ಕರುವೇಲು ಸರ್ವೀಸ್ ರಸ್ತೆ ಕಾಮಗಾರಿ ವಿಳಂಬ

ರಾ.ಹೆದ್ದಾರಿ 75 ಕರುವೇಲು ಜಂಕ್ಷನ್‌ನಲ್ಲಿ ಹೆದ್ದಾರಿ ಇಕ್ಕೆಲಗಳಲ್ಲಿನ ರಸ್ತೆ ಸಂಪರ್ಕಿಸುವ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಗುತ್ತಿಗೆದಾರ ಸಂಸ್ಥೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ರಾ.ಹೆದ್ದಾರಿ 75 ಕರುವೇಲು ಜಂಕ್ಷನ್‌ನಲ್ಲಿ ಹೆದ್ದಾರಿ ಇಕ್ಕೆಲಗಳಲ್ಲಿನ ರಸ್ತೆ ಸಂಪರ್ಕಿಸುವ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಗುತ್ತಿಗೆದಾರ ಸಂಸ್ಥೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
Published on
ಉಪ್ಪಿನಂಗಡಿ: ರಾ.ಹೆದ್ದಾರಿ 75 ಕರುವೇಲು ಜಂಕ್ಷನ್‌ನಲ್ಲಿ ಹೆದ್ದಾರಿ ಇಕ್ಕೆಲಗಳಲ್ಲಿ ಇರುವ ರಸ್ತೆಗೆ ಸಂಪರ್ಕ ಸಾಧಿಸುವ ಸರ್ವೀಸ್ ರಸ್ತೆ ನಿರ್ಮಾಣಗೊಳಿಸದೇ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಗುತ್ತಿಗೆದಾರ ಸಂಸ್ಥೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಮಾತಿನ ಚಕಮಕಿ ನಡೆದ ಘಟನೆ ಗುರುವಾರ ನಡೆದಿದೆ.
ಕರುವೇಲು ಜಂಕ್ಷನ್ ಬಳಿಯಿಂದ ಒಂದು ಪಾರ್ಶ್ವದಲ್ಲಿ 34ನೇ ನೆಕ್ಕಿಲಾಡಿ ಗ್ರಾಮದ ಹತ್ತು ಕಳಸೆ ಬಿಳಿಯೂರು ಪ್ರದೇಶಕ್ಕೆ ಸಂಪರ್ಕ ಸಾಧಿಸುವ ರಸ್ತೆ ಇದ್ದು, ಇನ್ನೊಂದು ಪಾರ್ಶ್ವದಲ್ಲಿ ಶಾಂತಿನಗರ ಕಡೆಗೆ ಸಾಗುವ ಸಂಪರ್ಕ ರಸ್ತೆ ಇದೆ. ಹೆದ್ದಾರಿ ಅಗಲೀಕರಣದ ವೇಳೆ ಸಂಪರ್ಕ ರಸ್ತೆ ಹೆದ್ದಾರಿಯಿಂದ ಕಡಿಯಲ್ಪಟ್ಟಿದ್ದು, ಈ ರಸ್ತೆಗಳಿಗೆ ಸಂಪರ್ಕ ಸಾಧಿಸಲು ಸರ್ವೀಸ್ ರಸ್ತೆ ನಿರ್ಮಾಣಗೊಳಿಸುವ ಯೋಜನೆ ರೂಪಿಸಲಾಗಿದೆ. ಆದರೆ ಯೋಜನೆ ಮೂರು ವರ್ಷಗಳಿಂದ ಕಾರ್ಯರೂಪಕ್ಕೆ ತರಲು ಗುತ್ತಿಗೆದಾರ ಸಂಸ್ಥೆ ವಿಫಲವಾಗಿದ್ದು, ಆಕ್ರೋಶಗೊಂಡ ಸ್ಥಳೀಯರು ಜಮಾಯಿಸಿ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಾಗ ಮಾತಿನ ಚಕಮಕಿ ನಡೆಯಿತು.
ಇದೇ ವೇಳೆ ಸ್ಥಳೀಯ ಮಸೀದಿಗೆ ಸಂಪರ್ಕ ಸಾಧಿಸುವ ಸರ್ವೀಸ್ ರಸ್ತೆ ತನ್ನ ಭೂಮಿಯಿಂದ ಹಾದು ಹೋಗಲು ಅವಕಾಶ ನೀಡದ ಸ್ಥಳೀಯ ನಿವಾಸಿ ಅಬೂಬಕ್ಕರ್ ಎಂಬುವರ ಮನವೊಲಿಸಿ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಸಹಕರಿಸಲು ಕೇಳಿದಾಗ ಅವರು ನಿರಾಕರಿಸಿದರು. ಈ ವೇಳೆ ಮಾತಿನ ಚಕಾಮಕಿ ನಡೆದು ಪೋಲಿಸರು ಮಧ್ಯೆ ಪ್ರವೇಶಿಸಿ ಸಂಬಂಧಿತ ದಾಖಲೆಗಳನ್ನು ಪ್ರಾಧಿಕಾರಕ್ಕೆ ನಿಗದಿತ ಸಮಯದ ಒಳಗೆ ಹಾಜರುಪಡಿಸಲು ಸೂಚಿಸಿದರು.
ಈ ಮಧ್ಯೆ ಗ್ರಾಮಸ್ಥರು ಹೆದ್ದಾರಿ ಸಂಪರ್ಕಿಸುವ ಇಕ್ಕೆಲಗಳ ರಸ್ತೆಗೆ ಸಂಪರ್ಕ ಸಾಧಿಸಲು ಅಗತ್ಯವಾದ ಸರ್ವೀಸ್ ರಸ್ತೆ ನಿರ್ಮಾಣದ ಬಳಿಕವೇ ರಾ.ಹೆದ್ದಾರಿ ಕಾಮಗಾರಿ ನಡೆಸಬೇಕೆಂದು ಪಟ್ಟುಹಿಡಿದರು. ಶೀಘ್ರದಲ್ಲೇ ನಿರ್ಮಿಸುವುದಾಗಿ ಗುತ್ತಿಗೆದಾರರು ಭರವಸೆ ನೀಡಿ ಪ್ರಕರಣಕ್ಕೆ ತೆರೆ ಎಳೆದರು.
ಗ್ರಾಮಸ್ಥರಾದ ಹರ್ಷ ಕುಮಾರ್ ಹೆಗ್ಡೆ, ತನಿಯಪ್ಪ ಪೂಜಾರಿ, ಅಶ್ರಫ್ ಕರುವೇಲು, ಸದಾನಂದ, ರಝಾಕ್, ಅಶ್ರಫ್ ಪಾಲ್ಯ, ಪ್ರಸಾದ್ ಪಚ್ಚಾಡಿ, ವೇಣುಗೋಪಾಲ, ಕುಶಾಲಪ್ಪ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net