ಉಡುಪಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜ್ಯೋತಿ ಹೆಬ್ಬಾರ್ ಮಾತನಾಡಿದರು. ವೆರೋನಿಕಾ ಕರ್ನೇಲಿಯೋ, ಗೀತಾ ವಾಗ್ಲೆ, ಭಾನು ಭಾಸ್ಕರ್, ಮೀನಾಕ್ಷಿ ಮಾಧವ, ಅನಿತಾ ಡಿಸೋಜಾ, ಶೋಭಾ ನಾಯ್ಕ ಇದ್ದರು.
Published on:
Copied
Follow Us
* ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಆಗ್ರಹ
* ಅಧಿಕಾರಕ್ಕಾಗಿ ನಾರಿಯನ್ನು ಬಳಸಿಕೊಳ್ಳುವ 'ದುಷ್ಟ ಶಕ್ತಿ' ಬಿಜೆಪಿ
ಉಡುಪಿ: ಕೇಂದ್ರದ ಎನ್ಡಿಎ ಸರ್ಕಾರ ಕೂಡಲೇ ಸರ್ವಪಕ್ಷದ ಸಭೆ ಕರೆದು 2023ರಲ್ಲಿ ಪಾಸಾಗಿದ್ದ ಶೇ.33 ಮಹಿಳಾ ಮೀಸಲಾತಿಗೆ ಯಾವುದೇ ಥಳುಕು ಹಾಕದೆ ಮುಂದಿನ ಚುನಾವಣೆಯ ಒಳಗೆ ಜಾರಿಗೊಳಿಸಬೇಕು. ಈಗಿರುವ 543 ಸ್ಥಾನಗಳಲ್ಲಿ 181 ಸ್ಥಾನವನ್ನು ಪುರುಷರು ಮಹಿಳೆಯರಿಗೆ ಬಿಟ್ಟುಕೊಡಬೇಕು. ಆಗ ಮಾತ್ರ ಅದು 'ನಾರಿ ಶಕ್ತಿ' ಆಗುತ್ತದೆ. ಇಲ್ಲವಾದರೆ ಅಧಿಕಾರಕ್ಕಾಗಿ ನಾರಿಯನ್ನು ಬಳಸಿಕೊಳ್ಳುವ ಬಿಜೆಪಿಯವರ 'ದುಷ್ಟ ಶಕ್ತಿ' ಆಗುತ್ತದೆ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಆಕ್ರೋಶ ವ್ಯಕ್ತಪಡಿಸಿದರು.
ಉಡುಪಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ (ಏ.23) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯವರು ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು 'ನಾರಿ ಶಕ್ತಿ ವಂದನಾ' ಎಂದು ಕರೆಯುವುದನ್ನು ಮೊದಲು ನಿಲ್ಲಿಸಬೇಕು. ಇದು ಪುರುಷ ಪ್ರಧಾನ ಪರಿಸ್ಥಿತಿಯ ಭಾಷೆಯಾಗಿದೆ. ಮಹಿಳೆಯರನ್ನು ಪೂಜಿಸುವುದು ಬೇಕಾಗಿಲ್ಲ. ಆದರೆ, ಅವರಿಗೆ ಸಿಗಬೇಕಾದ ಸಾಂವಿಧಾನಿಕ ಅಧಿಕಾರ ನಿರಾಕರಿಸಬೇಡಿ ಎಂದು ಆಗ್ರಹಿಸಿದರು.
ಬಿಜೆಪಿಯ ಭಿಕ್ಷೆಯಲ್ಲ
ಪ್ರಾತಿನಿಧ್ಯ ಎನ್ನುವುದು ಬಿಜೆಪಿಯವರು ನೀಡುವ ಭಿಕ್ಷೆ ಅಥವಾ ಕೊಡುಗೆಯಲ್ಲ. ಅದು ಎಲ್ಲ ಮಹಿಳೆಯರ ಹಕ್ಕು. 2008 ಮತ್ತು 2010ರಲ್ಲಿ ಎರಡು ಬಾರಿ ಯುಪಿಎ ಸರ್ಕಾರ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿತ್ತು. ಆದರೆ, ಆ ಮಸೂದೆಯ ಸೋಲಿಗೆ ಕಾರಣರಾದವರು ಇದೇ ಬಿಜೆಪಿಯವರು ಎಂಬುದನ್ನು ಯಾರೂ ಮರೆಯುವಂತಿಲ್ಲ. ಆದರೂ 2023ರಲ್ಲಿಯೇ ವಿರೋಧ ಪಕ್ಷವಾದ ಕಾಂಗ್ರೆಸ್ನ ಸಂಪೂರ್ಣ ಬೆಂಬಲದಿಂದ ಶೇ.33 ಮಹಿಳಾ ಮೀಸಲಾತಿ ಮಸೂದೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪಾಸಾಗಿದೆ ಎಂದರು.
ಕ್ಷೇತ್ರ ಪುನರ್ ವಿಂಗಡಣೆ ಎನ್ನುವುದು ವಿಸ್ತೃತ ಚರ್ಚೆಯ ವಿಷಯವಾಗಿದೆ. ಅದನ್ನು ಮಹಿಳಾ ಮೀಸಲಾತಿಯೊಂದಿಗೆ ಸೇರಿಸಿದ್ದು ಸರಿಯಾದ ಕ್ರಮವಲ್ಲ. ಈಗಿರುವ 543 ಸದಸ್ಯರ ಲೋಕಸಭೆಯಲ್ಲಿ ಶೇ.33 ಮೀಸಲಾತಿ ಪ್ರಕಾರ 181 ಸ್ಥಾನ ಮಹಿಳೆಯರಿಗೆ ಮೊದಲು ನೀಡಿ. ಅದನ್ನು ಬಿಟ್ಟು ಮತ್ತೆ 350ರಷ್ಟು ಹೆಚ್ಚು ಸ್ಥಾನ ಮಾಡಿ, 286 ಸ್ಥಾನ ಮಹಿಳೆಯರಿಗೆ ನೀಡಿದರೆ ಅದೆಂತಹ ಸಾಧನೆ ನಿಮ್ಮದು? ಬಿಜೆಪಿ ಸರ್ಕಾರ ತಾನು ಮಹಿಳಾ ವಿರೋಧಿ ಎಂಬುದನ್ನು ಕ್ಷೇತ್ರದ ವಿಂಗಡನೆ ಬಿಲ್ ಮಂಡಿಸುವ ಮೂಲಕ ಮತ್ತೊಮ್ಮೆ ಸಾಬೀತು ಮಾಡಿದೆ. ಬೇರೆ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಜನರ ದಿಕ್ಕು ತಪ್ಪಿಸುವ, ಮಹಿಳೆಯರನ್ನು ಭಾವನಾತ್ಮಕವಾಗಿ ಕೆರಳಿಸಿ ಕಾಂಗ್ರೆಸ್ ವಿರುದ್ಧ ಮಹಿಳೆಯರನ್ನು ಎತ್ತಿ ಕಟ್ಟುವ ಯತ್ನ ಮಾಡಿತ್ತು. ಆದರೆ, ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿ ಬಿಜೆಪಿ ಮತ್ತು ಮೋದಿ ಟೀಮ್ಗೆ ಸೋಲಾಗಿದೆ ಎಂದು ಜ್ಯೋತಿ ಹೆಬ್ಬಾರ್ ಟೀಕಿಸಿದರು.