ತಮಿಳುನಾಡು ಸಿಎಂಗೆ ಕಪ್ಪು ಬಾವುಟ ಪ್ರದರ್ಶಿಸಲು ಯತ್ನಿಸಿದ ಕರವೇ ಕಾರ್ಯಕರ್ತರ ಬಂಧನ

ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಪೊಲೀಸರು ಉದ್ಯಾವರ ಬಲಾಯಿಪಾದೆಯಲ್ಲಿ ವಶಕ್ಕೆ ಪಡೆದರು.
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಪೊಲೀಸರು ಉದ್ಯಾವರ ಬಲಾಯಿಪಾದೆಯಲ್ಲಿ ವಶಕ್ಕೆ ಪಡೆದರು.
Published on
ಉಡುಪಿ: ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಖಂಡಿಸಿ ತಮಿಳುನಾಡು ಮುಖ್ಯಮಂತ್ರಿ ವಿಜಯ್​ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಲು ಮುಂದಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ್​ ಕುಮಾರ್​ ಶೆಟ್ಟಿ ಬಣ) ಕಾರ್ಯಕರ್ತರನ್ನು ಪೊಲೀಸರು ಉದ್ಯಾವರ ಬಲಾಯಿಪಾದೆಯಲ್ಲಿ ವಶಕ್ಕೆ ಪಡೆದರು.

ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದರು. ಆದರೆ ಮುಖ್ಯಮಂತ್ರಿ ವಿಜಯ್​ ಅವರ ವಾಹನ ಸಂಚಾರಕ್ಕೂ ಮುನ್ನವೇ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದು ಪ್ರತಿಭಟನೆಗೆ ಅವಕಾಶ ನೀಡಲಿಲ್ಲ. ತಮಿಳುನಾಡು ಮುಖ್ಯಮಂತ್ರಿ ಸಂಚರಿಸುವ ಮಾರ್ಗದಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕರವೇ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಯಿತು. ಕರವೇ ಉಡುಪಿ ಜಿಲ್ಲಾ ಗೌರವಾಧ್ಯಕ್ಷ ಅನ್ಸಾರ್​ ಅಹಮದ್​ ಸೇರಿದಂತೆ ಹಲವು ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ವಿಜಯ್​ ವಾಪಾಸ್​ ತೆರಳಿದ ಬಳಿಕ ಬಿಡುಗಡೆಗೊಳಿಸಿದರು.
ಅಭಿಮಾನಿಗಳಿಗೆ ನಿರಾಶೆ
ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಶುಕ್ರವಾರ ತಮಿಳುನಾಡು ಮುಖ್ಯಮಂತ್ರಿ ವಿಜಯ್​ ಭೇಟಿ ನೀಡಿದ್ದು, ಮಂಗಳೂರು ವಿಮಾನ ನಿಲ್ದಾಣದಿಂದಲೇ ನೇರವಾಗಿ ಕೊಲ್ಲೂರಿಗೆ ತೆರಳಿದರು. ಉಡುಪಿಯಲ್ಲಿ ಭೋಜನ ವ್ಯವಸ್ಥೆ ಕೊನೆ ಕ್ಷಣದಲ್ಲಿ ರದ್ದಾಗಿದ್ದು, ಖಾಸಗಿ ಹೋಟೆಲ್​ ಬಳಿ ಹಾಗೂ ಮಾರ್ಗದುದ್ದಕ್ಕೂ ಜಮಾಯಿಸಿದ್ದ ಅಭಿಮಾನಿಗಳಿಗೆ ನಿರಾಸೆಯಾಯಿತು.

ವೇಳಾಪಟ್ಟಿಯ ಪ್ರಕಾರ ವಿಜಯ್​ ಅವರು ಉಡುಪಿಗೆ ಆಗಮಿಸಿದ ಬಳಿಕ ಕರಾವಳಿ ಬೈಪಾಸ್​ ಸಮೀಪದ ಖಾಸಗಿ ಹೋಟೆಲ್​ಗೆ ತೆರಳಿ ಸ್ವಲ್ಪ ವಿಶ್ರಾಂತಿ ಪಡೆದು, ಭೋಜನ ಸ್ವೀಕರಿಸಿ ಬಳಿಕ ಕೊಲ್ಲೂರಿಗೆ ಪ್ರಯಾಣ ಬೆಳೆಸಬೇಕಿತ್ತು. ವಿಜಯ್​ಗಾಗಿ 3 ರೂಂಗಳನ್ನು ಕಾದಿರಿಸಲಾಗಿತ್ತು. ಪೊಲೀಸರು ಬಿಗಿ ಬಂದೋಬಸ್ತ್​ ಕೂಡ ಕೈಗೊಂಡಿದ್ದರು. ಆದರೆ ಸಮಯದ ಅಭಾವದ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಿಕೊಂಡ ಅವರು ರಸ್ತೆ ಬದಿ ನಿಂತಿದ್ದ ಅಭಿಮಾನಿಗಳಿಗೆ ಕೈ ಬೀಸಿ ನೇರವಾಗಿ ಕೊಲ್ಲೂರಿಗೆ ತೆರಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net