ಆಂತರಿಕ ದೂರು ಸಮಿತಿ ರಚನೆ ಕಡ್ಡಾಯ

ಉಡುಪಿಯ ಜಿಪಂ ಸಭಾಭವನದಲ್ಲಿ ಆಯೋಜಿಸಿದ್ದ ಮಹಿಳಾ ಸ್ಪಂದನಾ ಮತ್ತು ಪ್ರಗತಿ ಪರಿಶೀಲನಾ ಸಭೆಯನ್ನು ಡಾ. ನಾಗಲಕ್ಷ್ಮೀ ಚೌಧರಿ ಉದ್ಘಾಟಿಸಿದರು. ರೂಪಾ ಆರ್​., ಸ್ವರೂಪಾ ಟಿ.ಕೆ., ಹರಿರಾಂ ಶಂಕರ್​ ಇದ್ದರು.
ಉಡುಪಿಯ ಜಿಪಂ ಸಭಾಭವನದಲ್ಲಿ ಆಯೋಜಿಸಿದ್ದ ಮಹಿಳಾ ಸ್ಪಂದನಾ ಮತ್ತು ಪ್ರಗತಿ ಪರಿಶೀಲನಾ ಸಭೆಯನ್ನು ಡಾ. ನಾಗಲಕ್ಷ್ಮೀ ಚೌಧರಿ ಉದ್ಘಾಟಿಸಿದರು. ರೂಪಾ ಆರ್​., ಸ್ವರೂಪಾ ಟಿ.ಕೆ., ಹರಿರಾಂ ಶಂಕರ್​ ಇದ್ದರು.
Published on

* ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಸೂಚನೆ

* ಉಡುಪಿಯಲ್ಲಿ ಮಹಿಳಾ ಸ್ಪಂದನಾ, ಪ್ರಗತಿ ಪರಿಶೀಲನಾ ಸಭೆ 

ಉಡುಪಿ: ಮಹಿಳೆ-ಯುವತಿಯರು ಕೆಲಸ ನಿರ್ವಹಿಸುತ್ತಿರುವ ಸಂಸ್ಥೆ, ಕಚೇರಿಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದಲ್ಲಿ ದೂರು ಸಲ್ಲಿಸಲು ಅನುಕೂಲವಾಗುವಂತೆ ಸರ್ಕಾರದ ಆದೇಶದಂತೆ ಆಂತರಿಕ ದೂರು ಸಮಿತಿ ರಚಿಸಬೇಕು. ದೂರುಗಳು ಬಂದಾಗ ಸಕ್ರಿಯವಾಗಿ ಕಾರ್ಯನಿರ್ವಹಿಸಿ ಅವರಿಗೆ ನ್ಯಾಯ ಒದಗಿಸಬೇಕು ಎಂದು ಅಧಿಕಾರಿಗಳಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಸೂಚಿಸಿದರು.
ಉಡುಪಿ ಜಿಲ್ಲಾ ಪಂಚಾಯಿತಿಯ ಡಾ.ವಿ.ಎಸ್​. ಆಚಾರ್ಯ ಸಭಾಂಗಣದಲ್ಲಿ ರಾಜ್ಯ ಮಹಿಳಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಪಂ, ಪೊಲೀಸ್​ ಇಲಾಖೆ ಹಾಗೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಮಂಗಳವಾರ (ಮೇ 26) ಆಯೋಜಿಸಿದ್ದ ಮಹಿಳಾ ಸ್ಪಂದನಾ ಮತ್ತು ಪ್ರಗತಿ ಪರಿಶೀಲನಾ ಸಭೆ ಉದ್ಘಾಟಿಸಿ ಮಾತನಾಡಿದರು.
ಜನರಲ್ಲಿ ಅರಿವು ಮೂಡಿಸಿ
10ಕ್ಕಿಂತ ಹೆಚ್ಚು ಮಹಿಳಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಆಂತರಿಕ ದೂರು ಸಮಿತಿ ರಚಿಸಿ, ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಸಮಿತಿಯ ಕಾರ್ಯ ನಿರ್ವಹಣೆ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕು. ಮಲ್ಪೆ ಬಂದರಿಗೆ ಭೇಟಿ ನೀಡಿದಾಗ ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರು ಸರ್ಕಾರಿ ಸೌಲಭ್ಯದಿಂದ ವಂಚಿತರಾಗಿರುವುದು ತಿಳಿದಿದೆ. ಅದಕ್ಕೆ ಕಾರಣ ಅವರಿಗೆ ಅರಿವಿನ ಕೊರತೆ ಇದೆ. ಸಕಾಲಕ್ಕೆ ವೇತನ ನೀಡಬೇಕು. ಬಂದರು ವ್ಯಾಪ್ತಿಯಲ್ಲಿ ಶುಚಿತ್ವ ಕಾಪಾಡಬೇಕು. ಸಿಸಿ ಟಿವಿ ಕ್ಯಾಮರಾ ಅಳವಡಿಸಬೇಕು. ಈ ಕುರಿತು ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ಬಂದರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಹಾಸ್ಟೆಲ್​ಗಳ ಕೊರತೆ

ವಿದ್ಯಾರ್ಥಿಗಳಿಗೆ ಹಾಸ್ಟೆಲ್​ ಸೇರ್ಪಡೆಗೆ ಅವಕಾಶ ದೊರೆಯುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಹೊಸ ಹಾಸ್ಟೆಲ್​ಗಳ ಪ್ರಾರಂಭಕ್ಕೆ ಪ್ರಯತ್ನಿಸಲಾಗುವುದು. ವಿಶೇಷಚೇತನ ಶಾಲೆಗಳಲ್ಲಿ ವಿಶೇಷ ಶಿಕ್ಷಕರಾಗಿರುವವರಿಗೆ ಸಕಾಲಕ್ಕೆ ಗೌರವಧನ ಸಿಗುತ್ತಿಲ್ಲ ಎಂಬ ದೂರುಗಳಿವೆ. ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕಿಯರಿಗೆ ಹೆರಿಗೆ ರಜೆ ಸೌಲಭ್ಯ ಸೇರಿದಂತೆ ಇನ್ನಿತರ ಸೌಲಭ್ಯ ನಿಯಮಾನುಸಾರ ಕಲ್ಪಿಸಬೇಕು ಎಂದರು.

ಹೆರಿಗೆ ತಜ್ಞರನ್ನು ನೇಮಿಸಿ

ಉಡುಪಿ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳ ಸಮಸ್ಯೆಯಿದೆ. ಆದ್ಯತೆಯ ಮೇಲೆ ಪರಿಹಾರ ಕಂಡುಕೊಳ್ಳಬೇಕು. ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ತಜ್ಞರ ಕೊರತೆಯಿಂದಾಗಿ ಒಂದು ವರ್ಷದಿಂದ ಹೆರಿಗೆಗಾಗಿ ಮಹಿಳೆಯರು ಇನ್ನಿತರ ತಾಲೂಕು ಅಥವಾ ಜಿಲ್ಲೆಗೆ ಹೋಗುವ ಅನಿವಾರ್ಯತೆಯಿದೆ. ಕೂಡಲೇ ಹೆರಿಗೆ ತಜ್ಞರನ್ನು ನೇಮಿಸಿ ಅನುಕೂಲ ಮಾಡಿಕೊಡಬೇಕು. ಮಹಿಳಾ ಆಯೋಗದಲ್ಲಿ ದಾಖಲಾಗಿರುವ 54 ಪ್ರಕರಣಗಳ ವಿಚಾರಣೆ ನಡೆಸಿದ್ದು, ಸಂಬಂಧಿತ ಅಧಿಕಾರಿಗಳು ಎಲ್ಲ ಸಮಸ್ಯೆ ಪರಿಹರಿಸಬೇಕು ಎಂದು ನಾಗಲಕ್ಷ್ಮೀ ಸೂಚಿಸಿದರು.
ಸಭೆಯಲ್ಲಿ ಆಯೋಗದ ಕಾರ್ಯದರ್ಶಿ ರೂಪಾ ಆರ್​., ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಂ ಶಂಕರ್​, ಜಿಪಂ ಮುಖ್ಯ ಯೋಜನಾಧಿಕಾರಿ ಡಾ. ಉದಯ್​ ಶೆಟ್ಟಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಯಿದೆ ಕಾಗದಕ್ಕೆ ಸೀಮಿತವಾಗದಿರಲಿ

ಜಿಲ್ಲೆಯಲ್ಲಿ 345 ಸರ್ಕಾರಿ ಕಚೇರಿ ಹಾಗೂ 444 ಖಾಸಗಿ ಕಚೇರಿ ಸೇರಿದಂತೆ ಒಟ್ಟು 789 ಆಂತರಿಕ ದೂರು ಸಮಿತಿಗಳ ರಚನೆಯಾಗಿದೆ. ಶೀ ಬಾಕ್ಸ್​ ಪೋರ್ಟಲ್​ನಲ್ಲಿ 346 ಸಮಿತಿಯ ಮಾಹಿತಿ ಮಾತ್ರ ನಮೂದಿಸಲಾಗಿದೆ. ಬಾಕಿ ಉಳಿದಿರುವ 443 ಸಮಿತಿಗಳ ಮಾಹಿತಿ ಸೇರಿಸಬೇಕು. ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯಿದೆ-2013 (ಪೋಶ್​) ಕೇವಲ ಕಾಗದಕ್ಕೆ  ಸೀಮಿತವಾಗಿರಬಾರದು. ಸರಿಯಾಗಿ ಅನುಷ್ಠಾನಗೊಂಡು ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ನಿವಾರಣೆ ಆಗಬೇಕು. ಸಮಾಜದಲ್ಲಿ ದುರ್ಬಲ ಮಹಿಳೆಯರು ಸಮಸ್ಯೆಯ ಸುಳಿಯಲ್ಲಿ ಸಿಕ್ಕಿ ನ್ಯಾಯಕ್ಕಾಗಿ ಪೊಲೀಸ್​ ಠಾಣೆಗೆ ಬಂದಾಗ ಸರಿಯಾಗಿ ಸ್ಪಂದಿಸಬೇಕು. ಕಾಲೇಜುಗಳ ಸಮೀಪದಲ್ಲಿ ಮಾದಕವಸ್ತುಗಳ ತಡೆಗೆ ಕ್ರಮ ವಹಿಸಬೇಕು ಎಂದು ಪೊಲೀಸ್​ ಇಲಾಖೆಗೆ ನಾಗಲಕ್ಷ್ಮೀ ಚೌಧರಿ ತಿಳಿಸಿದರು.
"

ಪರಿಶಿಷ್ಟ ಜಾತಿ, ಪಂಗಡದವರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಕೊರತೆಯಿಂದಾಗಿ ಸೌಲಭ್ಯ ಪಡೆಯಲು ಅಗುತ್ತಿಲ್ಲ. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸರ್ಕಾರದ ಯೋಜನೆಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡಲು ವಿಶೇಷ ಶಿಬಿರ ಆಯೋಜಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ದೊರಕುವಂತೆ ನೋಡಿಕೊಳ್ಳಬೇಕು.

— ಡಾ. ನಾಗಲಕ್ಷ್ಮೀ ಚೌಧರಿ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net