ಉಡುಪಿ: ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಉಡುಪಿಯಲ್ಲಿ ರವಿವಾರ (ಮಾ.1) ಬೆಳಗ್ಗೆ ಆಯೋಜಿಸಿದ್ದ ಮ್ಯಾರಥಾನ್ನಲ್ಲಿ ಪಾಲ್ಗೊಂಡಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ಐ ನಾಸೀರ್ ಹುಸೇನ್ (58) ಕುಸಿದುಬಿದ್ದು ಮೃತಪಟ್ಟಿದ್ದಾರೆ.
ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಮ್ಮ ಪೊಲೀಸ್&ನಮ್ಮ ಹೆಮ್ಮೆ, ಎಲ್ಲರಿಗೂ ಫಿಟ್ನೆಸ್ ಡಬ್ ಫ್ರೀ ಕರ್ನಾಟಕ ಸೈಬರ್ ಜಾಗೃತಿಗಾಗಿ 5 ಕಿಮೀ ಮ್ಯಾರಥಾನ್ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಎಸ್ಐ ನಾಸೀರ್ ಹುಸೇನ್ ಸೇರಿದಂತೆ ನೂರಾರು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಮ್ಯಾರಥಾನ್ನಲ್ಲಿ ಓಡುತ್ತಿದ್ದ ನಾಸೀರ್ ಹುಸೇನ್ ಒಮ್ಮೆಲೆ ಕುಸಿದು ಬಿದ್ದು ತೀವ್ರವಾಗಿ ಅಸ್ವಸ್ಥಗೊಂಡರು ಎನ್ನಲಾಗಿದೆ. ಕೂಡಲೇ ಅವರನ್ನು ಉಡುಪಿಯಲ್ಲಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು, ಈಗಾಗಲೇ ಅವರು ಮೃತಪಟ್ಟಿದ್ದಾಗಿ ತಿಳಿಸಿದರು.
ನಾಸಿರ್ ಹುಸೇನ್ ಅವರು ಉಡುಪಿ ಜಿಲ್ಲೆಯ ಅಮಾಸೆಬೈಲು, ಕುಂದಾಪುರ ನಗರ, ಕುಂದಾಪುರ ಸಂಚಾರ ಠಾಣೆ, ಶಂಕರನಾರಾಯಣ, ಕಾರ್ಕಳ ಗ್ರಾಮಾಂತರ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.