ಹೊತ್ತಿ ಉರಿದ ಕೆಎಸ್‌ಆರ್‌ಟಿಸಿ ಬಸ್

 ಎರ್ಮಾಯಿಲ್‌ನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಹೊತ್ತಿ ಉರಿಯಿತು.
ಎರ್ಮಾಯಿಲ್‌ನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಹೊತ್ತಿ ಉರಿಯಿತು.
Published on
ಸುಬ್ರಹ್ಮಣ್ಯ: ಕಡಬ ತಾಲೂಕಿನ ಕೈಕಂಬ ಸಮೀಪದ ಎರ್ಮಾಯಿಲ್ ಎಂಬಲ್ಲಿ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಶನಿವಾರ ರಾತ್ರಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಬಸ್‌ನಲ್ಲಿದ್ದ 37 ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ.
ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯಲ್ಲಿ ಬೆಂಗಳೂರಿಗೆ ಸಂಚರಿಸುತ್ತಿದ್ದ ಬಸ್‌ನಲ್ಲಿ ಎರ್ಮಾಯಿಲ್ ಸಮೀಪ ಬರುತ್ತಿದ್ದ ವೇಳೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿತು ಎನ್ನಲಾಗಿದೆ. ಇದು ಗಮನಕ್ಕೆ ಬಂದ ತಕ್ಷಣ ಚಾಲಕ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ.
ಬಸ್‌ನಲ್ಲಿದ್ದ 37 ಜನ ಪ್ರಯಾಣಿಕರೂ ತಕ್ಷಣವೇ ಕೆಳಗಿಳಿದು ದೂರ ನಿಂತರು. ನಂತರದ ಕೆಲವೇ ಕ್ಷಣಗಳಲ್ಲಿ ಬೆಂಕಿ ತೀವ್ರಗೊಂಡು ಬಸ್ ಸಂಪೂರ್ಣವಾಗಿ ಸುಟ್ಟುಹೋಯಿತು. ಘಟನೆಯ ಮಾಹಿತಿ ತಿಳಿದು ಉಪ್ಪಿನಂಗಡಿಯಿಂದ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣ ನಂದಿಸಿದರು. ಮುಂಜಾಗೃತಾ ಕ್ರಮವಾಗಿ ಆಂಬುಲೆನ್ಸ್ ಸ್ಥಳಕ್ಕೆ ಆಗಮಿಸಿತ್ತು. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.
ಬೆಂಕಿ ಆವರಿಸಿದ ತಕ್ಷಣ ಸ್ಥಳೀಯರು, ಆಟೋ ಚಾಲಕರು, ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ವಾಹನದ ಚಾಲಕರು ಸಹಾಯಕ್ಕೆ ಆಗಮಿಸಿದ್ದರು.
ಬಸ್ ಬಿ.ಸಿ.ರೋಡ್ ಡಿಪೋಗೆ ಸೇರಿದ್ದು, ಸುಬ್ರಹ್ಮಣ್ಯದಿಂದ ಹಾಸನ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿತ್ತು. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಆಗಮಿಸಿ ತನಿಖೆ ನಡೆಸಿದರು. ಕೆ.ಎಸ್.ಆರ್.ಟಿ.ಸಿಯ ಅಧಿಕಾರಿಗಳು ಸ್ಥಳಕ್ಕಾಗಮಿಸಿದ್ದರು. ಬಳಿಕ 37 ಪ್ರಯಾಣಿಕರನ್ನು ಮತ್ತೊಂದು ಬಸ್‌ನಲ್ಲಿ ಕಳುಹಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net