

ಉಡುಪಿ: ಯುವಜನರ ಭವಿಷ್ಯ ರಕ್ಷಿಸಲು ಮಾದಕ ವಸ್ತುಗಳ ವಿರುದ್ಧ ದೃಢ ನಿಲುವು ತಾಳಬೇಕು. ಯುವಸಮುದಾಯ ಉತ್ತಮ ಗುರಿ ಮತ್ತು ಆರೋಗ್ಯಕರ ಜೀವನ ಸಾಗಿಸಲು ಸಮಾಜವೂ ಸಹ ಬೆಂಬಲ ನೀಡಬೇಕು. ಸಾರ್ವಜನಿಕರು ಮಾದಕ ವಸ್ತುಗಳಿಂದ ದೂರವಿದ್ದು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವ ಸಂಕಲ್ಪ ಮಾಡಬೇಕು ಎಂದು ಶಾಸಕ ಹಾಗೂ ಉಡುಪಿ ರನ್ನರ್ಸ್ ಕ್ಲಬ್ನ ಗೌರವಾಧ್ಯಕ್ಷ ಯಶ್ಪಾಲ್ ಸುವರ್ಣ ಕರೆ ನೀಡಿದರು.
ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಹಾಗೂ ಯುವಜನರನ್ನು ವ್ಯಸನಮುಕ್ತ, ಆರೋಗ್ಯಕರ ಜೀವನದತ್ತ ಪ್ರೇರೇಪಿಸುವ ಉದ್ದೇಶದಿಂದ ಉಡುಪಿ ರನ್ನರ್ಸ್ ಕ್ಲಬ್ (ಯುಆರ್ಸಿ) ವತಿಯಿಂದ ಹಾಗೂ ಉಡುಪಿ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ 'ಡ್ರಗ್ ಫ್ರೀ ಉಡುಪಿ' ಸಂದೇಶದ 'ಯುಆರ್ಸಿ ನೈಟ್ ರನ್-2026'ಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾರ್ಕಳ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಇಶಿತಾ ಗುಪ್ತಾ, ಉಡುಪಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಶೆಟ್ಟಿ, ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ, ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ಸಿಇಒ ರಾಜೇಶ್ ಹೆಗ್ಡೆ ಉಪಸ್ಥಿತರಿದ್ದರು.
350ಕ್ಕೂ ಅಧಿಕ ರನ್ನರ್ಸ್
ಉಡುಪಿ, ಮಂಗಳೂರು, ಕುಂದಾಪುರ, ಉತ್ತರ ಕನ್ನಡ ಜಿಲ್ಲೆಯ ಕುಮಟಾ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ 350ಕ್ಕೂ ಅಧಿಕ ರನ್ನರ್ಸ್ ಉತ್ಸಾಹದಿಂದ ಪಾಲ್ಗೊಂಡು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಸಂದೇಶ ಸಾರಿದರು.
ಉಡುಪಿ ರನ್ನರ್ಸ್ ಕ್ಲಬ್ ಅಧ್ಯಕ್ಷ ಸತೀಶ್ ಸಾಲ್ಯಾನ್ ಹಾಗೂ ಕಾರ್ಯದರ್ಶಿ ಲ್ಯಾನ್ಸಿ ಮೆಂಡೋನ್ಸಾ ನೇತೃತ್ವ ವಹಿಸಿದ್ದರು. ಕಾರ್ಕಳ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಇಶಿತಾ ಗುಪ್ತಾ ಪ್ರತಿಜ್ಞಾ ವಿಧಿ ಬೋಧಿಸಿದರು.