಂದಿದ್ದು, ಒಟ್ಟು 8 ಕುಟುಂಬಗಳು ನೆಲೆಸಿದ್ದು, 75-80 ಮಂದಿ ಇಲ್ಲಿದ್ದಾರೆ. ಹಿಂದೆ ಇನ್ನು 810 ಮನೆಗಳಿದ್ದು, ಅವರೆಲ್ಲ ಈ ಸಂಕಷ್ಟದ ಬದುಕಿನಿಂದಾಗಿ ದ್ವೀಪ ಬಿಟ್ಟು, ಬೇರೆಡೆಗೆ ತೆರಳಿದ್ದಾರೆ. 1ನೇ ತರಗತಿಯಿಂದ ಕಾಲೇಜುವರೆಗಿನ 20 ಮಕ್ಕಳು ಪ್ರತಿ ನಿತ್ಯ ಈ ನದಿಯನ್ನು ದೋಣಿ ಮೂಲಕ ದಾಟಿ ಹೋಗಿ ಬರುತ್ತಿದ್ದಾರೆ. ಭತ್ತ ಹಾಗೂ ತೆಂಗು ಕೃಷಿಯೇ ಇಲ್ಲಿನ ಜನರ ಬದುಕಿಗೆ ಆಸರೆ. ಇಲ್ಲೊಂದು ಕಿರಿಯ ಪ್ರಾಥಮಿಕ ಶಾಲೆ ಇತ್ತು. ಶಿಕ್ಷಕರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದ ಕಾರಣ 20 ವರ್ಷಗಳ ಹಿಂದೆ ಆ ಶಾಲೆ ಮುಚ್ಚಿದೆ. ಈಗದರ ಕುರುಹು ವಾತ್ರವಿದೆ.
ಮಳೆಗಾಲವಿರಲಿ, ಬೇಸಿಗೆಯೇ ಇರಲಿ ದೋಣಿಯೊಂದೇ ಇಲ್ಲಿನ ವಾಸಿಗಳಿಗೆ ನದಿ ದಾಟಲು ಊರುಗೋಲು. ಬೇಸಿಗೆಯಲ್ಲೂ ತುಂಬಿ ಹರಿಯುವ ಸೌಪರ್ಣಿಕಾ ನದಿ ದಾಟಿ ಶಾಲೆ ಕಾಲೇಜಿಗೆ ಬರಬೇಕಾದ ಅನಿವಾರ್ಯತೆ ಮಕ್ಕಳದು. ಯಾರಿಗಾದರೂ ಅನಾರೋಗ್ಯ ಉಂಟಾದರೆ, ಗರ್ಭಿಣಿಯರ ಪಾಡಂತೂ ಹೇಳತೀರದಾಗಿದೆ.