ಏಪ್ರಿಲ್​ 4 ರಂದು ವಿಶೇಷ ಚೇತನ ಮಕ್ಕಳಿಗಾಗಿ ಕಲಾಸೌರಭ

ಮನೋವೈದ್ಯ ಡಾ. ಪಿ.ವಿ. ಭಂಡಾರಿ ಸುದ್ದಿಗೋಷ್ಠಿ
ಮನೋವೈದ್ಯ ಡಾ. ಪಿ.ವಿ. ಭಂಡಾರಿ ಸುದ್ದಿಗೋಷ್ಠಿ
Published on
ಉಡುಪಿ: ಆಟಿಸಂ ಸೊಸೈಟಿ ಆ್​ ಇಂಡಿಯಾ ಆಶ್ರಯದಲ್ಲಿ ವಿಶೇಷಚೇತನ ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ಮತ್ತು ಪೋಷಕರಿಗೆ ಅಗತ್ಯ ಮಾಹಿತಿ ನೀಡುವ ನಿಟ್ಟಿನಲ್ಲಿ ಏ. 4 ರಂದು ಬನ್ನಂಜೆ ನಾರಾಯಣ ಗುರು ಸಭಾಭವನದಲ್ಲಿ ಕಲಾಸೌರಭ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮನೋವೈದ್ಯ ಡಾ. ಪಿ.ವಿ. ಭಂಡಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬೆಳಿಗ್ಗೆ 9.45ಕ್ಕೆ ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್​ ಮೂಮೆಂಟ್​ನ ಕಾರ್ಯನಿರ್ವಾಹಕ ಅಧಿಕಾರಿ ಸವಿತಾ ಸುಲಗೋಡು ಉದ್ಘಾಟಿಸಲಿದ್ದಾರೆ. ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ. ಪಿ.ವಿ. ಭಂಡಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಉಡುಪಿ ಆಟಿಸಂ ಸೊಸೈಟಿ ಅಧ್ಯಕ್ಷ ಡಾ. ವಿರೂಪಾಕ್ಷ ದೇವರಮನೆ, ಬೆಂಗಳೂರಿನ ಅಮಿತಾ ಪೈ, ಸ್ವಾತಿ ವಲ್ಲಭ್​, ಪ್ರಕಾಶ್​ ರೀಟೇಲ್ಸ್​ನ ಅಶೋಕ್​ ಕುಮಾರ್​, ಗಾಯತ್ರಿ ಎಕ್ಸ್​ಪೋರ್ಟ್ಸ್​ನ ಬೋಳ ಶ್ರೀನಿವಾಸ ಕಾಮತ್​, ಗೀತಾನಂದ ಫೌಂಡೇಶನ್​ನ ಆನಂದ ಸಿ. ಕುಂದರ್​ ಹಾಗೂ ಸಂವೇದ ೌಂಡೇಶನ್​ನ ವಿಠಲ್​ ಭಕ್ತ ಉಪಸ್ಥಿತರಿರಲಿದ್ದಾರೆ ಎಂದರು.

ಸಾಯಂಕಾಲ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ರತ್ನ ಸುವರ್ಣ, ಜಯಕರ ಶೆಟ್ಟಿ ಇಂದ್ರಾಳಿ, ಮಾಜಿ ಜಿಲ್ಲಾ ಗವರ್ನರ್​ ಡಾ. ಗೌರಿ, ಅಭರಣ ಜುವೆಲ್ಲರ್ಸ್​ನ ಸುಭಾಷ್​ ಕಾಮತ್​ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

ಪೋಷಕರಿಗೆ ತಜ್ಞರಿಂದ ಮಾಹಿತಿ
ವಿಶೇಷ ಮಕ್ಕಳ ಪೋಷಕರ ಸಬಲೀಕರಣಕ್ಕಾಗಿ ತಜ್ಞರಿಂದ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ. ಬೆಂಗಳೂರಿನ ಸೃಷ್ಟಿ ಸ್ಪೆಷಲ್​ ಅಕಾಡೆಮಿಯ ಸ್ಥಾಪಕಿ ಸುಚಿತ್ರಾ ಸೋಮಶೇಖರಯ್ಯ, ಬೆಂಗಳೂರಿನ ಸೇವಾ ಇನ್​ ಆಕ್ಷನ್​ನ ತುಳಸಿ, ಯುನಿಸೆಫ್​ನ ಡಾ. ರಾಘವೇಂದ್ರ ಭಟ್​ ಹಾಗೂ ಮೈಸೂರಿನ ಡಾ. ದೀಪ ಶ್ರೀ ಸಂಪನ್ಮೂಲವ್ಯಕ್ತಿಗಳಾಗಿ ಮಾಹಿತಿ ನೀಡಲಿದ್ದಾರೆ ಎಂದರು.

ವಿಶೇಷ ಮಳಿಗೆಗಳ ಆಕರ್ಷಣೆ
ಕಾರ್ಯಕ್ರಮದ ಅಂಗವಾಗಿ ವಿಶೇಷ ಚೇತನ ಮಕ್ಕಳ ಅಗತ್ಯತೆಗಳಿಗೆ ಬೇಕಾದ ಬಟ್ಟೆಗಳು, ಚಿಕಿತ್ಸಾ ಸಾಮಗ್ರಿಗಳು ಹಾಗೂ ವೃತ್ತಿಪರ ಚಿಕಿತ್ಸೆಗಳ ಮಳಿಗೆಗಳು ಇರಲಿವೆ. ಅಲ್ಲದೆ ಮಕ್ಕಳಿಂದ ಸಿದ್ಧಗೊಂಡ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಸರ್ಕಾರ ಅಂಗವಿಕಲ ಮಕ್ಕಳಿಗಾಗಿ ಜಾರಿಗೆ ತಂದಿರುವ ನಿರಾಮಯ ವಿಮಾ ಸೌಲಭ್ಯ ಸಹಿತ ಸರ್ಕಾರಿ ಸೌಲಭ್ಯಗಳ ಮಾಹಿತಿ ನೀಡಲಾಗುವುದು. ಪೋಷಕರು ಆಧಾರ್​ ಕಾರ್ಡ್​ ಮತ್ತು ಅಂಗವಿಕಲರ ಗುರುತಿನ ಪತ್ರ ಕಡ್ಡಾಯವಾಗಿ ತರಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಆಟಿಸಂ ಸೊಸೈಟಿ ಅಧ್ಯಕ್ಷ ಡಾ. ವಿರೂಪಾಕ್ಷ ದೇವರಮನೆ, ಕಾರ್ಯಕ್ರಮ ಸಂಯೋಜಕರಾದ ಕೀತೇಶ್​, ಸೌಜನ್ಯ ಶೆಟ್ಟಿ, ವಿಠಲ ಭಕ್ತ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net