ಉಡುಪಿ: ಸೃಜನಾತ್ಮಕ ಚಟುವಟಿಕೆಯಿಂದ ಕೂಡಿದ ಶಿಬಿರಗಳಿಂದ ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನ ಆಗಲಿದೆ. ಬೇಸಿಗೆಯ ರಜಾ ದಿನಗಳನ್ನು ಸದುಪಯೋಗ ಮಾಡಿಕೊಳ್ಳಲು ಇಂತಹ ಶಿಬಿರಗಳು ಪೂರಕ. ಸೀಮಿತ ದಿನದಲ್ಲಿ ಕಲಿಕೆಯ ಆಸಕ್ತಿಯೊಂದಿಗೆ ಅವರಲ್ಲಿ ಶಿಸ್ತು, ಶ್ರದ್ಧೆಯ ಭಾವವೂ ವೃದ್ಧಿಯಾಗುತ್ತದೆ ಎಂದು ವಿದ್ವಾನ್ ಬನ್ನಂಜೆ ಗೋಪಾಲಕೃಷ್ಣ ಉಪಾಧ್ಯ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಅರಿತೋಡು ಜನಾರ್ದನ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ಪುತ್ತೂರು ಸುಬ್ರಹ್ಮಣ್ಯ ನಗರದ ಕಲ್ಯಾಣಿ ಕಲಾಕೇಂದ್ರ (ರಿ.)ದ ವತಿಯಿಂದ 8ರಿಂದ 15 ವರ್ಷದೊಳಗಿನ ಮಕ್ಕಳಿಗಾಗಿ ಆಯೋಜಿಸಿದ್ದ ಕಲಾ ಚಟುವಟಿಕೆಗಳ 'ಕಲರವ' ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಲಾಕೇಂದ್ರದ ಕೋಶಾಧಿಕಾರಿ ಆದ್ಯತಾ ಭಟ್ ಶಿಬಿರ ಸಂಯೋಜಿಸಿ ಮಕ್ಕಳಿಂದ ಶಿಬಿರಗೀತೆ, ಮನೋರಂಜನಾ ಆಟಗಳು ಹಾಗೂ ವಿವಿಧ ಚಟುವಟಿಕೆ ಮಾಡಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸುದರ್ಶನ್-ಮಿಮಿಕ್ರಿ, ಡಾ.ಶ್ರೀಧರ್ ಬಾಯರಿ- ಆರೋಗ್ಯ ಮಾಹಿತಿ, ರಘುರಾಮ ಆಚಾರ್ಯ ಪುತ್ತೂರು- ಫನ್ನಿ ಗೇಮ್ಸ್, ಸುನೀತಾ ಚೈತನ್ಯ ಅವರ ತಂಡ- ಯೋಗಾಸನ, ದಾಮೋದರ ಆಚಾರ್ಯ- ಕ್ರಾಫ್ಟ್, ಯೋಗೀಶ್ ಕೊಳಲಗಿರಿ- ರಂಗ ಚಟುವಟಿಕೆ ಕೈಗೊಂಡರು. ಪ್ರಿಯಂವದಾ ಐತಾಳ್ ಧ್ಯಾನ ಮಾಡಿಸಿದರು. ಲತಾ ಭಟ್ ನೀತಿ ಕಥೆ ಹೇಳಿದರು.
ಕಲಾಕೇಂದ್ರದ ಉಪಾಧ್ಯಕ್ಷ ವೆಂಕಟಕೃಷ್ಣ ಭಟ್ ಉಪಸ್ಥಿತರಿದ್ದರು. ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ ಶಿಬಿರಕ್ಕೆ ಭೇಟಿ ನೀಡಿ ಮಕ್ಕಳಿಗೆ ಹಿತನುಡಿಯನ್ನಾಡಿದರು. ಕಲಾಕೇಂದ್ರದ ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ ಸ್ವಾಗತಿಸಿದರು. ಸಂಸ್ಥೆಯ ಅಧ್ಯಕ್ಷ ನಿರಂಜನ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರೋಪ ಸಮಾರಂಭ
ಶಿಬಿರದ ಸಮಾರೋಪ ಸಮಾರಂಭದಲ್ಲಿ ವಿದ್ವಾನ್ ಶ್ರೀಕಾಂತ ಉಪಾಧ್ಯ ಮಾತನಾಡಿ, ಶಿಬಿರದಲ್ಲಿ ಗಳಿಸಿದ ಜ್ಞಾನವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿ ಶುಭಹಾರೈಸಿದರು. ಮಕ್ಕಳು ಮತ್ತು ಪಾಲಕರು ಶಿಬಿರದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಶಿಬಿರದಲ್ಲಿ 75 ಮಕ್ಕಳು ಪಾಲ್ಗೊಂಡಿದ್ದರು. ಕಲಾಕೇಂದ್ರದ ಅಧ್ಯಕ್ಷ ನಿರಂಜನ್ ಭಟ್ ವಂದಿಸಿದರು. ವಸಂತ ಪಾಲನ್ ಕಾರ್ಯಕ್ರಮ ನಿರೂಪಿಸಿದರು.