ಕೆಎಸ್‌ಇಬಿ ಅರೆಬರೆ ಕಾಮಗಾರಿ

ಕನ್ನಟಿಕಾನ ಪ್ರದೇಶದಲ್ಲಿ ಕೇಬಲ್ ಅಳವಡಿಸಲು ರಸ್ತೆ ಅಂಚಿಗೆ ತೆಗೆದಿರುವ ಮಣ್ಣನ್ನು ಸಮರ್ಪಕವಾಗಿ ಮುಚ್ಚದೆ ಹಾಗೇ ಬಿಟ್ಟಿರುವುದು.
ಕನ್ನಟಿಕಾನ ಪ್ರದೇಶದಲ್ಲಿ ಕೇಬಲ್ ಅಳವಡಿಸಲು ರಸ್ತೆ ಅಂಚಿಗೆ ತೆಗೆದಿರುವ ಮಣ್ಣನ್ನು ಸಮರ್ಪಕವಾಗಿ ಮುಚ್ಚದೆ ಹಾಗೇ ಬಿಟ್ಟಿರುವುದು.
Published on
ಪುರುಷೋತ್ತಮ ಪೆರ್ಲ ಕಾಸರಗೋಡು
ಲೋಕೋಪಯೋಗಿ ಮತ್ತು ವಿದ್ಯುತ್ ಇಲಾಖೆ ಜಂಟಿಯಾಗಿ ನಡೆಸುತ್ತಿರುವ ಕಾಮಗಾರಿಯಿಂದ ಪೆರ್ಲ-ಸ್ವರ್ಗ ರಸ್ತೆಯ ಕನ್ನಟಿಕಾನ, ಸೈಪಂಗಲ್ಲು ಪ್ರದೇಶದ ಜನತೆ ಸಂಕಷ್ಟ ಅನುಭವಿಸುತ್ತಿದ್ದಾರೆ.
ಎಣ್ಮಕಜೆ ಪಂಚಾಯಿತಿಯ ಪೆರ್ಲ-ಸೂರಂಬೈಲ್ ರಸ್ತೆಯ ಸ್ವರ್ಗ ಹಾದಿ ಮಧ್ಯೆ ಕನ್ನಟಿಕಾನದಲ್ಲಿ ಕೆಎಸ್‌ಇಬಿ ನಡೆಸುತ್ತಿರುವ ಕಾಮಗಾರಿ ಪ್ರಯಾಣಿಕರು ಮತ್ತು ವಾಹನ ಚಾಲಕರ ಪಾಲಿಗೆ ಸಂಕಷ್ಟ ತಂದೊಡ್ಡುತ್ತಿರುವುದರ ಜತೆಗೆ ಕೃಷಿ ಭೂಮಿಗೂ ಸಂಚಕಾರ ಎದುರಾಗುವ ಸಾಧ್ಯತೆ ಇದೆ.
ವಿದ್ಯುತ್ ಎಚ್‌ಟಿ ಲೈನ್ ಭೂಗತ ಅಳವಡಿಕೆ ಕಾಮಗಾರಿಗಾಗಿ ರಸ್ತೆ ಅಂಚಿನಲ್ಲಿ ಹೊಂಡಗಳನ್ನು ತೆಗೆಯಲಾಗಿದೆ. ಕೇಬಲ್ ಅಳವಡಿಕೆ ಬಳಿಕ ಮಣ್ಣನ್ನು ಸೂಕ್ತ ರೀತಿಯಲ್ಲಿ ಮುಚ್ಚದೆ ಹಾಗೇ ಬಿಟ್ಟಿರುವುದರಿಂದ ಮಳೆಗಾಲದಲ್ಲಿ ರಸ್ತೆ ಬದಿಯಲ್ಲಿರುವ ರಾಶಿ ಮಣ್ಣು ಕೃಷಿ ಭೂಮಿಗೆ ಬೀಳುವ ಸಾಧ್ಯತೆಯಿದೆ.
ಪೆರ್ಲದ ಕನ್ನಟಿಕಾನ ಸಮೀಪದ ಕುದ್ವ ಪ್ರದೇಶದಿಂದ ಕಜಂಪಾಡಿವರೆಗೆ ಎಚ್‌ಟಿ ವಿದ್ಯುತ್ ಲೈನ್ ಭೂಗತವಾಗಿ ಕೇಬಲ್ ಅಳವಡಿಸುವ ಕೆಎಸ್‌ಇಬಿ ಯೋಜನೆಯನ್ವಯ ರಸ್ತೆ ಅಂಚಿಗೆ ಹೊಂಡ ತೆಗೆಯಲಾಗಿದ್ದು, ಇದನ್ನು ಸಮರ್ಪಕವಾಗಿ ಮುಚ್ಚದಿರುವುದು ಸಮಸ್ಯೆಗೆ ಕಾರಣವಾಗಿದೆ. ಮಣ್ಣನ್ನು ಸಮತಟ್ಟುಗೊಳಿಸಿ, ಇದಕ್ಕೆ ಕಾಂಕ್ರೀಟ್ ಅಳವಡಿಸಿ, ಮಣ್ಣು ಮಳೆನೀರಿಗೆ ಕೊಚ್ಚಿಕೊಂಡು ಹೋಗದಂತೆ ತಡೆಗಟ್ಟಲು ಸಾರ್ವಜನಿಕರು ಮನವಿ ಮಾಡಿದ್ದರೂ ಇಲಾಖೆ ಸ್ಪಂದಿಸಿಲ್ಲ.
ಇಕ್ಕಟ್ಟಾದ ರಸ್ತೆಯಲ್ಲಿ ಸಂಚಾರ ಸಮಸ್ಯೆ: ಕಜಂಪಾಡಿವರೆಗೆ ಕಂಬ ಅಳವಡಿಸಿ ವಿದ್ಯುತ್ ಲೈನ್ ಎಳೆಯಲು ಸಾವಿರಾರು ಮರಗಳನ್ನು ಕಡಿಯಬೇಕಾಗುತ್ತದೆ. ಜತೆಗೆ ತಂತಿಗಳಿಗೆ ಮರ, ಮರದ ರೆಂಬೆಗಳು ಉರುಳಿ ಬಿದ್ದು ನಷ್ಟ ಉಂಟಾಗುತ್ತದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಇಲ್ಲಿ ಭೂಗತ ಕೇಬಲ್ ಅಳವಡಿಸಲಾಗುತ್ತಿದೆ. ಆದರೆ ಅಸಮರ್ಪಕ ಕಾಮಗಾರಿಯಿಂದಾಗಿ ಮೊದಲೇ ಇಕ್ಕಟ್ಟಾಗಿರುವ ಈ ರಸ್ತೆ ಕೆಎಸ್‌ಇಬಿಯ ಕೇಬಲ್ ಅಳವಡಿಕೆ ಕಾಮಗಾರಿಯಿಂದ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಅಗಲಕಿರಿದಾದ ರಸ್ತೆ, ಕಡಿದಾದ ತಿರುವು, ಜತೆಗೆ ಅಪಘಾತ ಮರುಕಳಿಸುತ್ತಿರುವ ಪ್ರದೇಶ ಇದಾಗಿದ್ದು, ಕೆಎಸ್‌ಇಬಿಯ ಕೇಬಲ್ ಅಳವಡಿಕೆ ಕಾರ್ಯದಿಂದ ಈ ರಸ್ತೆ ಪ್ರಯಾಣಿಕರು ಹಾಗೂ ಚಾಲಕರ ಪಾಲಿಗೆ ನರಕಸದೃಶವಾಗುತ್ತಿದೆ.

ಮುಚ್ಚಿಹೋಗಿರುವ ಚರಂಡಿ

ಮಳೆನೀರು ಹರಿಯುವ ಚರಂಡಿ ಸಂಪೂರ್ಣ ಮುಚ್ಚಿಹೋಗಿದೆ. ಇಲ್ಲಿಂದ ಭಾರಿ ಪ್ರಮಾಣದ ಮಣ್ಣು ಮಳೆನೀರಿನೊಂದಿಗೆ ಕೊಚ್ಚಿಹೋದಲ್ಲಿ ಕೆಳಭಾಗದಲ್ಲಿರುವ ಕೃಷಿ ಭೂಮಿಗೆ ನುಗ್ಗುವ ಭೀತಿ ಎದುರಾಗಿದೆ. ಕೇಬಲ್ ಅಳವಡಿಸುವ ಸಂದರ್ಭ ಕುಡಿಯುವ ನೀರು ಪೂರೈಕೆಯ ಪೈಪ್ ತುಂಡಾಗಿ ಹಲವು ಮನೆಗಳಿಗೆ ನೀರು ವಿತರಣೆಯೂ ಅಸ್ತವ್ಯಸ್ತಗೊಂಡಿತ್ತು.

ಸ್ಥಳೀಯರ ಆಕ್ರೋಶ

ಒಂದೆಡೆ ಸರ್ಕಾರದ ಕಡೆಯಿಂದ ಮಳೆಗಾಲಪೂರ್ವ ಸ್ವಚ್ಛತೆ ನಡೆಯುತ್ತಿದ್ದರೆ, ಇನ್ನೊಂದೆಡೆ ಅಭಿವೃದ್ಧಿ ಕಾಮಗಾರಿ ನೆಪದಲ್ಲಿ ಚರಂಡಿಯನ್ನು ಮುಚ್ಚುವ ಸ್ಥಿತಿ ಎದುರಾಗಿದೆ. ಪೆರ್ಲ-ಸ್ವರ್ಗ-ಸೂರಂಬೈಲು ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಈ ಊರಿನ ಜನತೆಯ ಹಲವು ದಶಕಗಳ ಬೇಡಿಕೆಗೆ ಸರ್ಕಾರ ಇದುವರೆಗೆ ಸ್ಪಂದಿಸಿಲ್ಲ. ಅಂತಾರಾಜ್ಯ ಸಂಪರ್ಕದ ರಸ್ತೆಯೊಂದು ಶಿಥಿಲಾವಸ್ಥೆಯಲ್ಲಿದ್ದರೂ, ಶಾಸಕರೂ ಸೇರಿದಂತೆ ಜನಪ್ರತಿನಿಧಿಗಳ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರಕೃತಿ ಸಂರಕ್ಷಣೆ ಹಿನ್ನೆಲೆಯಲ್ಲಿ ಭೂಗತ ಕೇಬಲ್ ಅಳವಡಿಕೆಗೆ ಕೆಎಸ್‌ಇಬಿಗೆ ಮುಂದಾಗಿದ್ದು, ಮಳೆನೀರು ಹರಿಯುವ ಚರಂಡಿ ವ್ಯವಸ್ಥೆಗೆ ಹಾಗೂ ರಸ್ತೆಗೆ ಹಾನಿಯಾಗದ ರೀತಿಯಲ್ಲಿ ಕಾಮಗಾರಿ ನಡೆಸಲು ಅನುಮತಿ ನೀಡಲಾಗಿದೆ. ಈ ಬಗ್ಗೆ ಲೋಪಗಳಿದ್ದಲ್ಲಿ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು.

— ಕೆ.ಭರತನ್, ಪ್ರಭಾರ ಸಹಾಯಕ ಇಂಜಿನಿಯರ್ ಲೋಕೋಪಯೋಗಿ ಇಲಾಖೆ, ಬದಿಯಡ್ಕ ವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net