ಅಪಾಯದ ಹಾದಿಯಲ್ಲಿ ಪಯಣ

ಕಡಂದಲೆ ಗ್ರಾಮದ ಹೊಸಂಗಡಿ ಆಲಗುಂಡಿ ಸಂಪರ್ಕ ರಸ್ತೆ ನಾದುರಸ್ತಿಯಲ್ಲಿರುವುದು.
ಕಡಂದಲೆ ಗ್ರಾಮದ ಹೊಸಂಗಡಿ ಆಲಗುಂಡಿ ಸಂಪರ್ಕ ರಸ್ತೆ ನಾದುರಸ್ತಿಯಲ್ಲಿರುವುದು.
Published on
ಯಶೋಧರ ವಿ.ಬಂಗೇರ ಮೂಡುಬಿದಿರೆ
ಒಂದು ಕಾಲದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮಾದರಿಯಾಗಿದ್ದ, ಜಿಪಂ ಮಾಜಿ ಅಧ್ಯಕ್ಷರ ತವರು ಪ್ರದೇಶವಾದ ಕಡಂದಲೆಯಲ್ಲಿ ಇಂದು ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಹೊಸಂಗಡಿ-ಆಲಗುಂಡಿ ಸಂಪರ್ಕಿಸುವ ಒಂದೂವರೆ ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, 50ಕ್ಕೂ ಹೆಚ್ಚು ಕುಟುಂಬಗಳು ನಿತ್ಯ ಸಂಚಾರಕ್ಕೆ ಪರದಾಡುವಂತಾಗಿದೆ.
ಪರಾರಿ ಎಸ್‌ಸಿ ಕಾಲನಿ, ಪಾಪೇಡಿ, ಕುಮೇರ್ ಸೇರಿದಂತೆ ಹಲವು ಭಾಗಗಳ ಜನರು ಈ ರಸ್ತೆಯನ್ನು ಅವಲಂಬಿಸಿದ್ದಾರೆ. ಡಾಂಬರು ಕಿತ್ತುಹೋಗಿ ಆಳವಾದ ಹೊಂಡಗಳು ಬಿದ್ದಿರುವುದರಿಂದ ಮಳೆಗಾಲದಲ್ಲಿ ಸಂಚರಿಸುವುದೇ ಕಷ್ಟ. ಮಳೆನೀರು ತುಂಬಿದಾಗ ಹೊಂಡಗಳ ಅಳತೆ ತಿಳಿಯದೆ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿದೆ. ಶಾಲಾ ಮಕ್ಕಳು, ವೃದ್ಧರು ಮತ್ತು ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ತೆರಳುವ ರೋಗಿಗಳು ಈ ರಸ್ತೆಯಲ್ಲಿ ಸಂಚರಿಸುವುದು ಸಾಹಸದ ಕೆಲಸ.

ಒಂದು ದಶಕದ ನಿರ್ಲಕ್ಷ್ಯ

ಗ್ರಾಮಸ್ಥರ ಸಹಕಾರದಿಂದ ಮೂರು ದಶಕಗಳ ಹಿಂದೆ ಈ ರಸ್ತೆ ನಿರ್ಮಾಣವಾಗಿತ್ತು. ಆ ಬಳಿಕ ತಾಲೂಕು ಪಂಚಾಯಿತಿಯಿಂದ 25 ಸಾವಿರ ರೂ. ಅನುದಾನ ದೊರೆತಿದ್ದರೂ, ಸುಚರಿತ ಶೆಟ್ಟಿ ಸ್ವಂತ ಗದ್ದೆಯ ಮಣ್ಣನ್ನು ಬಳಸಿಕೊಂಡು ವೈಯಕ್ತಿಕವಾಗಿ 25 ಸಾವಿರ ರೂ. ವೆಚ್ಚ ಮಾಡಿ ರಸ್ತೆ ನಿರ್ಮಿಸಿದ್ದರು. ಎರಡು ಲಕ್ಷ ರೂ. ವೆಚ್ಚದಲ್ಲಿ ಡಾಂಬರೀಕರಣ, ಉದ್ಯೋಗ ಖಾತ್ರಿ ಯೋಜನೆಯಡಿ ಕಾಂಕ್ರೀಟ್ ಕಾಮಗಾರಿ, ಜಿಲ್ಲಾ ಪಂಚಾಯಿತಿಯ 5 ಲಕ್ಷ ರೂ. ಅನುದಾನದಲ್ಲಿ ರಸ್ತೆ ನಿರ್ಮಾಣಗೊಂಡಿತ್ತು. ಆದರೆ ಒಂದು ದಶಕಕ್ಕೂ ಅಧಿಕ ಕಾಲದಿಂದ ಯಾವುದೇ ದುರಸ್ತಿಯಾಗಿಲ್ಲ.

ಅಪಘಾತಕ್ಕೂ ಮುನ್ನ ಎಚ್ಚೆತ್ತುಕೊಳ್ಳಿ

ಮಳೆಗಾಲದಲ್ಲಿ ರಸ್ತೆ ಇನ್ನಷ್ಟು ಅಪಾಯಕಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು ಸ್ಥಳ ಪರಿಶೀಲನೆ ನಡೆಸಿ ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಅಪಘಾತ ಸಂಭವಿಸಿದ ಬಳಿಕ ಕ್ರಮ ಕೈಗೊಳ್ಳುವ ಬದಲು ಮುನ್ನೆಚ್ಚರಿಕೆಯಾಗಿ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡುವುದು ಅಗತ್ಯ ಎಂಬ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗಿದೆ.

ಇಲ್ಲಿನ ರಸ್ತೆ ದುರಸ್ತಿಗಾಗಿ ಹಲವು ಬಾರಿ ಮನವಿ ಸಲ್ಲಿಸಿದರೂ ಶಾಸಕರಿಂದ ಸ್ಪಂದನೆ ದೊರೆತಿಲ್ಲ. ರಾಜಕೀಯ ದ್ವೇಷದ ಹೊಣೆಯನ್ನು ಸಾಮಾನ್ಯ ಜನರು ಹೊರುವಂತಾಗಿದೆ. ರಾಜಕೀಯ ಬದಿಗಿಟ್ಟು ರಸ್ತೆ ದುರಸ್ತಿಗೆ ಆದ್ಯತೆ ನೀಡಬೇಕು.

— ಕೆ.ಪಿ.ಸುಚರಿತ ಶೆಟ್ಟಿ ಜಿಪಂ ಮಾಜಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net