

ಉಡುಪಿ: ಅಪರಿಚಿತ ಸ್ಥಳದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಮೂಲದ ವೃದ್ಧೆಗೆ ಕಾರ್ಕಳದ ಹೊಸಬೆಳಕು ಆಶ್ರಮವು ಪುನರ್ವಸತಿ ಕಲ್ಪಿಸಿದೆ.
ವೃದ್ಧೆ ಗುಣಮುಖರಾದ ಹಿನ್ನೆಲೆಯಲ್ಲಿ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಜಿಲ್ಲಾಸ್ಪತ್ರೆಯಿಂದ ಆಂಬುಲೆನ್ಸ್ ಮೂಲಕ ಆಶ್ರಮಕ್ಕೆ ಕರೆದೊಯ್ದರು. ಆಶ್ರಮದ ಸಂಚಾಲಕರಾದ ತನುಲಾ ತರುಣ್ ಹಾಗೂ ಗೌರೀಶ ಸಹಕರಿಸಿದ್ದಾರೆ.
ಮಗನಿಂದ ಹೇಯ ಕೃತ್ಯ
ಕಳೆದ ಸೆ.26ರಂದು ಬ್ರಹ್ಮಾವರದ ಎಸ್ಎಂಎಸ್ ಆಂಗ್ಲ ಮಾಧ್ಯಮ ಶಾಲೆಯ ಸಮೀಪ ಮಗನೇ ತನ್ನ ತಾಯಿಯನ್ನು ಬಿಟ್ಟುಹೋಗಿದ್ದನು. ಅಪರಿಚಿತ ಸ್ಥಳದಲ್ಲಿ ಅಸಹಾಯಕ ಸ್ಥಿತಿಯಲ್ಲಿ, ದಿಕ್ಕು ತೋಚದೆ ಹಾಗೂ ಅನಾರೋಗ್ಯಕ್ಕೆ ಒಳಗಾಗಿದ್ದ ಮಹಿಳೆಯನ್ನು ಗಮನಿಸಿದ ಶಾಲಾ ಬಸ್ ಚಾಲಕರೊಬ್ಬರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕಾಗಮಿಸಿದ್ದ ಅವರು 112 ತುರ್ತು ಪೊಲೀಸ್ ಸಹಾಯವಾಣಿಯ ಸಿಬ್ಬಂದಿ ನೆರವಿನಿಂದ ವೃದ್ಧೆಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.
ಕಾರ್ಯಾಚರಣೆಯ ವೇಳೆ ವೃದ್ಧೆಯು, ತಾನು ತಮಿಳುನಾಡಿನ ತಿರುವಳ್ಳೂರು ಮೂಲದವರೆಂದು ತಿಳಿಸಿದ್ದು, ತನ್ನ ಹೆಸರು ಸರಸ್ವತಿ (70) ಎಂಬ ಮಾಹಿತಿ ನೀಡಿದ್ದರು. ತನ್ನ ಪುತ್ರ ಹಾಗೂ ಮೊಮ್ಮಗನೇ ಕಾರಿನಲ್ಲಿ ಇಲ್ಲಿಗೆ ತಂದು ಬಿಟ್ಟು ಹೋಗಿದ್ದಾರೆ ಎಂದು ತಿಳಿಸಿ ಅಳಲು ವ್ಯಕ್ತಪಡಿಸಿದ್ದರು.
ಇದೀಗ ವೃದ್ಧೆಯನ್ನು ಅವರ ಕುಟುಂಬದವರೊಂದಿಗೆ ಸೇರಿಸುವ ನಿಟ್ಟಿನಲ್ಲಿ ನಿತ್ಯಾನಂದ ಒಳಕಾಡು ಅವರು ತಮಿಳುನಾಡಿನ ರಾಜಕೀಯ ಮುಖಂಡರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.