ಕೆಮ್ಮಣ್ಮುಕೆರೆ ಕೆಸರು ಗದ್ದೆ!

ಅಭಿವೃದ್ಧಿ ವಂಚಿತ ರಸ್ತೆಗೀಗ 20 ವರ್ಷ, ಸ್ಥಳೀಯಾಡಳಿತ, ಜನಪ್ರತಿನಿಧಿಗಳ ನಿರಾಸಕ್ತಿ
ಕೆಸರು ಹೊಂಡಗುಂಡಿಗಳಿಂದ ಕೂಡಿದ ಕೋಟತಟ್ಟು ಗ್ರಾಪಂ ಸಂಪರ್ಕ ಕೊಂಡಿ ರಿಂಗ್ ರಸ್ತೆ
ಕೆಸರು ಹೊಂಡಗುಂಡಿಗಳಿಂದ ಕೂಡಿದ ಕೋಟತಟ್ಟು ಗ್ರಾಪಂ ಸಂಪರ್ಕ ಕೊಂಡಿ ರಿಂಗ್ ರಸ್ತೆ
Published on: 

ವಿಜಯವಾಣಿ ಸುದ್ದಿಜಾಲ ಕೋಟ

ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೋಟತಟ್ಟು ಗ್ರಾಮ ಪಂಚಾಯಿತಿ ಸಂಪರ್ಕ ಕೊಂಡಿ ರಿಂಗ್ ರಸ್ತೆ ಕೆಸರು, ಹೊಂಡಗುಂಡಿಗಳ ಆಗರವಾಗಿದೆ.

20 ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ರಿಂಗ್ ರಸ್ತೆ ಸ್ಥಳೀಯಾಡಳಿತ, ಜನಪ್ರತಿನಿಧಿಗಳ ನಿರಾಸಕ್ತಿಯ ಕೇಂದ್ರವಾಗಿದೆ. ಕೋಟತಟ್ಟು ಗ್ರಾಪಂ ವ್ಯಾಪ್ತಿಯ ಕಣ್ಣಿನ ಆಸ್ಪತ್ರೆಯ(ರಾ.ಹೆ.ಸಂಪರ್ಕ) ಮೂಲಕ ಕೆಮ್ಮಣ್ಣುಕೆರೆ ವ್ಯಾಪ್ತಿಯೊಂದಿಗೆ ಮುಕ್ಕಾಲು ಭಾಗ ಸಾಲಿಗ್ರಾಮ ಪಪಂ ವ್ಯಾಪ್ತಿಯ ಜನರಿಗೆ ಅನುಕೂಲಕರ. ಈ ರಿಂಗ್ ರಸ್ತೆ ಅಭಿವೃದ್ಧಿ ಕಾಣದೆ ಸ್ಥಳೀಯ ನಿವಾಸಿಗಳಿಂದ ಹಿಡಿದು ಶಾಲಾ ಮಕ್ಕಳಿಗೆ ಕಂಟಕವಾಗಿದೆ. ಒಂದೆಡೆ ಕೃಷಿ ಭೂಭಾಗ, ಇನ್ನೊಂದೆಡೆ ನೂರಾರು ಮನೆಗಳಿಗೆ ಸಂಪರ್ಕ ಕೊಂಡಿಯಾಗಿರುವ ಈ ರಸ್ತೆಯ ಗೋಳು ಕೇಳುವರಾರು ಎಂಬ ಪ್ರಶ್ನೆ ಉದ್ಭವಿಸಿದೆ.

ರಸ್ತೆಯಲ್ಲಿ ಜನಸಾಮಾನ್ಯರು ಸಂಕಷ್ಟದಲ್ಲಿ ಸಂಚರಿಸುತ್ತಿದ್ದು, ಆಟೋ, ಕಾರು ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಅನಾರೋಗ್ಯ ಪೀಡಿತರಿಂದ ಹಿಡಿದು ವಯೋವೃದ್ಧರು ವಾಹನದ ಮೂಲಕ ತೆರಳಲಾಗದೆ ಅವರನ್ನು ಹೊತ್ತುಕೊಂಡು ಸಾಗುವ ಸ್ಥಿತಿ ನಿರ್ಮಾಣಗೊಂಡಿದೆ. ಒಂದೊಮ್ಮೆ ವಾಹನಗಳು ಈ ರಸ್ತೆಯಲ್ಲಿ ಬಂತೆಂದರೆ ಕೆಸರುಮಯವಾಗಿ ಹಿಂತಿರುಗಬೇಕಾದ ಸ್ಥಿತಿ ಇದೆ.

ಶಾಲಾ ಮಕ್ಕಳಿಗೂ ಸಂಕಷ್ಟ

ಕೆಮ್ಮಣ್ಣುಕೆರೆ ಹಾಗೂ ತೊಡ್ಕಟ್ಟು ಒಳ ಭಾಗಗಳಲ್ಲಿರುವ ಶಾಲಾ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಶಾಲಾ ವಾಹನ ಈ ರಸ್ತೆಯಲ್ಲಿ ಸಂಚರಿಸಲಾಗದೆ ಸುತ್ತಿ ಸುತ್ತಿ ಹೋಗುವ ಸ್ಥಿತಿ ನಿರ್ಮಾಣಗೊಂಡಿದೆ. ಒಂದೊಮ್ಮೆ ನಡೆದು ಹೋಗುವ ವಿದ್ಯಾರ್ಥಿಗಳಿಗಂತು ಬೈಕ್ ಸವಾರರು ಸಂಚರಿಸುವಾಗ ಮೈತುಂಬ ಕೆಸರು ರಾಚಿ ತೊಂದರೆ ಅನುಭವಿಸುವಂತಾಗಿದೆ.

ಸಾವಿರಾರು ಎಕರೆ ಕೃಷಿ ಭೂ ಭಾಗ

ಕೋಟತಟ್ಟು ಹಾಗೂ ಸಾಲಿಗ್ರಾಮ ಪಪಂ ವ್ಯಾಪ್ತಿಯ ಎರಡು ದಿಕ್ಕುಗಳಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ವ್ಯಾಪ್ತಿ ಹೊಂದಿರುವ ಈ ರಿಂಗ್ ರಸ್ತೆ ಕೃಷಿಕರಿಗೆ ಸಂಕಷ್ಟ ತಂದೊಡ್ಡಿದೆ. ರಸ್ತೆ ಇಕ್ಕೆಲಗಳಲ್ಲಿ ಗಿಡಗಂಟಿಗಳು ಆವರಿಸಿವೆ. ರಸ್ತೆ ದಿನದಿಂದ ದಿನಕ್ಕೆ ಕಿರಿದಾಗುತ್ತಿದೆ. ರಸ್ತೆ ಕಾಂಕ್ರೀಟ್‌ಗೊಂಡರೆ ಸಮಸ್ಯೆ ಪರಿಹಾರಗೊಳ್ಳಲಿದ್ದು, ಶೀಘ್ರ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇಲ್ಲವಾದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಶಾಸಕರ ಬಳಿ ಗ್ರಾಮಸ್ಥರ ಅಳಲು

ಇತ್ತೀಚೆಗೆ ಸಾಲಿಗ್ರಾಮ ಪಪಂನಲ್ಲಿ ಶಾಸಕರ ಮುಂದಾಳತ್ವದಲ್ಲಿ ನಡೆದ ರಾಜ್ಯ ಸರ್ಕಾರದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಈ ಭಾಗದ ಗ್ರಾಮಸ್ಥರು ಭಾಗಿಯಾಗಿ ಶಾಸಕರು ಹಾಗೂ ಅಧಿಕಾರಿ ವರ್ಗದವರಲ್ಲಿ ತಮ್ಮ ಅಳಲು ತೋಡಿಕೊಂಡಿದ್ದರು. ಈ ಸಂದರ್ಭ ಸರ್ಕಾರದ ಖಜಾನೆಯಲ್ಲಿ ಹಣದ ಕೊರತೆ, ಅನುದಾನ ಅಸಹಾಯಕತೆಯನ್ನು ಶಾಸಕರು ಗ್ರಾಮಸ್ಥರಿಗೆ ಮನದಟ್ಟು ಮಾಡಿ, ರಸ್ತೆ ಅಭಿವೃದ್ಧಿ ಭರವಸೆ ನೀಡಿ ಕಳುಹಿಸಿದ್ದರು.

ನಮಗೆ ಶಾಲೆಗೆ ತೆರಳಲು ತುಂಬಾ ತೊಂದರೆಯಾಗುತ್ತಿದೆ. ಪ್ರಸ್ತುತ ಪರೀಕ್ಷೆ ಸಮಯವಾದ್ದರಿಂದ ಸಮಯಕ್ಕೆ ಸರಿಯಾಗಿ ಶಾಲೆ ತಲುಪಲು ಸಾಧ್ಯವಾಗುತ್ತಿಲ್ಲ. ನಾವು ನಡೆದುಕೊಂಡು ಹೋಗುವ ಸಂದರ್ಭ ವಾಹನಗಳು ಸಂಚರಿಸುವಾಗ ಕೆಸರು ಮೈಗಂಟುತ್ತಿದೆ. ಆದ್ದರಿಂದ ಸಂಬಂಧಪಟ್ಟವರು ಶೀಘ್ರ ರಸ್ತೆ ದುರಸ್ತಿಪಡಿಸಿಸಬೇಕು.
ಪೃಥ್ವಿ ತೋಡ್ಕಟ್ಟು ವಿದ್ಯಾರ್ಥಿ
ಈ ರಿಂಗ್ ರಸ್ತೆ ಅವಸ್ಥೆ ಹೇಳತೀರದು. ಸ್ಥಳೀಯರು, ಶಾಲಾ ಮಕ್ಕಳು, ವಾಹನ ಸವಾರರು ತಿರುಗಾಡುವುದಕ್ಕೆ ತೊಂದರೆ ಅನುಭವಿಸುವಂತಾಗಿದೆ. ಸಂಬಂಧಪಟ್ಟವರು ಆದಷ್ಟು ಬೇಗ ರಸ್ತೆ ದುರಸ್ತಿಗೊಳಿಸಿ ಪರಿಸರದ ಜನರ ಬಹುದಿನದ ಬೇಡಿಕೆ ಈಡೇರಿಸಬೇಕು.
ರಾಜಶೇಖರ್ ಸ್ಥಳೀಯ ನಿವಾಸಿ, ಕೆಮ್ಮಣ್ಣುಕೆರೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net