

ಉಡುಪಿ: ಕರ್ನಾಟಕದ ಕಡಲು ನಿಜವಾದ ಮತ್ತು ಅತಿದೊಡ್ಡ ಸಂಪತ್ತು. ಕರ್ನಾಟಕ ಕಡಲ ಜೈವಿಕ ತಂತ್ರಜ್ಞಾನ ನೀತಿಗೆ ಅನುಮೋದನೆ ನೀಡಲಾಗಿದ್ದು, ಇದರ ಅಡಿಯಲ್ಲಿ ಸರ್ಕಾರಿ ಮೀನುಗಾರಿಕಾ ಕಾಲೇಜಿನಲ್ಲಿ ಕರ್ನಾಟಕ ಇನ್ ಸ್ಟಿಟ್ಯೂಟ್ ಆ್ ಮೆರೈನ್ ಟೆಕ್ನೊಲಾಜಿ ಸ್ಥಾಪನೆಗೆ ಕ್ರಮ ವಹಿಸಲಾಗಿದೆ. ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆಯನ್ನು 60 ರಿಂದ 200ಕ್ಕೆ ಏರಿಸಲು ತೀಮಾರ್ನಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಹೇಳಿದರು.
ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ವತಿಯಿಂದ ಜಿಲ್ಲಾ ಮಟ್ಟದ 71ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ಸಂದೇಶ ನೀಡಿದರು.
ಉಡುಪಿಯನ್ನು ಅಭಿವೃದ್ಧಿಯ ಆಕಾಶಕ್ಕೆ ಏರಿಸಬೇಕೆಂಬ ಆಸೆ ಸರ್ಕಾರದ್ದಾಗಿದೆ. ಕರಾವಳಿ ಮತ್ತು ಮಲೆನಾಡು ಭಾಗದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶ ಒದಗಿಸಲೂ ಸಹ ಯೋಜಿಸಲಾಗಿದೆ. ತ್ರಾಸಿ ಮತ್ತು ಮರವಂತೆ ಬೀಚುಗಳಲ್ಲಿ ಲಭ್ಯವಿರುವ 7.07 ಎಕರೆ ಭೂಮಿಯನ್ನು ಬಳಸಿಕೊಂಡು 48 ಕೋಟಿ ರೂ. ವೆಚ್ಚದೊಂದಿಗೆ ರೆಸಾರ್ಟ್ ಹಾಗೂ ವಿವಿಧ ಮನರಂಜನಾ ಪಾರ್ಕ್ ಹಾಗೂ ಕ್ರೀಡಾ ಚಟುವಟಿಕೆಗಳನ್ನು ರೂಪಿಸಲು ಮತ್ತು ಉತ್ತೇಜನ ನೀಡಲು ನಿರ್ಧರಿಸಲಾಗಿದೆ ಎಂದರು.
ಕಲಾ ನಡಿಗೆ, ನಿಮ್ಮ ಬಳಿಗೆ ವಿನೂತನ ಯೋಜನೆ
ಗ್ಯಾರೆಂಟಿ ಯೋಜನೆಗಳು, ಪ್ರಜಾಸೇವಾ ಇಲಾಖೆ, ಮೀನುಗಾರಿಕಾ ಲಿಂಕ್ ರಸ್ತೆಗಳ ನಿರ್ವಹಣೆ, ಯುವ ಜನರಿಗೆ ಅನುಕೂಲ ಕಲ್ಪಿಸುವ ಭಾರತ್ ಜೋಡೋ ಯುವ ಸಂಘಗಳು, ಗುಣಮಟ್ಟದ ಆರೋಗ್ಯ ಸೇವೆ, ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ, ತೋಟಗಾರಿಕೆ ಮತ್ತು ಕೃಷಿಗೆ ಹೆಚ್ಚಿನ ಆದ್ಯತೆ ಮತ್ತು ಪ್ರೋತ್ಸಾಹ, ಜಿಲ್ಲೆಯ ಆರ್ಥಿಕ ಬೆನ್ನೆಲುಬಾಗಿರುವ ಮೀನುಗಾರಿಕೆಗೆ ಹೆಚ್ಚಿನ ಉತ್ತೇಜನ, ಕರಾವಳಿಗೆ ಆಗಮಿಸುವ ಪ್ರವಾಸಿಗರಿಗಾಗಿ ಹಾಗೂ ಸ್ಥಳಿಯ ಕಲಾವಿದರಿಗೆ ಪ್ರೋತ್ಸಾಹ ನೀಡುವ ಸಲುವಾಗಿ "ಕಲಾ ನಡಿಗೆ, ನಿಮ್ಮ ಬಳಿಗೆ' ಎಂಬ ವಿನೂತನ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ಸಂಪೂರ್ಣ ಸಾಕ್ಷರತಾ ಜಿಲ್ಲೆ
ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಸಾಕ್ಷರತೆ ಹೊಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯೆಂದು ಘೋಷಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಯಶ್ಪಾಲ್ ಎ ಸುವರ್ಣ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ ಗಫೂರ್, ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.