ಡ್ರಗ್ಸ್​ ದಂಧೆ ಕಡಿವಾಣಕ್ಕೆ ಕೈಜೋಡಿಸಿ

ಉಡುಪಿಯ ಕ್ಲಾಕ್​ ಟವರ್​ ಬಳಿ ಕೇರಳ ಪೊಲೀಸರ ರಾಷ್ಟ್ರೀಯ ಬೈಕ್​ ರ್ಯಾಲಿ ಮುಂದುವರಿಕೆಗೆ ಅಬೀದ್​ ಗದ್ಯಾಳ, ಹರಿರಾಮ ಶಂಕರ ಚಾಲನೆ ನೀಡಿದರು. ಸುಧಾಕರ ನಾಯ್ಕ, ಬೆಳ್ಳಿಯಪ್ಪ, ಅನಿತಾ ಎಂ. ಇತರರಿದ್ದರು.
ಉಡುಪಿಯ ಕ್ಲಾಕ್​ ಟವರ್​ ಬಳಿ ಕೇರಳ ಪೊಲೀಸರ ರಾಷ್ಟ್ರೀಯ ಬೈಕ್​ ರ್ಯಾಲಿ ಮುಂದುವರಿಕೆಗೆ ಅಬೀದ್​ ಗದ್ಯಾಳ, ಹರಿರಾಮ ಶಂಕರ ಚಾಲನೆ ನೀಡಿದರು. ಸುಧಾಕರ ನಾಯ್ಕ, ಬೆಳ್ಳಿಯಪ್ಪ, ಅನಿತಾ ಎಂ. ಇತರರಿದ್ದರು.
Published on: 

* ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಮ ಶಂಕರ ಕರೆ

* ಕೇರಳಂ ಪೊಲೀಸರ ರಾಷ್ಟ್ರೀಯ ಬೈಕ್​ ರ್ಯಾಲಿಗೆ ಸ್ವಾಗತ

ಉಡುಪಿ: ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆಗೆ ಕಡಿವಾಣ ಹಾಕಲು ದೇಶದ ಪೊಲೀಸ್​ ವ್ಯವಸ್ಥೆ ಸನ್ನದ್ಧವಾಗಿದೆ. ನಮ್ಮ ಜಿಲ್ಲೆಯಲ್ಲೂ ಸಹ ಯಾರಾದರೂ ಮಾದಕ ವಸ್ತು ಬಳಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದರೆ ಕೂಡಲೇ ಪೊಲೀಸರಿಗೆ ತಿಳಿಸಬೇಕು. ಸ್ನೇಹಿತರು, ಪರಿಚಿತರು ಅಥವಾ ಬೇರೆ ಯಾರಾದರೂ ಈ ಜಾಲಕ್ಕೆ ಬಲಿಯಾಗುತ್ತಿದ್ದರೆ ಅದರಿಂದ ಹೊರ ತರುವ ಕೆಲಸ ಮಾಡಬೇಕು. ಡ್ರಗ್ಸ್​ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಮ ಶಂಕರ ಕರೆ ನೀಡಿದರು.

ರಾಷ್ಟ್ರೀಯ ಏಕತಾ ದಿನದ ನಿಮಿತ್ತ 'ಮಾದಕ ದ್ರವ್ಯಗಳ ವಿರುದ್ಧ ಹೋರಾಟ' ಎಂಬ ಜಾಗೃತಿ ಸಂದೇಶದೊಂದಿಗೆ ಕೇರಳಂ ಲಕ್ಷದ್ವೀಪದಿಂದ ಗುಜರಾತ್​ನ ಏಕತಾ ನಗರಕ್ಕೆ ತೆರಳಲಿರುವ ಕೇರಳಂ ಪೊಲೀಸರ ರಾಷ್ಟ್ರೀಯ ಬೈಕ್​ ರ್ಯಾಲಿಗೆ ಸ್ವಾಗತಿಸಲು ಉಡುಪಿ ಜಿಲ್ಲಾ ಪೊಲೀಸ್​ ಇಲಾಖೆಯ ವತಿಯಿಂದ ಉಡುಪಿ ನಗರದ ಕ್ಲಾಕ್​ ಟವರ್​ ಬಳಿ ರವಿವಾರ (ಅ.18) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇರಳ ಪೊಲೀಸ್​ ಅಧಿಕಾರಿ ಅಶ್ವಿನ್​ ರಾಯ್​ ಮಾತನಾಡಿ, ಡ್ರಗ್ಸ್​ನಿಂದ ಆಗುವ ದುಷ್ಪರಿಣಾಮ ತಿಳಿಸಿ ಜಾಗೃತಿ ಮೂಡಿಸಿದರು.

ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್​ ವರಿಷ್ಠ ಸುಧಾಕರ ನಾಯ್ಕ, ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕ ಪ್ರೇಮಕುಮಾರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ ಸಿ., ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ಎಂ., ಉಡುಪಿ ನಗರ ಠಾಣೆಯ ಪೊಲೀಸ್​ ನಿರೀಕ್ಷಕ ಮಹೇಶ ಪ್ರಸಾದ ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಳಿಕ ಗೋಕರ್ಣ, ಪಣಜಿ ಮಾರ್ಗವಾಗಿ ಗುಜರಾತ್​ನತ್ತ ಮುಂದುವರಿದ ಬೈಕ್​ ರ್ಯಾಲಿಗೆ ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ, ಹರಿರಾಮ ಶಂಕರ ಹಾಗೂ ಇನ್ನಿತರರು ಚಾಲನೆ ನೀಡಿದರು. ಶಾಲಾ-ಕಾಲೇಜ್​ಗಳ ವಿದ್ಯಾರ್ಥಿಗಳು ಇದ್ದರು.

ಹೊರದೇಶದಿಂದ ಇಲ್ಲಿ ನಡೆಯುತ್ತಿರುವ ಡ್ರಗ್ಸ್​ ದಂಧೆಗೆ ಕಡಿವಾಣ ಹಾಕಲು ನಾವೆಲ್ಲ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಿದೆ. ನಮ್ಮ ಯುವಜನತೆಯನ್ನು ತಪ್ಪು ದಾರಿಗೆ ಇಳಿಯುವಂತೆ ಮಾಡುವುದೇ ಈ ಜಾಲದ ಕುತಂತ್ರವಾಗಿದೆ. ಈ ಕುರಿತು ಜಾಗೃತಿ ಮೂಡಿಸಲು ಜಿಲ್ಲಾಡಳಿತ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಲೇ ಇದೆ. ಡ್ರಗ್ಸ್​ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಪೊಲೀಸ್​ ಇಲಾಖೆಯ ಕ್ಯುಆರ್​ ಕೋಡ್​ ವ್ಯವಸ್ಥೆ ಮೂಲಕ ಮಾಹಿತಿ ನೀಡಬಹುದು.
ಅಬೀದ್​ ಗದ್ಯಾಳ. ಉಡುಪಿ ಅಪರ ಜಿಲ್ಲಾಧಿಕಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net