ಮಕ್ಕಳ ರಕ್ಷಣಾ ಕಾನೂನು ಪರಿಣಾಮಕಾರಿ ಅನುಷ್ಠಾನಕ್ಕೆ ಕರೆ

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಮಾತನಾಡಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಮಾತನಾಡಿದರು.
Published on

ಮಣಿಪಾಲ ರಜತಾದ್ರಿಯ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಆರ್. ಟಿ. ಇ ಕಾಯ್ದೆ, ಪೋಕ್ಸೋ ಕಾಯ್ದೆ , ಬಾಲ್ಯ ವಿವಾಹ ತಡೆ ಕಾಯ್ದೆ ಹಾಗೂ ಬಾಲನ್ಯಾಯ ಕಾಯ್ದೆ ಪ್ರಗತಿ ಪರಿಶೀಲನಾ ಸಭೆಯ ಅಧಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 1ರಿಂದ10ನೇ ತರಗತಿವರೆಗೆ 1,59,731 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರತಿಯೊಬ್ಬ ಮಗುಗೆ ಆಧಾರ್ ಮಾಡಿಸಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಸಮಸ್ಯೆ ಎದುರಿಸುತ್ತಾರೆ. ಅರ್ಹ ಮಕ್ಕಳಿಗೆ ಒಂದು ತಿಂಗಳೊಳಗೆ ಆಧಾರ್ ನೋಂದಣಿ ಮಾಡಿಸಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ವರದಿ ನೀಡಲಾಗುವುದು ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ನೋಂದಣಿಯಾಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಪಥ್ಯಾಹಾರವನ್ನು ಉಚಿತವಾಗಿ ನೀಡಬೇಕು. ಪಥ್ಯಾಹಾರದಲ್ಲಿ ಅನ್ನ, ಸಾಂಬಾರ್, ಚಪಾತಿ ಮೊಟ್ಟೆ, ಬಾಳೆಹಣ್ಣು ನೀಡಬೇಕು. ವೈದ್ಯರು ನಿಯಮಾನುಸಾರ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆಯೂ ಪರಿಶೀಲಿಸಬೇಕು ಎಂದರು.
ಜಿಲ್ಲೆಯಲ್ಲಿ 76ಕ್ಕೂ ಹೆಚ್ಚು ಸ್ಕ್ಯಾನಿಂಗ್ ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿಯೊಂದು ಸ್ಕ್ಯಾನಿಂಗ್ ಸೆಂಟರ್‌ಗಳು ಪಿ.ಸಿ.ಪಿ.ಎನ್.ಡಿ.ಟಿ ನಿಯಮನುಸಾರ ಕಾರ್ಯನಿರ್ವಹಿಸಬೇಕು. ಎರಡು ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿದಾಗ ಕೆಲವು ನಿಯಮಗಳನ್ನು ಪಾಲಿಸದೇ, ಕೆಲವು ದಾಖಲೆಗಳನ್ನು ಸಹ ನಿರ್ವಹಿಸದೆ ಇರುವುದು ಕಂಡುಬಂದಿದೆ. ಜಿಲ್ಲೆಯ ಎಲ್ಲಾ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ನಿರಂತರವಾಗಿ ಭೇಟಿ ನೀಡಿ ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿರುವ ಬಗ್ಗೆ ಎರಡು ವಾರದಲ್ಲಿ ಅಭಿಯಾನದ ರೀತಿ ಪರಿಶೀಲಿಸಿ ಆಯೋಗಕ್ಕೆ ವರದಿ ನೀಡಬೇಕು ಎಂದರು.

ಏಕ ಪೋಷಕರು, ಅನಾಥರು, ಶಾಲೆಯಿಂದ ಹೊರಗುಳಿದವರು, ಲಸಿಕಾ ವಂಚಿತ ಮಕ್ಕಳ ಮಾಹಿತಿಗಳನ್ನು ನಿಖರವಾಗಿ ಇಟ್ಟುಕೊಳ್ಳಬೇಕು ಎಂದರು.
ವಸತಿ ಶಾಲೆ ನಡೆಸುತ್ತಿರುವ ಎಲ್ಲಾ ಇಲಾಖೆಗಳು ನಿಲಯದ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಕೆಲಸವನ್ನು ಮುತುವರ್ಜಿಯಿಂದ ಮಾಡಬೇಕು. ವಸತಿ ನಿಲಯಗಳಲ್ಲಿ ಮಕ್ಕಳಿಗೆ ಅನುಕೂಲವಾಗುವಂತೆ ಬಿಸಿನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಅಡಚಣೆ ಆಗದಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿರುವ ಎಲ್ಲಾ ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಸಿ.ಸಿ.ಟಿ.ವಿ ಅಳವಡಿಸಬೇಕು. ಅರೋಗ್ಯ ಇಲಾಖೆ ವತಿಯಿಂದ ನಿರಂತರವಾಗಿ ವಿದ್ಯಾರ್ಥಿಗಳ ತಪಾಸಣೆ ಕೈಗೊಳ್ಳಬೇಕು. ನಿಲಯಾರ್ಥಿಗಳಿಗೆ ಮಾದಕ ವ್ಯಸನ, ಸೈಬರ್ ಕ್ರೈಂ ಸೇರಿದಂತೆ ಮತ್ತಿತರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎಂದರು.
ಮಕ್ಕಳ ಸ್ನೇಹಿ ಸಾರಿಗೆ ವ್ಯವಸ್ಥೆ ರೂಪಿಸುವಲ್ಲಿ ನಿಗಮದ ಅಧಿಕಾರಿಗಳು ಕ್ರಮವಹಿಸಬೇಕು. ಬಸ್ ನಿಲ್ದಾಣಗಳಲ್ಲಿ ಮಹಿಳಾ ಮತ್ತು ಶಿಶು ಪಾಲನ ಕೇಂದ್ರ ವ್ಯವವಸ್ಥಿತ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಸಾರಿಗೆ ನಿಗಮದ ನಿಲ್ದಾಣಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ ಅಳವಡಿಸಿರುವ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು.

ಜಿಲ್ಲೆಯಲ್ಲಿ 1481 ವಿಶೇಷ ಚೇತನ ಮಕ್ಕಳಿದ್ದು, ಇದರಲ್ಲಿ 575 ಮಕ್ಕಳಿಗೆ ಯು.ಡಿ.ಐ.ಡಿ ಕಾರ್ಡ್ ವಿತರಣೆಗೆ ಬಾಕಿ ಇದೆ. ಯು.ಡಿ.ಐ.ಡಿ ಕಾರ್ಡ್ ಹೊಂದಿಲ್ಲದೆ ಇದ್ದಲ್ಲಿ ಸರಕಾರದ ಸೌಲಭ್ಯಗಳಿಂದ ಮಕ್ಕಳು ವಂಚಿತರಾಗುವುದರಿAದ ಬಾಕಿ ಉಳಿದ ಎಲ್ಲಾ ವಿಶೇಷ ಮಕ್ಕಳಿಗೂ ಒಂದು ತಿಂಗಳ ಒಳಗಾಗಿ ಯು.ಡಿ.ಐ.ಡಿ ಕಾರ್ಡ್ ವಿತರಣೆಗೆ ಅಗತ್ಯ ಕ್ರಮ ವಹಿಸಬೇಕು ಎಂದು ಅಂಗವಿಕಲ ಕಲ್ಯಾಣಧಿಕಾರಿಗಳಿಗೆ ಸೂಚನೆ ನೀಡಿದರು.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ ಮಾತನಾಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ, ಹೆಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್. ಎಸ್ ಕಾದ್ರೊಳ್ಳಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net