

ಕಾಸರಗೋಡು: ವಿವಾಹ ನಿಶ್ಚಿತಾರ್ಥವಾಗಿದ್ದ ಜೋಡಿಯೊಂದು ವಿಡಿಯೋ ಕಾಲ್ ಬಳಿಕ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಭಾವಿ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಯುವಕನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಾಸರಗೋಡಿನ ಪೂಚಕ್ಕಾಡ್ ಕಿಯಕ್ಕೇಕರೆಯ ನಿವಾಸಿ ಪಿ.ಅನುಶ್ರೀ(25) ತಮ್ಮ ವಾಸಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಇವರ ಭಾವೀ ಪತಿ ಕಣ್ಣೂರು ಇರಿಟ್ಟಿಯ ವಿಲಮನದ ಅಂಬಲತಾಡ್ ನಿವಾಸಿ ಅಮಲ್(27) ಕೂಡಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರು ಎರ್ನಾಕುಲಂನ ಹೋಟೆಲ್ ಕೊಠಡಿಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃತ್ಯಕ್ಕೂ ಮೊದಲು ಇವರಿಬ್ಬರೂ ವಿಡಿಯೋ ಕರೆ ಮಾಡಿ ಮಾತನಾಡಿದ್ದರು. ಇವರಿಬ್ಬರೂ ಬ್ಯಾಂಕ್ ಉದ್ಯೋಗಿಗಳಾಗಿದ್ದು, ವಿವಾಹ ಡಿಸೆಂಬರ್ 26ರಂದು ನಡೆಸಲು ದಿನಾಂಕ ನಿಗದಿಯಾಗಿತ್ತು.
ನೀಲೇಶ್ವರದ ಗ್ಯಾಸ್ ಏಜೆನ್ಸಿ ಮಾಲೀಕ, ಕಿಯಕ್ಕೇಕರ ನಿವಾಸಿ ಕೆ.ಚಂದ್ರನ್ ಹಾಗೂ ರೀನಾ ದಂಪತಿಯ ಪುತ್ರಿಯಾಗಿರುವ ಅನುಶ್ರೀ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹುಣಸೂರು ಶಾಖೆಯಲ್ಲಿ ಉದ್ಯೋಗಿಯಾಗಿದ್ದರು. ಹುಣಸೂರಿನಿಂದ ಅನುಶ್ರೀ ಮೃತದೇಹ ಪೂಚಕ್ಕಡಿನ ಮನೆಗೆ ತಂದು ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಜೋಡಿಯ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಅನುಶ್ರೀ ಅವರ ಸಹೋದರಿ ಪಿ.ಶ್ರೀಲಕ್ಷ್ಮೀ ಕೇರಳ ಪೊಲೀಸ್ ನೇಮಕಾತಿ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದಾರೆ. ಮಟ್ಟನ್ನೂರು ಪ್ರಗತಿ ಪಿಎಸ್‌ಸಿ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಪಡೆದ ಬಳಿಕ ಅನುಶ್ರೀ ಬ್ಯಾಂಕ್ ಉದ್ಯೋಗ ಪಡೆದುಕೊಂಡಿದ್ದರು.