ಕೊಲ್ಲೂರಿಗೆ ಬೇಕು 24X7 ಆಸ್ಪತ್ರೆ

 ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ.
ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ.
Published on
ವಿಜಯವಾಣಿ ಸುದ್ದಿಜಾಲ ಬೈಂದೂರು
ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕೆಂಬ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. ಇತ್ತೀಚೆಗೆ ಕೊಲ್ಲೂರು ಸಮೀಪದ ದಳಿ ಎಂಬಲ್ಲಿ ನಡೆದ ಭೀಕರ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ಮೃತಪಟ್ಟು ಮಕ್ಕಳ ಸಹಿತ ಹಲವರು ಗಾಯಗೊಂಡಿದ್ದು, ತುರ್ತುಚಿಕಿತ್ಸೆಗೆ ಕೊಲ್ಲೂರು ಪ್ರಾಥಮಿಕ ಆಸ್ಪತ್ರೆ ತೆರೆದಿರಲಿಲ್ಲ. ತುರ್ತು ಸೇವೆಗೆ 108 ಆಂಬುಲೆನ್ಸ್ ಸೇವೆ ಕೂಡ ಸಿಕ್ಕಿರಲಿಲ್ಲ. ಕೊಲ್ಲೂರಿನಲ್ಲಿ 24್ಡ7 ಆಸ್ಪತ್ರೆಯೊಂದಿಗೆ ವೈದ್ಯರು, ನುರಿತ ಸಿಬ್ಬಂದಿ ಹಾಗೂ ಆಂಬುಲೆನ್ಸ್ ವಾಹನ ಸೇವೆ ಸಿಗಬೇಕು. ಈ ಬಗ್ಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿಸಬೇಕೆಂದು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸಿಬ್ಬಂದಿ ಕೊರತೆ

ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರವು ಕೊಲ್ಲೂರು, ಜಡ್ಕಲ್, ಮುದೂರು, ಗೋಳಿಹೊಳೆಯಲ್ಲಿ ಉಪಕೇಂದ್ರಗಳನ್ನು ಹೊಂದಿದ್ದು, ಸಮುದಾಯ ಆರೋಗ್ಯ ಅಧಿಕಾರಿ ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಸಿಬ್ಬಂದಿ ಕೊರತೆಯಿದೆ. ಪ್ರಾಥಮಿಕ ಆರೋಗ್ಯ ಕೇಂದ್ರವಾದ ಕಾರಣ ಬೆಳಗ್ಗೆ 9ರಿಂದ ಸಂಜೆ 4.30ರ ತನಕ ಹಾಗೂ ರಜಾದಿನಗಳಲ್ಲಿ ಅರ್ಧ ದಿನ ಸೇವೆ ಸಿಗುತ್ತದೆ. ಕೊಲ್ಲೂರು ದೇಗುಲದಿಂದ ನೀಡಲಾಗಿದ್ದ ಆಂಬುಲೆನ್ಸ್ ವಾಹನವನ್ನು ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ 128 ಪಿಎಚ್‌ಸಿಬಿ ಹುದ್ದೆ ಖಾಲಿಯಿದೆ. 108 ಆಂಬುಲೆನ್ಸ್ ಸಿಬ್ಬಂದಿ ಕೊರತೆಯೂ ಇದೆ.
ಪಶ್ಚಿಮಟ್ಟ, ಮಲೆನಾಡು ತಪ್ಪಲು, ಗುಡ್ಡಗಾಡು ಪ್ರದೇಶ, ವನ್ಯಜೀವಿ ವಲಯ ಹೊಂದಿಕೊಂಡಿರುವ ಕೊಲ್ಲೂರು ವ್ಯಾಪ್ತಿಯಲ್ಲಿ ಹಳ್ಳಿಬೇರು, ವಾವಿನಕಾರು, ನುಕ್ಸಾಲು, ಸಲಿಗೇರಿ ಮೊದಲಾದೆಡೆ ವಾಹನ ಸಂಪರ್ಕ ಹಾಗೂ ದೂರವಾಣಿ ನೆಟ್‌ವರ್ಕ್ ಸಮಸ್ಯೆಯಿದೆ. ಅಗತ್ಯ ಸಮಯಕ್ಕೆ ಸಾರಿಗೆ ಸೌಲಭ್ಯವಿಲ್ಲ. ಜಡ್ಕಲ್, ಮುದೂರು ಭಾಗದಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಾಗಿವೆ. ವಿಷಜಂತು, ಕಾಡುಪ್ರಾಣಿಗಳಿಂದ ಅವಡದಂತಹ ತುರ್ತು ಸಮಸ್ಯೆಗಳಾದಾಗ ಸಮೀಪದ ಕೊಲ್ಲೂರಿನಲ್ಲಿ 24 ಗಂಟೆ ಆರೋಗ್ಯ ಸೇವೆ ಲಭಿಸಿದಲ್ಲಿ ಅನುಕೂಲವಾಗಲಿದೆ.

ಎರಡು ಜಿಲ್ಲೆಗಳಿಗೆ ಅನುಕೂಲ

ಯಾವುದೇ ಪ್ರದೇಶದಲ್ಲಿ ಸಮುದಾಯ ಆಸ್ಪತ್ರೆಯಾದಲ್ಲಿ ಏಳು ದಿನ, 24 ಗಂಟೆ ಕರ್ತವ್ಯ ನಿರತ ವೈದ್ಯರು, ಪ್ರಸೂತಿ, ಮಕ್ಕಳ ತಜ್ಞರು, ಡೆಂಟಲ್, ಅನಸ್ತೇಶಿಯಾ ತಜ್ಞರು, ಸ್ಟಾಪ್ ನರ್ಸ್, ಅಂಬುಲೆನ್ಸ್, ರಕ್ತನಿಧಿ, ಅಸಾಂಕ್ರಮಿಕ ಕಾಯಿಲೆ ತಡೆಗಟ್ಟುವ ವಿಭಾಗ ಸಹಿತ ಎಲ್ಲ ತುರ್ತು ವೈದ್ಯಕೀಯ ಸೌಲಭ್ಯಗಳೊಂದಿಗೆ ಆರೋಗ್ಯ ಸೇವೆಗಳು ಲಭಿಸುತ್ತವೆ. ಕೊಲ್ಲೂರು ವ್ಯಾಪ್ತಿಯ ಕೆರಾಡಿ, ಹೊಸೂರು, ದಳಿ ಸಹಿತ ಶಿವಮೊಗ್ಗ ವ್ಯಾಪ್ತಿಗೊಳಪಡುವ ಹೊಸನಗರ, ಸಿಗಂದೂರು, ಬ್ಯಾಕೋಡು, ತುಂಬ್ರಿ, ನಿಟ್ಟೂರು ನಿವಾಸಿಗಳಿಗೆ ತತ್ಕಾಲಕ್ಕೆ ರಾತ್ರಿ ವೇಳೆಯೂ ಅಗತ್ಯ ಆರೋಗ್ಯ ಸೇವೆ ಪಡೆಯಲು ಅನುಕೂಲವಾಗಲಿದೆ. ಜನಸಂಖ್ಯೆ ಆಧಾರಿತವಾಗಿ ಸಮುದಾಯ ಆಸ್ಪತ್ರೆ ನಿರ್ಮಿಸಲಾಗುತ್ತದೆಯಾದರೂ ಗುಡ್ಡಗಾಡು ಪ್ರದೇಶಕ್ಕೆ ಕೊಂಚ ವಿನಾಯಿತಿಯಿದೆ. ಹತ್ತಾರು ಗ್ರಾಮಗಳಿಗೆ ಎರಡು ಜಿಲ್ಲೆಗಳ ಗಡಿಭಾಗದ ಜನರಿಗೆ ಅನುಕೂಲವಾಗಲು, ಪ್ರವಾಸಿಗರು, ಭಕ್ತರ ಹಿತದೃಷ್ಟಿಯಿಂದ ಕೊಲ್ಲೂರು ಕೂಡ ಸಮುದಾಯ ಆರೋಗ್ಯ ಕೇಂದ್ರವಾಗಲು ಸೂಕ್ತವಿದೆ. ಈಗಾಗಾಲೇ ಜಿಲ್ಲೆಯ ನಿಟ್ಟೆ, ಹೆಬ್ರಿ, ಕೋಟ, ಬ್ರಹ್ಮಾವರ, ಶಿರ್ವ, ಬೈಂದೂರಿನಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿವೆ. ಆದರೆ ಜಿಲ್ಲೆಯ ಜನಸಂಖ್ಯೆ ಪರಿಗಣಿಸಿದರೆ ಇನ್ನೂ ಐದು ಆಸ್ಪತ್ರೆಗಳ ಅಗತ್ಯವಿದೆ.

ಕೊಲ್ಲೂರು ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ್ದರಿಂದ ಲಕ್ಷಾಂತರ ಮಂದಿ ಭಕ್ತರ ಅನುಕೂಲಕ್ಕಾಗಿ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಈ ಹಿಂದೆಯೇ ದೇವಸ್ಥಾನದ ವತಿಯಿಂದ ಆಂಬುಲೆನ್ಸ್ ನೀಡಿ ಅದರ ಚಾಲಕರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲಾಗಿತ್ತು. ಕೊಲ್ಲೂರು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕೆಂಬ ಚಿಂತನೆಯಿದೆ. ಆದರೆ ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ಕಾರಣ ಆರೋಗ್ಯ ಇಲಾಖೆ ಪ್ರಸ್ತಾವನೆ ಕಳಿಸಿದಲ್ಲಿ ಸಮಿತಿ ಈ ಬಗ್ಗೆ ನಿರ್ಣಯ ವಾಡಬಹುದು. ರಾತ್ರಿ ಪಾಳಿಯಲ್ಲಿ ಕೊಲ್ಲೂರು ಆಸ್ಪತ್ರೆ ವೈದ್ಯರು, ಆರೋಗ್ಯ ಸಿಬ್ಬಂದಿ ಹಾಗೂ ಆಂಬುಲೆನ್ಸ್ ಸೌಕರ್ಯದೊಂದಿಗೆ ಕಾರ್ಯಾಚರಿಸಬೇಕಾದ ಅಗತ್ಯವಿದೆ.

— ಕೆ.ಬಾಬು ಶೆಟ್ಟಿ ತಗ್ಗರ್ಸೆ ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ

ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಉಪ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆಯಿದೆ. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 108 ಆಂಬುಲೆನ್ಸ್‌ಗೆ ಚಾಲಕ ಹಾಗೂ ಸ್ಟಾಪ್ ನರ್ಸ್ ನಿಯೋಜನೆಗೆ ಈಗಾಗಾಲೇ ಅಗತ್ಯ ಕ್ರಮ ವಹಿಸಲಾಗಿದೆ. ಸಮುದಾಯ ಆರೋಗ್ಯ ಕೇಂದ್ರಕ್ಕೂ ಈ ಹಿಂದೆ ಪ್ರಸ್ತಾವನೆ ಸಲ್ಲಿಸಿದ್ದು, ವ್ಯಾಪ್ತಿಯಲ್ಲಿ ಜನಸಂಖ್ಯೆಯ ತಾಂತ್ರಿಕ ಕಾರಣದಿಂದ ಅದು ಸಾಧ್ಯವಾಗಿಲ್ಲ.

— ಡಾ.ಬಸವರಾಜು ಹುಬ್ಬಳ್ಳಿ, ಡಿಎಚ್‌ಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net