ಮೂಡುಬಿದಿರೆ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲಾಯಿತು. ಸಮ್ಮೇಳನ ಅಧ್ಯಕ್ಷ ಅಬ್ದುಲ್ ಹಮೀದ್ ಪಕ್ಕಲಡ್ಕ, ಶ್ರೀ ಕಮಲಾದೇವಿ ಪ್ರಸಾದ ಅಸ್ರಣ್ಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಇದ್ದರು.
Published on:
Copied
Follow Us
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಕಳೆದ ಐದು ವರ್ಷಗಳಲ್ಲಿ 947ಕ್ಕೂ ಹೆಚ್ಚು ಕನ್ನಡ ಮಾಧ್ಯಮ ಶಾಲೆಗಳು ಮಕ್ಕಳ ಕೊರತೆಯಿಂದ ವಿಲೀನಗೊಂಡಿವೆ ಅಥವಾ ಮುಚ್ಚಲ್ಪಟ್ಟಿವೆ. ಈ ಆತಂಕಕಾರಿ ಪರಿಸ್ಥಿತಿಯನ್ನು ತಡೆಗಟ್ಟಲು ಕೇರಳದ ಮಾದರಿಯಲ್ಲಿ ನಮ್ಮ ಸರ್ಕಾರವೂ ಕನ್ನಡ ಹಾಗೂ ಕನ್ನಡ ಮಾಧ್ಯಮ ಶಾಲೆಗಳ ಬಲವರ್ಧನೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅಬ್ದುಲ್ ಹಮೀದ್ ಪಕ್ಕಲಡ್ಕ ಒತ್ತಾಯಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೂಡುಬಿದಿರೆ ತಾಲೂಕು ಘಟಕದ ವತಿಯಿಂದ ಕಡಂದಲೆ ಪಾಲಡ್ಕದ ಪೂಪಾಡಿಕಲ್ಲು ಶ್ರೀ ನಾರಾಯಣಗುರು ಸಭಾಭವನದಲ್ಲಿ ಭಾನುವಾರ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.
ಕಟೀಲು ದೇವಸ್ಥಾನದ ಪ್ರಧಾನ ಅರ್ಚಕ ಕಮಲಾದೇವಿ ಪ್ರಸಾದ ಅಸ್ರಣ್ಣ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸಮಾಜಕ್ಕೆ ಹಿತಕರವಾದುದು ಮಾತ್ರ ಸಾಹಿತ್ಯ. ಸಾಹಿತ್ಯ ಆಸ್ತಿಕತೆಯೊಂದಿಗೆ ಎಲ್ಲರನ್ನು ಒಗ್ಗೂಡಿಸುವ ಶಕ್ತಿಯಾಗಿದೆ. ಓದುವ ಸಂಸ್ಕೃತಿ ಪುನರುಜ್ಜೀವನಗೊಳ್ಳಬೇಕು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ ಎಂ.ಪಿ. ಶ್ರೀನಾಥ್ ಆಶಯ ನುಡಿಗಳನ್ನಾಡಿದರು. ರಾಘವೇಂದ್ರ ಭಂಡಾರ್ಕರ್ ಅವರ ಕವನ ಸಂಕಲನ ‘ಓ ಮನಸ್ಸೇ, ಅಮೋಘಸಿದ್ದ ಪಾಟೀಲ್ ಅವರ ಭಾವಾಮೋಘ ಹಾಗೂ ಸಮ್ಮೇಳನಾಧ್ಯಕ್ಷ ಅಬ್ದುಲ್ ಹಮೀದ್ ಪಕ್ಕಲಡ್ಕ ಅವರ ಕಥಾ ಸಂಕಲನ ಹಾದಿಯೇ ಇಲ್ಲದ ಹಾದಿ ಕೃತಿಗಳನ್ನು ಗಣ್ಯರು ಲೋಕಾರ್ಪಣೆಗೊಳಿಸಿದರು.
ಚೌಟರ ಅರಮನೆಯ ಕುಲದೀಪ್ ಎಂ.ಕೆ.ಗುಣಪಾಲ ಕಡಂಬ, ಹಂಡೇಲುಗುತ್ತು ಧನಕೀರ್ತಿ ಬಲಿಪ, ಎಂಸಿಎಸ್ ಸೊಸೈಟಿ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ., ನಿರ್ದೇಶಕ ಉದ್ಯಮಿ ಸಿ.ಎಚ್.ಅಬ್ದುಲ್ ಗಫೂರ್, ಎಸ್.ಡಿ. ಸಂಪತ್ ಸಾಮ್ರಾಜ್ಯ, ಬಿಲ್ಲವ ಸಂಘದ ಅಧ್ಯಕ್ಷ ಲೀಲಾಧರ ಪೂಜಾರಿ ಕಡಂದಲೆ, ತಾಲೂಕು ಕಸಾಪ ಘಟಕದ ಮಾರ್ಗದರ್ಶಕ ಡಾ.ಪುಂಡಿಕಾ ಗಣಪಯ್ಯ ಭಟ್, ಮೂಲ್ಕಿ ಕಸಾಪ ಅಧ್ಯಕ್ಷ ಮಿಥುನ್ ಉಡುಪ ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಪ್ರಸ್ತಾವನೆಗೈದರು. ತಾಲೂಕು ಘಟಕದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಕೆ. ಸ್ವಾಗತಿಸಿ ನಿರೂಪಿಸಿದರು. ಎಲ್.ಜೆ.ಫರ್ನಾಂಡೀಸ್ ವಂದಿಸಿದರು.
ಕನ್ನಡ ಭುವನೇಶ್ವರಿ ಮೆರವಣಿಗೆಗೆ ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆ ಮುಖ್ಯಶಿಕ್ಷಕ ದಿನಕರ ಕುಂಭಾಶಿ ಚಾಲನೆ ನೀಡಿದರು. ಕೆ.ಆರ್.ಪಂಡಿತ್ ರಾಷ್ಟ್ರಧ್ವಜ, ಡಾ.ಎಂ.ಪಿ.ಶ್ರೀನಾಥ್ ಕಸಾಪ ಧ್ವಜ ಹಾಗೂ ಎಂ.ಬಾಹುಬಲಿ ಪ್ರಸಾದ್ ಕನ್ನಡ ಧ್ವಜಾರೋಹಣಗೈದರು.
ಆಂಗ್ಲ ಮಾಧ್ಯಮ ಶಾಲೆಗಳಿಗೆ ಸರಿಸಾಟಿಯಾಗಿ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ, ಕಟ್ಟಡ, ಪೀಠೋಪಕರಣ, ಕಲಿಕಾ ಸಾಮಗ್ರಿ ಹಾಗೂ ಶಿಕ್ಷಕರ ಕೊರತೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ಪಾಲಕರಲ್ಲಿ ಅರಿವು ಮೂಡಿಸುವುದು, ನಗರ ವಲಸೆ ನಿಯಂತ್ರಿಸುವುದು ಹಾಗೂ ಶಿಕ್ಷಕರ ನೇಮಕಾತಿಯಲ್ಲಿ ವಿಳಂಬ ತಪ್ಪಿಸುವುದು ಅತ್ಯವಶ್ಯಕ.