ಭ್ರಷ್ಟಾಚಾರ ತೊಲಗಿಸಲು ಲೋಕಾಯುಕ್ತ ಬದ್ಧ

ಉಡುಪಿಯಲ್ಲಿ ಆಯೋಜಿಸಿದ್ದ ಲೋಕಾಯುಕ್ತ ಬಾಕಿ ಪ್ರಕರಣಗಳ ವಿಚಾರಣೆ, ವಿಲೇವಾರಿ ಸಭೆಯನ್ನು ನ್ಯಾ. ಬಿ.ವೀರಪ್ಪ ಉದ್ಘಾಟಿಸಿದರು. ನ್ಯಾ.ಕಿರಣ್​ ಗಂಗಣ್ಣನವರ್​, ಸ್ವರೂಪಾ ಟಿ.ಕೆ., ಪ್ರತೀಕ್​ ಬಾಯಲ್​, ಅರವಿಂದ್​ ಎನ್​.ವಿ., ಹರಿರಾಂ ಶಂಕರ್​ ಇತರರಿದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ಲೋಕಾಯುಕ್ತ ಬಾಕಿ ಪ್ರಕರಣಗಳ ವಿಚಾರಣೆ, ವಿಲೇವಾರಿ ಸಭೆಯನ್ನು ನ್ಯಾ. ಬಿ.ವೀರಪ್ಪ ಉದ್ಘಾಟಿಸಿದರು. ನ್ಯಾ.ಕಿರಣ್​ ಗಂಗಣ್ಣನವರ್​, ಸ್ವರೂಪಾ ಟಿ.ಕೆ., ಪ್ರತೀಕ್​ ಬಾಯಲ್​, ಅರವಿಂದ್​ ಎನ್​.ವಿ., ಹರಿರಾಂ ಶಂಕರ್​ ಇತರರಿದ್ದರು.
Published on

ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ವಿಶ್ವಾಸ

ವಿವಿಧ ಬಾಕಿ  ಪ್ರಕರಣಗಳ ವಿಚಾರಣೆ, ವಿಲೇವಾರಿ ಸಭೆ 

ಉಡುಪಿ: ಎಲ್ಲ ಇಲಾಖಾ ಅಧಿಕಾರಿಗಳು ಕರ್ತವ್ಯವೇ ದೇವರೆಂಬ ಮನೋಭಾವದೊಂದಿಗೆ ಭ್ರಷ್ಟಾಚಾರದ ಭೂತ ನಿರ್ನಾಮ ಮಾಡಲು ಸಂಕಲ್ಪ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಅತಿ ದೊಡ್ಡ ಪಿಡುಗಾಗಿದ್ದು, ಬುಡ ಸಮೇತ ನಿಮೂರ್ಲನೆ ಮಾಡಲು ಲೋಕಾಯುಕ್ತ ಸಂಸ್ಥೆ ಸದಾ ಬದ್ಧವಾಗಿದೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್​ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಗುರುವಾರ (ಫೆ.26) ಆಯೋಜಿಸಿದ್ದ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ವಿವಿಧ ಬಾಕಿ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಸಭೆ ಉದ್ಘಾಟಿಸಿ ಮಾತನಾಡಿದರು.

ಕಚೇರಿಗೆ ಅಲೆದಾಡಿಸಬೇಡಿ

ಜಿಲ್ಲೆಯು ಶೈಕ್ಷಣಿಕ ವ್ಯವಸ್ಥೆಯಲ್ಲಿ ಮುಂದಿದ್ದು ಯಾವುದೇ ಕಪ್ಪುಚುಕ್ಕೆ ಇಲ್ಲದೆ ಅಧಿಕಾರಿ ಹಾಗೂ ಸಿಬ್ಬಂದಿ ಕಾಯಾ, ವಾಚಾ, ಮನಸಾ ಪ್ರಾಮಾಣಿಕ ಸೇವೆ ನೀಡಬೇಕು. ಸಾರ್ವಜನಿಕರು ಪದೇಪದೆ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ನಿಯಮಾನುಸಾರ ಸಕಾಲದಲ್ಲಿ ಸರ್ಕಾರಿ ಸೌಲಭ್ಯ ಒದಗಿಸಬೇಕು. ಭ್ರಷ್ಟಾಚಾರ ಕೊನೆಗಾಣಿಸಲು ಸಾರ್ವಜನಿಕರೂ ಸಹ ಬದಲಾಗಬೇಕಿದ್ದು, ಅದಕ್ಕಾಗಿ ಮೊದಲು ಚುನಾವಣಾ ಸಮಯದಲ್ಲಿ ಯಾವುದೇ ಆಮಿಷಗಳಿಗೆ ಒಳಗಾಗದೇ ಮತ ಚಲಾಯಿಸಬೇಕು ಎಂದರು.

150 ಪ್ರಕರಣ ವಿಚಾರಣೆ

ಇಂದು ಉಡುಪಿ ಜಿಲ್ಲೆಯ 150 ಬಾಕಿ ಪ್ರಕರಣ ವಿಚಾರಣೆ ನಡೆಸಲಾಗುತ್ತಿದ್ದು, ಸಾರ್ವಜನಿಕರು ಹಾಗೂ ಅಧಿಕಾರಿಗಳು ಪೂರ್ಣಗೊಳಿಸಲು ಸಹಕಾರ ನೀಡಬೇಕು. ಒಂದೊಮ್ಮೆ ಸಾರ್ವಜನಿಕರು ಸುಳ್ಳು ಪ್ರಕರಣ ದಾಖಲಿಸಿದ್ದಲ್ಲಿ ಅವರ ವಿರುದ್ಧವೂ ಪ್ರಕರಣ ದಾಖಲಿಸಿ, 3 ವರ್ಷ ಜೈಲುಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶವಿದೆ ಎಂದು ನ್ಯಾ. ವೀರಪ್ಪ ಎಚ್ಚರಿಕೆ ನೀಡಿದರು.
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್​ ಗಂಗಣ್ಣನವರ್​ ಅಧ್ಯಕ್ಷತೆ ವಹಿಸಿದ್ದರು. ಲೋಕಾಯುಕ್ತ ಉಪ ನಿಬಂಧಕ (ವಿಚಾರಣೆ) ಅರವಿಂದ್​ ಎನ್​.ವಿ., ಜಿಪಂ ಸಿಇಒ ಪ್ರತೀಕ್​ ಬಾಯಲ್​, ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಂ ಶಂಕರ್​, ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸ್​ ಅಧೀಕ್ಷಕ ಬಿ.ಪಿ. ದಿನೇಶಕುಮಾರ್​, ಡಿಎಫ್​ಒ ರುಥ್ರೇನ್​ ಪಿ., ವೈಲ್ಡ್​ ಲೈಫ್​ ಡಿಎಫ್​ಒ ಶಿವರಾಂ ಎಂ. ಬಾಬು, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್​ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಸಿವಿಲ್​ ನ್ಯಾಯಾಧೀಶ ಮನು ಪಟೇಲ್​ ಬಿ.ವೈ. ವಂದಿಸಿದರು.

ವಿವಿಧ ಕೇಸ್​ ಮುಕ್ತಾಯ, ಮುಂದೂಡಿಕೆ

ಬನ್ನಂಜೆ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ಮೂಲ ಸೌಕರ್ಯಗಳ ಕೊರತೆ, ರಾಜ್ಯ ಮಹಿಳಾ ನಿಲಯದಲ್ಲಿನ ಅನಾಥರಿಗೆ ಮೂಲ ಸೌಕರ್ಯ ಮತ್ತು ಅವರು ತಯಾರಿಸುವ ಉತ್ಪನ್ನಗಳ ಬೆಲೆಯಲ್ಲಿ ವ್ಯತ್ಯಯ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಕಚೇರಿಯ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ, ಚಿತ್ರಪಾಡಿ ಶಾಲೆಯ ಅಡುಗೆ ಕೋಣೆ ಹಾಗೂ ಶೌಚಾಲಯಗಳ ನ್ಯೂನತೆಯ ಹಿನ್ನೆಲೆ, ಸ್ವಯಂ ಪ್ರೇರಿತ ದಾಖಲಾಗಿದ್ದ ದೂರುಗಳ ವಿಚಾರಣೆ ನಡೆಸಲಾಯಿತು. ಸಮಸ್ಯೆ ಬಗೆಹರಿಸಿ ಪ್ರಕರಣ ಮುಕ್ತಾಯಗೊಳಿಸಲಾಯಿತು. ಪೊಲೀಸ್​ ಮಿರರ್​ ವಾರಪತ್ರಿಕೆಯಲ್ಲಿ ಆರ್​ಟಿಒ ಮತ್ತು ಉಪನೋಂದಣಾಧಿಕಾರಿ ವಿರುದ್ಧದ ಭ್ರಷ್ಟಾಚಾರ ದೂರು, ಹಿರಿಯ  ಉಪನೋಂದಣಾಧಿಕಾರಿ ಮತ್ತು ವಿವಾಹ ನೋಂದಣಾಧಿಕಾರಿಯ ವಿರುದ್ಧ ಭ್ರಷ್ಟಾಚಾರದ ದೂರು ನೀಡಿದ್ದ ಕದಾರರು ಅನುಪಸ್ಥಿತಿಯಿಂದ ವಿಚಾರಣೆ ಮುಂದೂಡಲಾಯಿತು. ಜಿಲ್ಲೆಯ ನಿವೃತ್ತ ಯೋಧರಿಗೆ, ಹುತಾತ್ಮ ಯೋಧರ ಅವಲಂಬಿತರಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಅವಲಂಬಿತರಿಗೆ ನಿವೇಶನ ನೀಡದಿರುವ ದೂರು ಪರಿಶೀಲಿಸಿ, ವಿಳಂಬವಿಲ್ಲದೆ ನಿಯಮಾನುಸಾರ ನಿವೇಶನ ನೀಡಲು ಉಪ ವಿಭಾಗಾಧಿಕಾರಿಗಳಿಗೆ ನ್ಯಾಯಮೂರ್ತಿ ವೀರಪ್ಪ ಸೂಚಿಸಿದರು. 

ನ್ಯಾಯಕ್ಕಾಗಿ ಹೋರಾಡದಿದ್ದರೆ ಅಕ್ಷಮ್ಯ ಅಪರಾಧ

ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷ ಗತಿಸಿದೆ. ಪ್ರಪಂಚದಲ್ಲಿಯೇ ಭಾರತವು ಪ್ರಜಾಪ್ರಭುತ್ವದ 4ನೇ ಅಗ್ರಗಣ್ಯ ದೇಶವಾಗಿದೆ. ಹೀಗಿದ್ದರೂ ನಮ್ಮ ದೇಶದ ನ್ಯಾಯದಾನ ವ್ಯವಸ್ಥೆ ಹಾಗೂ ಲೋಕಾಯುಕ್ತ ಪ್ರಕರಣಗಳ ವಿಲೇವಾರಿ ತ್ವರಿತವಾಗಿ ಮಾಡಲು ಆಗುತ್ತಿಲ್ಲ. ಪೂರ್ವಜರು ದೀರ್ಘ ಹೋರಾಟ ನಡೆಸಿ ಸ್ವಾತಂತ್ರ್ಯ ಒದಗಿಸಿಕೊಟ್ಟಿದ್ದಾರೆ. ಅವರು ಸುಮ್ಮನಿದ್ದಿದ್ದರೆ ಇಂದಿಗೂ ನಾವುಗಳು ಬ್ರಿಟಿಷರ ದಬ್ಬಾಳಿಕೆಯಲ್ಲೇ ಇರಬೇಕಿತ್ತು. ಎಲ್ಲರಿಗೂ ನೀಡಲಾದ ಶಾಸನಬದ್ಧ ಹಕ್ಕು ಮತ್ತು ಕರ್ತವ್ಯಗಳನ್ನು ಧೈರ್ಯದಿಂದ ಕೇಳಿ ಪಡೆದುಕೊಳ್ಳಬೇಕು. ನ್ಯಾಯ ಪಡೆಯಲು ಹೋರಾಟ ಮಾಡದಿದ್ದರೆ ಅದೂ ಸಹ ಅಕ್ಷಮ್ಯ ಅಪರಾಧ ಎಂದು ನ್ಯಾಯಮೂರ್ತಿ ಬಿ.ವೀರಪ್ಪ ಅಭಿಪ್ರಾಯಪಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net