ನ.16ರಿಂದ ಕಿಶೋರ ಯಕ್ಷಗಾನ ಸಂಭ್ರಮ

ಕಳೆದ ವರ್ಷ ಕಿಶೋರ ಯಕ್ಷಗಾನ ಸಂಭ್ರಮದಲ್ಲಿ ಪ್ರದರ್ಶನ ನೀಡಿದ ವಿದ್ಯಾರ್ಥಿಗಳು. (ಫೈಲ್​ ಚಿತ್ರ)
ಕಳೆದ ವರ್ಷ ಕಿಶೋರ ಯಕ್ಷಗಾನ ಸಂಭ್ರಮದಲ್ಲಿ ಪ್ರದರ್ಶನ ನೀಡಿದ ವಿದ್ಯಾರ್ಥಿಗಳು. (ಫೈಲ್​ ಚಿತ್ರ)
Published on: 

* ಡಿ.28ರ ವರೆಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಪ್ರದರ್ಶನ

* ಜಿಲ್ಲೆಯ 11 ಸ್ಥಳಗಳಲ್ಲಿ ಮಕ್ಕಳ ಪ್ರತಿಭೆ ಅನಾವರಣ

ಉಡುಪಿ: ಯಕ್ಷಗಾನ ಕಲಾರಂಗದ ಯಕ್ಷಶಿಕ್ಷಣ ಟ್ರಸ್ಟ್​ ಕಳೆದ 17 ವರ್ಷದಿಂದ ನಡೆಸಿಕೊಂಡು ಬರುತ್ತಿರುವ ಪ್ರೌಢಶಾಲಾ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನಗಳ ಕಾರ್ಯಕ್ರಮ ಈ ವರ್ಷ ನ.16ರಿಂದ ಡಿ.28ರ ವರೆಗೆ ನಡೆಯಲಿದೆ.

ನ.16ರ ಸಂಜೆ 6:30ಕ್ಕೆ ಬ್ರಹ್ಮಾವರದ ಬಂಟರ ಸಂದ ಮುಂಭಾಗದಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಅಧ್ಯಕ್ಷತೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇನ್ನಿತರ ಗಣ್ಯರು ಉದ್ಘಾಟಿಸಲಿದ್ದಾರೆ.

ಉಡುಪಿ, ಕಾಪು, ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ವ್ಯಾಪ್ತಿಯ ಒಟ್ಟು 99 ಪ್ರೌಢಶಾಲೆಗಳಲ್ಲಿ 41 ಯಕ್ಷ ಗುರುಗಳಿಂದ ಯಕ್ಷಗಾನ ತರಬೇತಿ ನಡೆಸಲಾಗುತ್ತಿದೆ. 'ಕಿಶೋರ ಯಕ್ಷಗಾನ ಸಂಭ್ರಮ-2026'ರ ಅಡಿಯಲ್ಲಿ ಒಟ್ಟು ಹನ್ನೊಂದು ಆಯ್ದ ಸ್ಥಳಗಳಲ್ಲಿ ಯಕ್ಷಗಾನ ಕಲಾರಂಗದ ಸಂಯೋಜನೆಯಲ್ಲಿ ಪ್ರದರ್ಶನ ಪ್ರಸ್ತುತಿಗೊಳ್ಳಲಿದೆ.

ಉಡುಪಿಯ 24 ಪ್ರದರ್ಶನಗಳು ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ ಮತ್ತು ಆಯಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ, ಕಿರಣಕುಮಾರ ಕೊಡ್ಗಿ, ಗುರುರಾಜ ಗಂಟಿಹೊಳೆ ಹಾಗೂ ಪ್ರದರ್ಶನ ಸಂಘಟನಾ ಸಮಿತಿಗಳ ಸಹಕಾರದೊಂದಿಗೆ ನಡೆಯಲಿದೆ. 3,500ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಟ್ರಸ್ಟ್​ನ ಅಧ್ಯಕ್ಷ ಯಶ್​ಪಾಲ್​ ಸುವರ್ಣ, ಕಾರ್ಯದರ್ಶಿ ಮುರಳಿ ಕಡೆಕಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.