ಯಕ್ಷಗಾನ ಕಲಾವಿದರ ರಾಜ್ಯೋತ್ಸವ ಪ್ರಶಸ್ತಿ ಫಲಕ ಕಳವು

 ಸುವರ್ಣ ಕರ್ನಾಟಕ ರಾಜ್ಯೋತ್ಸವ
ಸಾಂದರ್ಭಿಕ ಚಿತ್ರ
Published on: 

ಉಡುಪಿ: ಹಿರಿಯ ಯಕ್ಷಗಾನ ಕಲಾವಿದರೊಬ್ಬರಿಗೆ ಸರ್ಕಾರದಿಂದ ನೀಡಲಾಗಿದ್ದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಫಲಕ ಕಳವಾಗಿರುವ ಘಟನೆ ಕುಕ್ಕೆಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬ್ರಹ್ಮಾವರದ ಬೆನಗಲ್​ ಬಸ್​ ನಿಲ್ದಾಣದ ಸಮೀಪದ ಹಳೆ ದೊಡ್ಡಮನೆ ನಿವಾಸಿ ಸಿ. ಮಂಜುನಾಥ ಪ್ರಭು (77) ಪ್ರಶಸ್ತಿ ಕಳೆದುಕೊಂಡ ಕಲಾವಿದರು.

ಯಕ್ಷಗಾನ ಕ್ಷೇತ್ರದಲ್ಲಿನ ಇವರ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ 2024ರಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಫಲಕ ನೀಡಿ ಗೌರವಿಸಿತ್ತು. ಮಂಜುನಾಥ ಪ್ರಭು ಅವರು ಕುಕ್ಕೆಹಳ್ಳಿ ಗ್ರಾಮದ ಸುಜಾತ ಕುಲಾಲ್​ ಎಂಬುವವರ ಬಾಡಿಗೆ ಮನೆಯಲ್ಲಿ ವಾಸವಿದ್ದ ಸಂದರ್ಭದಲ್ಲಿ ಈ ಪ್ರಶಸ್ತಿ ಫಲಕವನ್ನು ಕೈಚೀಲದಲ್ಲಿರಿಸಿದ್ದರು. ಆದರೆ ಅ.15ರಂದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಯಕ್ಷಗಾನದ ಸಾಮಗ್ರಿ ಹಾಗೂ ಬಟ್ಟೆಗಳನ್ನು ಜೋಡಿಸಲು ಹೋದಾಗ ಚೀಲದಲ್ಲಿದ್ದ ಪ್ರಶಸ್ತಿ ಫಲಕ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಮನೆಯಲ್ಲೇ ಹುಡುಕಾಟ ನಡೆಸಿದರೂ ಫಲಕ ಪತ್ತೆಯಾಗಿಲ್ಲ. ಬಂಗಾರದ ಲೇಪನದ ಪ್ಲೇಟ್​ ಹೊಂದಿದ್ದ ಪ್ರಶಸ್ತಿ ಫಲಕದ ಮೌಲ್ಯ 25,000 ರೂ. ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಹಿರಿಯಡ್ಕ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.