ಕೊಂಕಣಿ ಭಾಷೆಯ ಹಿರಿಯ ಸಾಹಿತಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ. ಜೆರಾಲ್ಡ್ ಐಸಾಕ್ ಲೋಬೊ, ಜೋಕಿಂ ಸ್ಪ್ಯಾನಿ ಅಲ್ವಾರಿಸ್, ಚಾರ್ಲ್ಸ್ ಮಿನೇಜಸ್, ಅನಿಲ್ ಡಿಸೋಜ, ರಾಜೇಶ್ ಜಿ., ನವೀನ್ ಲೋಬೊ, ಸಪ್ನಾ ಕ್ರಾಸ್ತಾ, ಸುನಿಲ್ ಸಿದ್ದಿ ಇತರರಿದ್ದರು.
Published on:
Copied
Follow Us
* ಡಾ. ಜೆರಾಲ್ಡ್ ಐಸಾಕ್ ಲೋಬೊ ಸಲಹೆ
* ಸಾಧಕರಿಗೆ ಗೌರವ ಪ್ರಶಸ್ತಿ, ಪುಸ್ತಕ ಪುರಸ್ಕಾರ ಪ್ರದಾನ
ಉಡುಪಿ: ಜಾಗತಿಕ, ಅಂತಾರಾಷ್ಟ್ರೀಯ ಭಾಷೆಗಳ ನಡುವೆ ಪ್ರಾದೇಶಿಕ ಭಾಷೆಗಳ ಪ್ರಭಾವ ಕಡಿಮೆಯಾಗುತ್ತಿದೆ. ಆದರೂ ಕೊಂಕಣಿ ಸಾಹಿತ್ಯ ಅಕಾಡೆಮಿಯು ಭಾಷೆ ಉಳಿಸುವಲ್ಲಿ ದೀಪದಂತೆ ಬೆಳಗುತ್ತಿದೆ. ಹೀಗಾಗಿ ಕೊಂಕಣಿಯನ್ನು ಪುರಾತನ ಭಾಷೆಗೆ ಸೀಮಿತವಾಗಲು ಬಿಡಬಾರದು. ನಿಮ್ಮ ಮಕ್ಕಳು ಹೆಮ್ಮೆಯಿಂದ ಕೊಂಕಣಿಯಲ್ಲಿ ಮಾತನಾಡುವಂತೆ ಉತ್ತೇಜನ ನೀಡಬೇಕು. ಕೊಂಕಣಿಯು ನಮ್ಮ ಅಸ್ತಿತ್ವದ ಪ್ರಶ್ನೆಯಾಗಿದೆ ಎಂದು ಉಡುಪಿ ಕಥೋಲಿಕ್ ಧರ್ಮ ಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಅಭಿಪ್ರಾಯಪಟ್ಟರು.
ಉದ್ಯಾವರದ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ವಠಾರದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ 2025ನೇ ಸಾಲಿನ ಕೊಂಕಣಿ ಗೌರವ ಪ್ರಶಸ್ತಿ ಮತ್ತು ಪುಸ್ತಕ ಪುರಸ್ಕಾರ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕೊಂಕಣಿ ಸಮಾನತೆಯ ಭಾಷೆಯಾಗಿದೆ. ಹಿಂದೂ, ಕ್ರಿಶ್ಚಿಯನ್ ಹಾಗೂ ಮುಸ್ಲೀಮರೂ ಸಹ ಕೊಂಕಣಿ ಮಾತನಾಡುತ್ತಾರೆ ಎಂದರು.
ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಪ್ಯಾನಿ ಅಲ್ವಾರಿಸ್ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಶೋಕಮಾತಾ ದೇವಾಲಯದ ಧರ್ಮಗುರು ಚಾರ್ಲ್ಸ್ ಮಿನೇಜಸ್, ಉದ್ಯಾವರ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ನ ಧರ್ಮಗುರು ಅನಿಲ್ ಡಿಸೋಜ, ಕೊಂಕಣಿ ಅಕಾಡೆಮಿ ರಿಜಿಸ್ಟ್ರಾರ್ ರಾಜೇಶ್ ಜಿ., ಅಕಾಡೆಮಿ ಸದಸ್ಯರಾದ ನವೀನ್ ಲೋಬೊ, ಸಪ್ನಾ ಕ್ರಾಸ್ತಾ, ಸುನೀಲ್ ಸಿದ್ದಿ, ಮಾಮ್ದು ಇಬ್ರಾಹಿಂ, ಹೂಡೆ ಬೀಚ್ ಹೀಲಿಂಗ್ ಹೋಮ್ನ ಡಾ. ಮಹಮ್ಮದ್ ರಫೀಕ್, ದಯಾನಂದ ಮಡೇಕರ್ ಉಪಸ್ಥಿತರಿದ್ದರು.
ಪರಿಚಯ ಪಾಂಬೂರು ಸಂಸ್ಥೆಯ ಟ್ರಸ್ಟಿ ಪ್ರಕಾಶ್ ನೊರೋನ್ಹಾ ಸಭಾ ಕಾರ್ಯಕ್ರಮ ನಿರೂಪಿಸಿದರು. ನಿಲಿಶಾ ಡಿಸೋಜ ಮತ್ತು ಸ್ಟೀವನ್ ಕುಲಾಸೋ ಅವರು ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಖಾರ್ವಿ, ಸಿದ್ದಿ, ಕುಡುಬಿ ಸಮುದಾಯದ ಸಾಂಸ್ಕೃತಿಕ ನೃತ್ಯ, ಬ್ರಾಸ್ ಬ್ಯಾಂಡ್ ಹಾಗೂ ಕೊಂಕಣಿ ಸಂಗೀತ ರಸಮಂಜರಿ ನಡೆಯಿತು.
ಸಾಧಕರಿಗೆ ಪ್ರಶಸ್ತಿ, ಪುರಸ್ಕಾರ ಪ್ರದಾನ
ಕೊಂಕಣಿ ಸಾಹಿತ್ಯ ವಿಭಾಗದಲ್ಲಿ ರೊನ್ ರೊಚ್ ಕಾಸ್ಸಿಯಾ, ಕೊಂಕಣಿ ಕಲಾ ವಿಭಾಗದಲ್ಲಿ ರಾಮದಾಸ್ ದತ್ತಾತ್ರೇಯ ಗುಲ್ವಾಡಿ, ಕೊಂಕಣಿ ಜಾನಪದ ವಿಭಾಗದಲ್ಲಿ ಸೈರು (ಮುರಳೀಧರ್) ಪುತ್ತು ನಾಯ್ಕ ಅವರಿಗೆ ತಲಾ 50 ಸಾವಿರ ರೂ. ನಗದು, ಪ್ರಶಸ್ತಿ ಫಲಕ ಪ್ರದಾನ ಮಾಡಲಾಯಿತು.
* ಪುಸ್ತಕ ಪುರಸ್ಕಾರ: ಕೊಂಕಣಿ ಕವನ ವಿಭಾಗದಲ್ಲಿ ಕವಿ ಆ್ಯಂಡ್ರೂ ಎಲ್. ಡಿಕುನ್ಹಾ ಅವರ 'ಉಜ್ವಾಡಾಚ್ಯೆ ವೆಂಗೆಂತ್' ಪುಸ್ತಕ, ಕೊಂಕಣಿ ಲೇಖನ ವಿಭಾಗದಲ್ಲಿ ಲೇಖಕ ರೋಶನ್ ಮೆಲ್ಕಿ ಸಿಕ್ವೇರಾ ಅವರ 'ಕೊಂಕ್ಣಿ ಸರ್ಕಸ್' ಪುಸ್ತಕ, ಕೊಂಕಣಿ ಸಣ್ಣ ಕಥೆಗಳ ವಿಭಾಗದಲ್ಲಿ ಲೇಖಕ ರಿಚರ್ಡ್ ಅಲ್ವಾರಿಸ್ ಅವರ 'ಫಿತುರಿ ಪುಸ್ತಕಕ್ಕೆ ತಲಾ 25 ಸಾವಿರ ರೂ. ನಗದು, ಫಲಕ ವಿತರಿಸಲಾಯಿತು.
"
ಇಂದಿನ ಯುವ ಪೀಳಿಗೆ ಕೊಂಕಣಿ ಭಾಷೆಯಿಂದ ದೂರ ಸರಿಯುತ್ತಿರುವುದು ಭಾಷಾ ಅಭಿವೃದ್ಧಿಗೆ ತೊಡಕಾಗುತ್ತಿದೆ. ಯುವಸಮುದಾಯ ಹಾಗೂ ವಿದ್ಯಾರ್ಥಿಗಳಲ್ಲಿ ಕೊಂಕಣಿಯ ಅಭಿಮಾನ ಮೂಡಿಸುವ ಕೆಲಸವನ್ನು ಹಿರಿಯ ಕೊಂಕಣಿಗರೇ ಮಾಡಬೇಕಾದ ಅಗತ್ಯತೆ ಇದೆ. ನಾವೆಲ್ಲರೂ ಕೊಂಕಣಿ ಭಾಷೆಯ ಅಭಿವೃದ್ಧಿಯಲ್ಲಿ ತೊಡಗಿಕೊಳ್ಳಬೇಕು.