ಯಕ್ಷಶಿಕ್ಷಣದಿಂದ ವಿದ್ಯಾರ್ಥಿಗಳಲ್ಲಿ ಜ್ಞಾನವೃದ್ಧಿ

ಉಡುಪಿ ಜಿಲ್ಲೆಯ ವಿವಿಧೆಡೆ 37 ದಿನಗಳ ಕಾಲ ನಡೆದ 'ಕಿಶೋರ ಯಕ್ಷಗಾನ ಸಂಭ್ರಮ&2025' ಅಭಿಯಾನ ಚಿತ್ತೂರು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಸಂಪನ್ನಗೊಂಡಿತು. ರಾಘವ ಶೆಟ್ಟಿ ಬೇಳೂರು, ಎಂ.ಗಂಗಾಧರ್​ ರಾವ್​, ಮುರಳಿ ಕಡೆಕಾರ್​, ಡಾ. ರತನ್​ಕುಮಾರ್​ ಶೆಟ್ಟಿ, ಡಾ. ರಾಜೇಶ್​ ಬಾಯರಿ, ಸುಗುಣಾ, ಆಶಾ ಆಚಾರ್ಯ, ಕರುಣಾಕರ್​ ಶೆಟ್ಟಿ, ನಾರಾಯಣ ಹೆಗಡೆ ಹಾಗೂ ವಿದ್ಯಾರ್ಥಿಗಳಿದ್ದರು.
ಉಡುಪಿ ಜಿಲ್ಲೆಯ ವಿವಿಧೆಡೆ 37 ದಿನಗಳ ಕಾಲ ನಡೆದ 'ಕಿಶೋರ ಯಕ್ಷಗಾನ ಸಂಭ್ರಮ&2025' ಅಭಿಯಾನ ಚಿತ್ತೂರು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಸಂಪನ್ನಗೊಂಡಿತು. ರಾಘವ ಶೆಟ್ಟಿ ಬೇಳೂರು, ಎಂ.ಗಂಗಾಧರ್​ ರಾವ್​, ಮುರಳಿ ಕಡೆಕಾರ್​, ಡಾ. ರತನ್​ಕುಮಾರ್​ ಶೆಟ್ಟಿ, ಡಾ. ರಾಜೇಶ್​ ಬಾಯರಿ, ಸುಗುಣಾ, ಆಶಾ ಆಚಾರ್ಯ, ಕರುಣಾಕರ್​ ಶೆಟ್ಟಿ, ನಾರಾಯಣ ಹೆಗಡೆ ಹಾಗೂ ವಿದ್ಯಾರ್ಥಿಗಳಿದ್ದರು.
Published on

* ವಿಮರ್ಶಕ ರಾಘವ ಶೆಟ್ಟಿ ಬೇಳೂರು ಅನಿಸಿಕೆ

* ಕಿಶೋರ ಯಕ್ಷಗಾನ ಮಹಾಭಿಯಾನ ಸಮಾಪನ

ಉಡುಪಿ: ಹದಿಹರೆಯದಲ್ಲಿ ಪಡೆದ ತರಬೇತಿ ಗಟ್ಟಿಯಾಗಿ, ಸ್ಥಿರವಾಗಿ ವಿದ್ಯಾರ್ಥಿಗಳ ಮನದಲ್ಲಿ ಉಳಿದುಕೊಳ್ಳುತ್ತದೆ. ಅದನ್ನು ವಿಜ್ಞಾನವೂ ದೃಢೀಕರಿಸಿದೆ. ಜ್ಞಾನವೃದ್ಧಿ ದೃಷ್ಟಿಯಿಂದ ಪ್ರೌಢಶಾಲೆಗಳಲ್ಲಿ ಯಕ್ಷಶಿಕ್ಷಣ ನೀಡುತ್ತಿರುವವುದ ಉತ್ತಮವಾದ ಉಪಕ್ರಮ. ಯಕ್ಷಗಾನ ಕಲೆಯ ಸಂವರ್ಧನೆಗೆ ಕಾರಣವಾಗುವ ಈ ಕಾರ್ಯವನ್ನು 18 ವರ್ಷದಿಂದ ಯಕ್ಷಶಿಕ್ಷಣ ಟ್ರಸ್ಟ್​ ಮುನ್ನಡೆಸುತ್ತಿದೆ. ಅದನ್ನು ಶ್ರದ್ಧೆಯಿಂದ ನಿರ್ವಹಿಸುತ್ತಿರುವ ಕಲಾರಂಗದ ಕಾರ್ಯಕರ್ತರು ಅಭಿನಂದನಾರ್ಹರು ಎಂದು ಯಕ್ಷಗಾನದ ಹಿರಿಯ ವಿಮರ್ಶಕ ರಾಘವ ಶೆಟ್ಟಿ ಬೇಳೂರು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ತೂರು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಬುಧವಾರ (ಡಿ.31) ರಾತ್ರಿ ಮುಕ್ತಾಯಗೊಂಡ ಯಕ್ಷಶಿಕ್ಷಣ ಟ್ರೆಸ್ಟ್​ ಉಡುಪಿಯ 'ಕಿಶೋರ ಯಕ್ಷಗಾನ ಮಹಾಭಿಯಾನ ಸಮಾಪನ' ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದರು. 
ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ್​ ರಾವ್​ ಮಾತನಾಡಿ, ನ.25ರಂದು ಬ್ರಹ್ಮಾವರದಲ್ಲಿ ಆರಂಭಗೊಂಡಿದ್ದ 'ಕಿಶೋರ ಯಕ್ಷಗಾನ ಸಂಭ್ರಮ-2025' ಕಾರ್ಯಕ್ರಮವು ಡಿ.31ರಂದು ಚಿತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮುಕ್ತಾಯಗೊಂಡಿದೆ. ಈ ವರ್ಷವೂ ಸಹ 3 ಸಾವಿರಕ್ಕೂ ಅಧಿಕ ಮಕ್ಕಳು ಯಕ್ಷಶಿಕ್ಷಣ ಪಡೆದಿದ್ದಾರೆ ಎಂದರು. 
ಡಾ. ರತನ್​ಕುಮಾರ್​ ಶೆಟ್ಟಿ, ಡಾ. ರಾಜೇಶ್​ ಬಾಯರಿ, ಸುಗುಣಾ, ಆಶಾ ಆಚಾರ್ಯ, ಕರುಣಾಕರ್​ ಶೆಟ್ಟಿ, ನಾರಾಯಣ ಹೆಗಡೆ ಉಪಸ್ಥಿತರಿದ್ದರು. ಯಕ್ಷಶಿಕ್ಷಣ ಪಡೆದ ವಿದ್ಯಾರ್ಥಿಗಳಾದ ಶ್ರಾವ್ಯಾ, ಯಶಸ್ವಿನಿ, ಶ್ರೇಯಸ್​, ಋತು ತಮ್ಮ ಯಕ್ಷ ಕಲಿಕೆಯ ಸ್ಮರಣೀಯ ಅನುಭವ ಹಂಚಿಕೊಂಡರು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಮಲ್ಯಾಡಿ ಲೈವ್​ನ ಪ್ರಶಾಂತ್​ ಹಾಗೂ ಪ್ರಸಾಧನ ತಂಡದ ಮುಖ್ಯಸ್ಥ ಗಣೇಶ್​ ಸಾಲಿಗ್ರಾಮ ಅವರನ್ನು ಸನ್ಮಾನಿಸಲಾಯಿತು.
ಟ್ರಸ್ಟ್​ನ ಕಾರ್ಯದರ್ಶಿ ಮುರಲಿ ಕಡೆಕಾರ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಾನಂದ ಶೆಟ್ಟಿ ಸ್ವಾಗತಿಸಿದರು. ನಾಗರಾಜ್​ ಶೆಟ್ಟಿ ನೈಕಂಬಿ ವಂದಿಸಿದರು. ರಾಘವೇಂದ್ರ ಶೆಟ್ಟಿ ನಿರೂಪಿಸಿದರು.

ಕಲೆ ಕಲಿತ 3,035 ವಿದ್ಯಾರ್ಥಿಗಳು

ಯಕ್ಷಶಿಕ್ಷಣ ಟ್ರಸ್ಟ್​ನ ವತಿಯಿಂದ ನಿರಂತರ 37 ದಿನಗಳ ಕಾಲ ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ 'ಕಿಶೋರ ಯಕ್ಷಗಾನ ಸಂಭ್ರಮ-2025' ನಡೆಯಿತು. ಒಟ್ಟು 94 ಶಾಲೆಗಳ ವಿದ್ಯಾರ್ಥಿಗಳು 12 ಕಡೆಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದರು. 41 ಗುರುಗಳು, ಐದು ಪ್ರಸಾಧನ ತಂಡಗಳು ಮಕ್ಕಳ ಯಕ್ಷಗಾನದ ಯಶಸ್ಸಿನಲ್ಲಿ ಮಹತ್ವದ ಪಾತ್ರ ನಿಭಾಯಿಸಿದವು. ಪ್ರದರ್ಶನದಲ್ಲಿ 1,063 ವಿದ್ಯಾರ್ಥಿಗಳು, 1,972 ವಿದ್ಯಾರ್ಥಿನಿಯರು ಸೇರಿ ಹೈಸ್ಕೂಲ್​ಗಳ ಒಟ್ಟು 3,035 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅವರಲ್ಲಿ 9 ಕ್ರೈಸ್ತ, 21 ಮುಸ್ಲಿಂ, ಬೇರೆ ಜಿಲ್ಲೆಯ 522, ಬೇರೆ ರಾಜ್ಯದ 21 ವಿದ್ಯಾರ್ಥಿಗಳು ಭಾಗವಹಿಸಿದ್ದು ಯಕ್ಷ ಅಭಿಯಾನದ ಸಾರ್ಥಕ್ಯದ ಸಂಕೇತವಾಗಿದೆ ಎಂದು ಮುರಳಿ ಕಡೆಕಾರ್​ ಸಂತಸ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net