ಕಿಂಡಿ ಅಣೆಕಟ್ಟು ಹಲಗೆ ತೆರವು ಆರಂಭ

 ಬೆಳ್ತಂಗಡಿ ತಾಲೂಕಿಸ್ಲಿ ಕಿಂಡಿ ಅಣೆಕಟ್ಟುಗಳ ಹಲಗೆ ತೆಗೆಯುವ ಕಾರ್ಯ ಆರಂಭವಾಗಿರುವುದು.
ಬೆಳ್ತಂಗಡಿ ತಾಲೂಕಿಸ್ಲಿ ಕಿಂಡಿ ಅಣೆಕಟ್ಟುಗಳ ಹಲಗೆ ತೆಗೆಯುವ ಕಾರ್ಯ ಆರಂಭವಾಗಿರುವುದು.
Published on
ಮನೋಹರ್ ಬಳಂಜ ಬೆಳ್ತಂಗಡಿ
ನದಿಗಳಲ್ಲಿ ನೀರಿನ ಹರಿವು ಬಲಗೊಳ್ಳುತ್ತಿದ್ದಂತೆ ಕಿಂಡಿ ಅಣೆಕಟ್ಟುಗಳಿಗೆ ಅಳವಡಿಸಿರುವ ಹಲಗೆಗಳ ತೆರವು ಕಾರ್ಯ ಆರಂಭವಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ನೇತ್ರಾವತಿ, ಮೃತ್ಯುಂಜಯ, ಸೋಮಾವತಿ, ಫಲ್ಗುಣಿ, ಕಪಿಲಾ ನದಿ, ನೆರಿಯ, ಅಣಿಯೂರು ಹೊಳೆಗಳ ಸಹಿತ ಅನೇಕ ಹಳ್ಳ, ತೋಡುಗಳಿಗೆ ಸಣ್ಣ ನೀರಾವರಿ ಇಲಾಖೆಯಿಂದ 74 ಕಿಂಡಿ ಅಣೆಕಟ್ಟುಗಳನ್ನು ಕಟ್ಟಲಾಗಿದೆ. ಬೇಸಿಗೆಯಲ್ಲಿ ಕೃಷಿ ಬಳಕೆಗೆ ನೀರನ್ನು ಸಂಗ್ರಹಿಸುವ ಉದ್ದೇಶದಿಂದ ಈ ಕಿಂಡಿ ಅಣೆಕಟ್ಟುಗಳಿಗೆ ಹಲಗೆಗಳನ್ನು ಅಳವಡಿಸಲಾಗಿದೆ.
ಈ ಪೈಕಿ 50ಕ್ಕೂ ಹೆಚ್ಚು ಕಿಂಡಿ ಅಣೆಕಟ್ಟುಗಳು ಸುಸ್ಥಿತಿಯಲ್ಲಿದ್ದು ನೀರಾವರಿ ಉಪಯೋಗಕ್ಕೆ ಸಹಕಾರಿಯಾಗಿವೆ. ನಿರ್ವಹಣೆ ಕೊರತೆಯಿಂದ ಅಥವಾ ನೀರು ತುಂಬಲು ಸಾಧ್ಯವಾಗದ ಕಾರಣ ಉಳಿದ ಕಿಂಡಿ ಅಣೆಕಟ್ಟುಗಳು ನಿರುಪಯುಕ್ತವಾಗಿವೆ. ತಾಲೂಕಿನಲ್ಲಿ 30 ಕಿಂಡಿ ಅಣೆಕಟ್ಟುಗಳಿಗೆ ಮರದ ಹಲಗೆ, 20 ಕಿಂಡಿ ಅಣೆಕಟ್ಟುಗಳಿಗೆ ತಗಡಿನ ಶೀಟ್ ಅಳವಡಿಸಿ ನೀರು ಸಂಗ್ರಹಿಸಲಾಗುತ್ತದೆ. ಇದರಿಂದ ಕೃಷಿ ಬಳಕೆಗೆ ಮಾತ್ರವಲ್ಲದೆ ಸುತ್ತಮುತ್ತಲಿನ ಅಂತರ್ಜಲ ಮಟ್ಟ ಕಾಪಾಡಲೂ ಸಹಕಾರಿಯಾಗುತ್ತದೆ. ಸಾಮಾನ್ಯವಾಗಿ ಬಹುತೇಕ ಕಿಂಡಿ ಅಣೆಕಟ್ಟುಗಳಲ್ಲಿ ಮಾರ್ಚ್ ಕೊನೆ ತನಕವೂ ನೀರು ಸಂಗ್ರಹ ಇರುವುದರಿಂದ ಈ ಭಾಗದ ಕೃಷಿಕರು ಬೇಸಿಗೆ ಬೆಳೆಗೆ ನೀರಿಗಾಗಿ ಪರದಾಡುವುದು ತಪ್ಪಿದೆ.

ಹಲಗೆಗಳ ತೆರವು ಕಾರ್ಯ

ಇದೀಗ ಮಳೆ ಆರಂಭವಾಗಿದ್ದು ಇನ್ನೇನು ಮುಂಗಾರು ಪ್ರವೇಶಿಸುವ ಹಿನ್ನೆಲೆಯಲ್ಲಿ ಕಿಂಡಿ ಅಣೆಕಟ್ಟುಗಳ ಹಲಗೆ ತೆರವು ಕಾರ್ಯ ಆರಂಭವಾಗಿದೆ. ಆಗಾಗ ಸುರಿಯುತ್ತಿರುವ ಮಳೆಯಿಂದಾಗಿ ನದಿ, ಹೊಳೆ, ತೋಡುಗಳಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ಹಲಗೆಗಳನ್ನು ತೆರವು ಮಾಡಲಾಗುತ್ತಿದೆ. ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲೇ ನದಿ, ಹೊಳೆಗಳಲ್ಲಿ ಹೆಚ್ಚಿನ ನೀರು ಹರಿದು ಬಂದು ಕಿಂಡಿ ಅಣೆಕಟ್ಟುಗಳ ಹಲಗೆ ತೆರವು ಮಾಡಲು ಆಗಿರಲಿಲ್ಲ. ಇದರಿಂದಾಗಿ ಮೇ ತಿಂಗಳ ಕೊನೇ ವಾರದಲ್ಲಿ ಬಹುತೇಕ ನದಿಗಳಲ್ಲಿ ಕೃತಕ ನೆರೆ ಉಂಟಾಗಿ ಹಲವಾರು ತೋಟಗಳಿಗೆ ನದಿ ನೀರು ನುಗ್ಗಿತ್ತು. ಅಲ್ಲದೆ ಕಿಂಡಿ ಅಣೆಕಟ್ಟುಗಳಲ್ಲಿ ಅಪಾರ ಪ್ರಮಾಣದಲ್ಲಿ ತ್ಯಾಜ್ಯ, ಮರಮಟ್ಟು ಸಂಗ್ರಹವಾಗಿತ್ತು. ಬಳಿಕ ಜೂನ್ ಮೊದಲ ವಾರ ಹಲಗೆ ತೆರವು ಕಾರ್ಯ ನಡೆದಿತ್ತು.
ಎಚ್ಚರ ಅಗತ್ಯ: ಪ್ರಸ್ತುತ ನದಿ, ಹೊಳೆಗಳಲ್ಲಿ ನೀರಿನ ಹರಿವು ಹೆಚ್ಚುತ್ತಿದ್ದು ಕಿಂಡಿ ಅಣೆಕಟ್ಟುಗಳು ತುಂಬಿವೆ. ಹಲಗೆ ತೆರವು ಮಾಡುವಾಗ ಎಚ್ಚರವಹಿಸುವುದು ಅಗತ್ಯವಾಗಿದೆ. ಹಲಗೆ ತೆರವಾಗುತ್ತಿದ್ದಂತೆ ನದಿಗಳ ತಗ್ಗು ಪ್ರದೇಶದಲ್ಲಿ ಏಕಾಏಕಿ ನೀರಿನ ಹರಿವು ಹೆಚ್ಚಾಗುತ್ತದೆ. ನದಿ ತೀರ ಪ್ರದೇಶದ ಜನರು ಎಚ್ಚರಿಕೆಯಿಂದ ಇರಬೇಕು.

22 ಹೊಸ ವೆಂಟೆಡ್ ಡ್ಯಾಂಗೆ ಪ್ರಸ್ತಾವನೆ

ಶಾಸಕ ಹರೀಶ್ ಪೂಂಜ ಮುತುವರ್ಜಿಯಲ್ಲಿ ಕಳೆದ ಅವಧಿಯಲ್ಲಿ ತಾಲೂಕಿನಲ್ಲಿ 30ಕ್ಕೂ ಹೆಚ್ಚು ಹೊಸ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಇವೆಲ್ಲವೂ ಸೇತುವೆ ಸಹಿತ ಕಿಂಡಿ ಅಣೆಕಟ್ಟುಗಳಾಗಿದ್ದು ಹಲವು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಿವೆ. ಸಾಂಪ್ರದಾಯಿಕ ಕಟ್ಟ ಕಟ್ಟುವ ಪ್ರದೇಶಗಳಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಕೃಷಿಕರಿಗೆ ವರದಾನವಾಗಿದ್ದು, ಹಲವು ಕಿ.ಮೀ. ದೂರದವರೆಗೆ ನೀರು ಸಂಗ್ರಹಗೊಳ್ಳುವ ಕಾರಣ ತಾಲೂಕಿನ ಅಂತರ್ಜಲದ ವೃದ್ಧಿಗೂ ಸಹಕಾರಿಯಾಗಿವೆ. ಅರಸಿನಮಕ್ಕಿ, ತಣ್ಣೀರುಪಂಥ, ಪಟ್ರಮೆ ನೆರಿಯ, ಮಿತ್ತಬಾಗಿಲು, ನಾವೂರ, ಶಿರ್ಲಾಲು, ಸುಲ್ಕೇರಿಮೊಗ್ರು, ಸುಲ್ಕೇರಿ ಮೊದಲಾದ 22 ಕಡೆಗಳಲ್ಲಿ ಹೊಸ ಕಿಂಡಿ ಅಣೆಕಟ್ಟುಗಳಿಗೆ ಬೇಡಿಕೆ ಇದ್ದು, ಸಣ್ಣ ನೀರಾವರಿ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಕಿಂಡಿ ಅಣೆಕಟ್ಟುಗಳ ಹಲಗೆ ತೆರವು ಕಾರ್ಯ ಆರಂಭಿಸಲಾಗಿದೆ. ಇದಕ್ಕೆ ಸ್ಥಳೀಯ ಫಲಾನುಭವಿಗಳ ಸಹಕಾರ ಕೋರಲಾಗಿದೆ. ಕಿಂಡಿ ಅಣೆಕಟ್ಟುಗಳು ನಿರ್ವಹಣೆಗೆ ಖರ್ಚಾಗುವ ಹಣವನ್ನು ಅನುದಾನದ ಆಧಾರದಲ್ಲಿ ಫಲಾನುಭವಿಗಳಿಗೆ ನೀಡಲಾಗುವುದು.

— ರಾಕೇಶ್, ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ಬೆಳ್ತಂಗಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net