ಕುಂಬಳೆ ಟರ್ಮಿನಲ್ ನಿಲ್ದಾಣ?

 ಟರ್ಮಿನಲ್ ಆಗಿ ಮೇಲ್ದರ್ಜೆಗೇರಲಿರುವ ಕುಂಬಳೆ ರೈಲು ನಿಲ್ದಾಣ.
ಟರ್ಮಿನಲ್ ಆಗಿ ಮೇಲ್ದರ್ಜೆಗೇರಲಿರುವ ಕುಂಬಳೆ ರೈಲು ನಿಲ್ದಾಣ.
Published on
ವಿಜಯವಾಣಿ ಸುದ್ದಿಜಾಲ ಕುಂಬಳೆ
ಪಾಲಕ್ಕಾಡ್ ವಿಭಾಗದಲ್ಲಿದ್ದ ಏಕೈಕ ಟರ್ಮಿನಲ್ ನಿಲ್ದಾಣ ಮಂಗಳೂರನ್ನು ಮೈಸೂರು ವಿಭಾಗಕ್ಕೆ ವಿಲೀನಗೊಳಿಸಿದ ಬೆನ್ನಲ್ಲೇ, ಕುಂಬಳೆ ರೈಲು ನಿಲ್ದಾಣದ ಅಭಿವೃದ್ಧಿಯ ಕುರಿತು ಹೊಸ ಭರವಸೆಗಳು ಮೂಡುತ್ತಿವೆ. ಮಂಗಳೂರು-ಮೈಸೂರು ವಿಭಾಗ ವಿಲೀನ ಬಳಿಕ ಪಾಲಕ್ಕಾಡ್-ತಿರುವನಂತಪುರಂ ವಿಭಾಗ ವಿಲೀನ ಪ್ರಸ್ತಾಪ ಕೇಳಿಬಂದಿದೆ. ಹೀಗಾದರೆ, ಮಂಗಳೂರಿಗೆ ಪರ್ಯಾಯವಾಗಿ ಕುಂಬಳೆ ರೈಲು ನಿಲ್ದಾಣವನ್ನು ಟರ್ಮಿನಲ್ ಸ್ಟೇಶನ್ ಆಗಿ ಅಭಿವೃದ್ಧಿಪಡಿಸುವ ಬಗ್ಗೆ ಚರ್ಚೆ ಮುನ್ನೆಲೆಗೆ ಬಂದಿದೆ.
ಕುಂಬಳೆ ನಿಲ್ದಾಣದಲ್ಲಿ ವಿಶಾಲವಾದ ಸ್ಥಳಾವಕಾಶ ಇರುವುದೇ ಈ ನಿರೀಕ್ಷೆಗೆ ಮುಖ್ಯ ಕಾರಣ. 1904ರಲ್ಲಿ ಕಾರ್ಯಾರಂಭಿಸಿದ ಈ ನಿಲ್ದಾಣ ಎನ್.ಎಸ್.ಜಿ.-5 ವರ್ಗಕ್ಕೆ ಸೇರಿದೆ. ಅಭಿವೃದ್ಧಿಗಾಗಿ 34 ಎಕರೆ ಭೂಮಿ ಇದೆ. ಕಣ್ಣೂರು-ಕಾಸರಗೋಡು-ಮಂಗಳೂರು ಮಾರ್ಗದಲ್ಲಿ ಅತ್ಯಂತ ಹೆಚ್ಚು ರೈಲ್ವೆ ಜಾಗ ಹೊಂದಿರುವ ನಿಲ್ದಾಣಗಳಲ್ಲಿ ಕುಂಬಳೆಯೂ ಪ್ರಮುಖವಾದುದು.
ಕಣ್ಣೂರಿನಿಂದ ಮಂಗಳೂರುವರೆಗಿನ ರೈಲು ನಿಲ್ದಾಣಗಳಲ್ಲಿ ಹೆಚ್ಚಿನ ಸ್ಥಳಾವಕಾಶ ಇಲ್ಲ. ಕುಂಬಳೆಯಲ್ಲಿ ಲಭ್ಯವಿರುವ 34 ಎಕರೆ ಭೂಮಿಯನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಿಕೊಳ್ಳಬಹುದು ಎಂಬುದು ಲೆಕ್ಕಾಚಾರ. ಇದೇ ಕಾರಣಕ್ಕೆ ಸ್ಥಳೀಯರು ಕುಂಬಳೆಯನ್ನು ಸ್ಯಾಟಲೈಟ್ ನಿಲ್ದಾಣವಾಗಿ ಮೇಲ್ದರ್ಜೆಗೆ ಏರಿಸಬೇಕೆಂಬ ಬೇಡಿಕೆ ಕೇಳಿಬರುತ್ತಿದೆ.
ಈ ಯೋಜನೆ ಸಾಕಾರಗೊಂಡರೆ, ಹೆಚ್ಚಿನ ರೈಲುಗಳಿಗೆ ಕುಂಬಳೆಯಲ್ಲಿ ನಿಲುಗಡೆ ಸಿಗಲಿದೆ. ಹಲವು ರೈಲುಗಳು ಇಲ್ಲಿಂದ ಸಂಚಾರ ಸೇವೆ ಆರಂಭ ಮಾಡಿ, ಇಲ್ಲಿಯೇ ಕೊನೆಗೊಳಿಸುವ ಟರ್ಮಿನಲ್ ಆಗಿ ಕುಂಬಳೆ ಬದಲಾಗಲಿದೆ. ಇದು ಜಿಲ್ಲೆಯ ರೈಲ್ವೆ ಪ್ರಗತಿಗೆ ದೊಡ್ಡ ಕೊಡುಗೆಯಾಗಲಿದೆ. ಪ್ರಸ್ತುತ ಉತ್ತಮ ಆದಾಯವನ್ನೂ ಹೊಂದಿರುವ ಈ ನಿಲ್ದಾಣವನ್ನು ನಿತ್ಯ ನೂರಾರು ವಿದ್ಯಾರ್ಥಿಗಳು ಮತ್ತು ಆಸ್ಪತ್ರೆಗೆ ತೆರಳುವ ರೋಗಿಗಳು ಅವಲಂಬಿಸಿದ್ದಾರೆ.
ಸದ್ಯ ಕುಂಬಳೆಯಲ್ಲಿ ಬೆಳಗ್ಗೆ ಮತ್ತು ಸಂಜೆಯ ಕೆಲವು ರೈಲುಗಳಿಗೆ ಮಾತ್ರ ನಿಲುಗಡೆ ಇದೆ. ಪರಶುರಾಮ್ ಹಾಗೂ ಇಂಟರ್‌ಸಿಟಿ ಎಕ್ಸ್‌ಪ್ರೆಸ್, ಮಂಗಳೂರು-ಚೈನ್ನೈ ಸೆಂಟ್ರಲ್ ಸೂಪರ್‌ಫಾಸ್ಟ್ ಎಕ್ಸಪ್ರೆಸ್ ರೈಲುಗಳಿಗೂ ಇಲ್ಲಿ ನಿಲುಗಡೆ ಕೊಡಬೇಕು ಎಂಬ ಕೋರಿಕೆ ಇದೆ.

ಯಾವ್ಯಾವ ರೈಲುಗಳ ನಿಲುಗಡೆ?

ಸದ್ಯ ಕುಂಬಲೆ ರೈಲ್ವೆ ನಿಲ್ದಾಣದಲ್ಲಿ ಮಲಬಾರ್ ಎಕ್ಸ್‌ಪ್ರೆಸ್(ಕ್ರಮ ಸಂಖ್ಯೆ 16629), ಎರ್ನಾಡ್ ಎಕ್ಸ್‌ಪ್ರೆಸ್ (16606), ಚೆನ್ನೈ ಎಗ್ಮೋರ್-ಮಂಗಳೂರು ಎಕ್ಸ್‌ಪ್ರೆಸ್ (16159), ಮಂಗಳೂರು ಪ್ಯಾಸೆಂಜರ್ ಎಕ್ಸ್‌ಪ್ರೆಸ್ (16611), ಚೆರ್ವತ್ತೂರು-ಮಂಗಳೂರು ಪ್ಯಾಸೆಂಜರ್ (56621), ಮತ್ತು ಇಲ್ಲಿಂದ ತಮಿಳುನಾಡು ಭಾಗಕ್ಕೆ ಸಂಚರಿಸುವ ರೈಲುಗಳಾದ ಮಲಬಾರ್ ಎಕ್ಸ್‌ಪ್ರೆಸ್ (16630), ಎರ್ನಾಡ್ ಎಕ್ಸ್‌ಪ್ರೆಸ್ (16605), ತಿರುವನಂತಪುರಂ ಎಕ್ಸ್‌ಪ್ರೆಸ್ (16348), ಮಂಗಳೂರು-ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ (16160), ಮಂಗಳೂರು-ಕೊಯಮತ್ತೂರು ಎಕ್ಸ್‌ಪ್ರೆಸ್ (16324), ಪಾಲಕ್ಕಾಡ್ ಫಾಸ್ಟ್ ಪ್ಯಾಸೆಂಜರ್ (16610) ರೈಲುಗಳು ಕುಂಬಳೆ ನಿಲ್ದಾಣದಲ್ಲಿ ನಿಲುಗಡೆ ಹೊಂದಿವೆ.

ಲಾಭದಾಯಕ ಹೇಗೆ?

ಕುಂಬಳೆ ನಿಲ್ದಾಣದಲ್ಲಿ ಅತ್ಯಧಿಕ ಸ್ಥಳಾವಕಾಶ ಇರುವುದರಿಂದ ಟರ್ಮಿನಲ್ ನಿಲ್ದಾಣವಾದರೆ ಹೆಚ್ಚು ಲಾಭದಾಯಕವಾಗಲಿದೆ. ಕುಂಬಳೆ ರೈಲ್ವೆ ನಿಲ್ದಾಣ ಮಂಜೇಶ್ವರ ಕಿರು ಬಂದರಿನಿಂದ 14 ಕಿಲೋ ಮೀಟರ್ ದೂರವಿರುವುದರಿಂದ ಸರಕು ಸಾಗಾಟಕ್ಕೆ ಹೆಚ್ಚಿನ ಅವಕಾಶವಿದೆ. ಇದು ರೈಲ್ವೆ ಆದಾಯ ಹೆಚ್ಚಳಕ್ಕೆ ಪೂರಕವಾಗಲಿದೆ. ಅಲ್ಲದೆ ಕೈಗಾರಿಕಾ ಪ್ರಾಂಗಣ ನಿಲ್ದಾಣದಿಂದ 10 ಕಿಲೋ ಮೀಟರ್ ಒಳಗಿದ್ದು ಅಲ್ಲಿ ಎಚ್‌ಎಎಲ್ ಸಹಿತ ಹಲವು ಮಹತ್ವದ ಕೇಂದ್ರಗಳಿವೆ. ರೈಲ್ವೆ ಕೋಚ್ ಫ್ಯಾಕ್ಟರಿಯೂ ಈ ಕೈಗಾರಿಕಾ ಪ್ರಾಗಂಣದಲ್ಲಿ ಕಾರ್ಯಾರಂಭಗೊಳ್ಳುವ ಸಾಧ್ಯತೆಯೂ ಇದ್ದು ಆರ್ಥಿಕ ವ್ಯವಹಾರ ವೃದ್ಧಿಗೆ ಸಹಕಾರಿಯಾಗಲಿದೆ. ಅಲ್ಲದೆ ಕುಂಬಳೆ ನಿಲ್ದಾಣ ರೈಲ್ವೆ ಇಲಾಖೆಯ ಸ್ವಂತ ಆಸ್ತಿಯಾಗಿರುವುದರಿಂದ ಬಾಡಿಗೆ ಸಮಸ್ಯೆ, ಗೂಡ್ಸ್ ನಿಲುಗಡೆ ಸಮಸ್ಯೆಗಳು ಉದ್ಭವಿಸದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net