ಮತ್ತೆ ಕುಸಿಯುತಿದೆ ಕೆತ್ತಿಕಲ್ ಗುಡ್ಡ

 ಕೆತ್ತಿಕಲ್ ಗುಡ್ಡ ಮತ್ತೆ ಕುಸಿದಿರುವುದು.
ಕೆತ್ತಿಕಲ್ ಗುಡ್ಡ ಮತ್ತೆ ಕುಸಿದಿರುವುದು.
Published on

ಗುರುಪುರ: ಚತುತ್ಪಥವಾಗಿ ವಿಸ್ತರಣೆಗೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ 169ರ ಕೆತ್ತಿಕಲ್ ಗುಡ್ಡ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿಯಲಾರಂಭಿಸಿದ್ದು, ಸ್ಥಳೀಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ತಿರುವೈಲು ಸರ್ಕಾರಿ ಶಾಲೆಗೆ ಅನತಿ ದೂರದಲ್ಲಿ ಕೆತ್ತಿಕಲ್ ಗುಡ್ಡದ ಮಣ್ಣು ಹಾಗೂ ಬೃಹತ್ ಮುರ ಬಂಡೆಕಲ್ಲುಗಳು ಹೆದ್ದಾರಿಯತ್ತ ಉರುಳಲಾರಂಭಿಸಿವೆ. ಕಳೆದ ಒಂದು ತಿಂಗಳಿಂದ ಈ ಭಾಗದಲ್ಲಿ ಹೆದ್ದಾರಿ ಗುತ್ತಿಗೆ ಸಂಸ್ಥೆಯು ಗುಡ್ಡೆಗೆ ತಡೆಗೋಡೆ ನಿರ್ಮಿಸುತ್ತಿದೆ. 10 ದಿನಗಳ ಹಿಂದೆ ವಿಜಯವಾಣಿಯಲ್ಲಿ ಈ ಕುರಿತು ವರದಿ ಪ್ರಕಟವಾಗಿತ್ತು. ಕುಸಿಯುತ್ತಿರುವ ಎತ್ತರದ ಕೆತ್ತಿಕಲ್ ಗುಡ್ಡದ ಸುರಕ್ಷತೆಗೆ ನಿರ್ಮಿಸಲಾಗುತ್ತಿರುವ ತಡೆಗೋಡೆ ಇದಾಗಿದ್ದು, ಧಾರಾಕಾರ ಮಳೆಯಾದರೆ ಇದು ನೀರಲ್ಲಿಟ್ಟ ಹೋಮದಂತಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಅದು ಇಂದು ನಿಜವಾಗಿದೆ.
ಈ ಪ್ರದೇಶದಲ್ಲಿ ಕಳೆದ ವರ್ಷ ಗುಡ್ಡ ಕುಸಿದಿತ್ತು. ಆ ವೇಳೆ ಅತ್ಯಾಧುನಿಕ ತಂತ್ರಜ್ಞಾನದ ಸಿಮೆಂಟ್ ಹೊದಿಕೆ ಹಾಗೂ ಗುಡ್ಡದ ನೀರಿನ ಒರತೆ ತಡೆಗಟ್ಟಲು ನೂರಾರು ಕೊಳವೆ ಅಳವಡಿಸಲಾಗಿತ್ತು. ಕಳೆದ ವರ್ಷದ ಆರಂಭದ ಮಳೆಗೆ ಇವೆಲ್ಲ ಚಿಂದಿ ಚೂರಾಗಿತ್ತು. ಈ ವರ್ಷ ಗುಡ್ಡ ಕುಸಿದ ಈ ಭಾಗದಲ್ಲಿ ಹೆದ್ದಾರಿ ಮತ್ತು ಗುಡ್ಡ ಮಧ್ಯೆ ಹೆಚ್ಚು ಆಳ ಅಡಿಪಾಯವಿಲ್ಲದ ತಡೆಗೋಡೆ ನಿರ್ಮಿಸಲಾಗುತ್ತಿದೆ. ಧಾರಾಕಾರ ಮಳೆಗೆ ಕೆಳಭಾಗದ ಮಣ್ಣು ಸಡಿಲಗೊಂಡಾಗ ಮೇಲ್ಭಾಗದ ಬಂಡೆಕಲ್ಲುಗಳು ಹೆದ್ದಾರಿಯತ್ತ ಉರುಳಲಾರಂಭಿಸಿವೆ.

ಬಿರುಸಿನ ಮಳೆಯಾದಲ್ಲಿ ಮೇಲ್ಭಾಗದಲ್ಲಿರುವ ಕೆಲವು ಮುರ ಬಂಡೆಕಲ್ಲುಗಳು, ಮರಗಳು ಕುಸಿದು ಬೀಳಲಿವೆ. ಆಗ ತಡೆಗೋಡೆ ಮಣ್ಣುಪಾಲಾಗಲಿದೆ. ಗುಡ್ಡೆ ಕುಸಿದ ದುರ್ಘಟನೆ ಬಳಿಕ ಕೆತ್ತಿಕಲ್ ಪ್ರದೇಶದಲ್ಲಿ ಚತುಷ್ಪಥದಲ್ಲಿ ದ್ವಿಪಥ ಮಾತ್ರ ಉಳಿದಿದೆ.

ಅಪಾಯಕಾರಿ ಬೆಟ್ಟ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಮುಲ್ಲೈ ಮುಹಿಲನ್ ವರ್ಗಾವಣೆಯಾಗುವುದಕ್ಕೆ ಒಂದು ದಿನ ಮೊದಲು ಕೆತ್ತಿಕಲ್‌ಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದರು. ಪದೇಪದೆ ಉಂಟಾಗುತ್ತಿರುವ ಗುಡ್ಡ ಕುಸಿತ ನಿಯಂತ್ರಿಸುವ ಉದ್ದೇಶಕ್ಕಾಗಿ ಪರಿಹಾರ ನೀಡಿದರೆ ಈ ಭಾಗದಲ್ಲಿ ಎನ್‌ಎಚ್‌ಗೆ ಹೆಚ್ಚುವರಿ ಜಾಗ ಬಿಟ್ಟುಕೊಡುವುದಾಗಿ ಜಾಗದ ಮಾಲಕಿ ಸ್ಟೆಲ್ಲಾ ಫರ್ನಾಂಡಿಸ್ ಹೇಳಿದ್ದರು. ಜಾಗ ಸ್ವಾಧೀನ ಪ್ರಕ್ರಿಯೆ ಬಗ್ಗೆ ಜಿಲ್ಲಾಡಳಿತ ಇದುವರೆಗೆ ಮಾತುಕತೆ ನಡೆಸಿಲ್ಲ. ಗುಡ್ಡದ ಮೇಲ್ಗಡೆ ಅನತಿ ದೂರದಲ್ಲಿ ಮನೆ, ಅಡಿಕೆ ತೋಟವಿದೆ. ಹೀಗೆ ಗುಡ್ಡ ಕುಸಿಯುತ್ತ ಹೋದರೆ ಅಪಾಯ ಹೆಚ್ಚಾಗಲಿದೆ ಎಂದು ಸ್ಟೆಲ್ಲಾ ಅವರ ಪುತ್ರ ಅವಿನಾಶ್ ಫರ್ನಾಂಡಿಸ್ ವಿಜಯವಾಣಿಗೆ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net