ಕುಕ್ಕೆಹಳ್ಳಿ ಯಕ್ಷಗಾನ ಮಂಡಳಿ ಆರಂಭ

ಮೇಳದ ಯಜಮಾನ ಡಾ. ಕೆ. ಕೃಷ್ಣಕುಲಾಲ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮೇಳದ ಯಜಮಾನ ಡಾ. ಕೆ. ಕೃಷ್ಣಕುಲಾಲ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Published on
ಉಡುಪಿ: ಕುಕ್ಕೆಹಳ್ಳಿ ಆದಿಮಾಯೆ ಮೂಕಾಂಬಿಕಾ ಕ್ಷೇತ್ರ ಹಾಗೂ ಸ್ವಾಮಿ ಕೊರಗಜ್ಜ ದೈವಸ್ಥಾನದ ಆಶ್ರಯದಲ್ಲಿ ಶ್ರೀ ಕ್ಷೇತ್ರ ಕುಕ್ಕೆಹಳ್ಳಿ ಆದಿಮಾಯೆ ಮೂಕಾಂಬಿಕಾ, ಸ್ವಾಮಿ ಕೊರಗಜ್ಜ ಕೃಪಾಪೋಷಿತ ಯಕ್ಷಗಾನ ಮಂಡಳಿ ವತಿಯಿಂದ ಪ್ರಥಮ ಯಕ್ಷಗಾನ ಬಯಲಾಟ ನವೆಂಬರ್​ ತಿಂಗಳಿನಿಂದ ಆರಂಭವಾಗಲಿದೆ ಎಂದು ಮೇಳದ ಯಜಮಾನ ಡಾ. ಕೆ. ಕೃಷ್ಣಕುಲಾಲ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸ್ವಾಮಿ ಕೊರಗಜ್ಜ ದೈವ ಹಾಗೂ ಆದಿಮಾಯೆ ಮೂಕಾಂಬಿಕಾ ದೇವಿಯ ಅಪ್ಪಣೆಯಂತೆ ಶ್ರೀ ಕ್ಷೇತ್ರ ಕುಕ್ಕೆಹಳ್ಳಿಯ ವತಿಯಿಂದ ನೂತನ ಯಕ್ಷಗಾನ ಮಂಡಳಿಯನ್ನು ಆರಂಭಿಸಲಾಗಿದೆ. ತೆಂಕುತಿಟ್ಟು ಹಾಗೂ ಬಡಗುತಿಟ್ಟಿನ ಸಮ್ಮಿಲನದೊಂದಿಗೆ ಅನುಭವಿ ಮತ್ತು ನುರಿತ ಕಲಾವಿದರನ್ನು ಒಳಗೊಂಡ ತಂಡ ಪ್ರದರ್ಶನ ನೀಡಲಿದ್ದು, ಹೊಸ ವೇಷಭೂಷಣಗಳು, ಆಕರ್ಷಕ ರಂಗಸಜ್ಜಿಕೆ ಹಾಗೂ ಉನ್ನತ ಮಟ್ಟದ ಹಿಮ್ಮೇಳದೊಂದಿಗೆ ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಮೇಳದ ಪ್ರಬಂಧಕ ಅರುಣ್​ ಕುಮಾರ್​ ಜಾರ್ಕಳ ಮಾತನಾಡಿ, ಯಕ್ಷಗಾನ ಮಂಡಳಿಯು ನವೆಂಬರ್​ ತಿಂಗಳ ಎರಡನೇ ವಾರದಿಂದ ಪ್ರಸಕ್ತ ಸಾಲಿನ ಯಕ್ಷಗಾನ ತಿರುಗಾಟವನ್ನು ಆರಂಭಿಸಲಿದೆ. ಮೇಳದಲ್ಲಿ ಸುಮಾರು 32 ರಿಂದ 33 ಮಂದಿ ಕಲಾವಿದರು ಸೇವೆ ಸಲ್ಲಿಸುತ್ತಿದ್ದಾರೆ. ಪಿ.ವಿ. ಆನಂದ ಸಾಲಿಗ್ರಾಮ ಅವರು ರಚಿಸಿದ ಕುಕ್ಕೆಹಳ್ಳಿ ಆದಿಮಾಯೆ ಸ್ವಾಮಿ ಕೊರಗಜ್ಜ ಮಹಾತ್ಮೆ ಎಂಬ ಯಕ್ಷಗಾನದ ಜೊತೆಗೆ, ದೇವದಾಸ್​ ಈಶ್ವರಮಂಗಲ ಅವರು ರಚಿಸಿದ ವೈಭವ ಸೂರ್ಯವಂಶಿ ಎಂಬ ಕಥಾ ಪ್ರಸಂಗದ ಪ್ರದರ್ಶನವೂ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ದೇವದಾಸ್​ ಈಶ್ವರಮಂಗಲ, ಆರ್ಡಿ ಸಂತೋಷ್​ ಕುಮಾರ್​ ಹಾಗೂ ಶಶಿಕುಮಾರ್​ ಆಚಾರ್ಯ ಬೆಳ್ಕಲೆ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net