ಉಡುಪಿ: ಮಾದಕ ವಸ್ತುಗಳ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿ ಆರ್ಥಿಕ ನಷ್ಟದೊಂದಿಗೆ ಭವಿಷ್ಯವೂ ನಾಶವಾಗಲಿದೆ. ಹೀಗಾಗಿ ಅವುಗಳಿಂದ ಸದಾ ದೂರವಿರಬೇಕು. ಜಿಲ್ಲೆಯನ್ನು ಮಾದಕ ವ್ಯಸನಮುಕ್ತವಾಗಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಮಾದಕ ವಸ್ತುಗಳ ಮಾರಾಟ, ಬಳಕೆ ಕಂಡುಬಂದಲ್ಲಿ ಮಾಹಿತಿ ನೀಡಲು ವ್ಯವಸ್ಥೆ ಮಾಡಿರುವ ಪೊಲೀಸ್ ಇಲಾಖೆಯ ಕ್ಯೂಆರ್ ಕೋಡ್ ಮೂಲಕ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಕರೆ ನೀಡಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ (ನ.6) ಆಯೋಜಿಸಿದ್ದ ಎನ್ಸಿಒಆರ್ಡಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಎಲ್ಲೆಡೆ ಕ್ಯೂಆರ್ ಕೋಡ್ ಕಾಣಿಸುವಂತೆ ದೊಡ್ಡದಾಗಿ ಅಳವಡಿಸಬೇಕು. ಮಾಹಿತಿ ನೀಡುವವರ ಹೆಸರು ಗೌಪ್ಯವಾಗಿ ಇಡಲಾಗುವುದು ಎಂದರು.
ಎಲ್ಲೆಡೆ ಕ್ರಮ ಕೈಗೊಳ್ಳಿ
ಯುವಜನರು ಇಂತಹ ದುಶ್ಚಟಗಳಿಗೆ ಹೆಚ್ಚು ಬಲಿಯಾಗುತ್ತಿರುವುದು ಕಂಡುಬರುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳಬೇಕು. ಔಷಧ ಅಂಗಡಿಗಳಲ್ಲಿ ಅಮಲು ಬರಿಸುವಂತಹ ಯಾವುದೇ ಮಾತ್ರೆ ಅಥವಾ ಔಷಧ ಮಾರಾಟ ಮಾಡುವಂತಿಲ್ಲ. 'ವೈದ್ಯರ ನಿರ್ದೇಶನವಿಲ್ಲದೆ ಔಷಧ ಮಾರಾಟ ನಿಷೇಧ' ಎಂಬ ಸೂಚನಾ ಫಲಕ ಅಳವಡಿಕೆ ಕಡ್ಡಾಯ. ಸಂದೇಹಾಸ್ಪದವಾಗಿ ಕೆಮ್ಮಿನ ಔಷಧ ಖರೀದಿಸುವವರ ಬಗ್ಗೆ ನಿಗಾ ವಹಿಸಬೇಕು ಎಂದರು.
ಎಲ್ಲ ಔಷಧ ಅಂಗಡಿಗಳ ಸಿಸಿ ಟಿವಿ ನಿರಂತರವಾಗಿ ಚಾಲನೆಯಲ್ಲಿ ಇರುವಂತೆ ಔಷಧ ನಿಯಂತ್ರಕರು ಹಾಗೂ ಪೊಲೀಸ್ ಇಲಾಖೆಯವರು ನೋಡಿಕೊಳ್ಳಬೇಕು. ಶಾಲಾ-ಕಾಲೇಜ್, ವಸತಿ ನಿಲಯಗಳಲ್ಲಿ ರಕ್ತ ತಪಾಸಣೆ ನಡೆಸಲು ಅಧಿಕಾರಿಗಳು ಕ್ರಮವಹಿಸಬೇಕು. ರೈಲ್ವೆ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಮ ಶಂಕರ, ಹೆಚ್ಚುವರಿ ಪೊಲೀಸ್ ವರಿಷ್ಠ ಸುಧಾಕರ ನಾಯಕ, ಡಿಎಚ್ಒ ಡಾ. ಬಸವರಾಜ ಹುಬ್ಬಳ್ಳಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.