* ಎಸ್ಕೆಡಿಆರ್ಪಿ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ ಮಾಹಿತಿ
* 100 ಶಿಕ್ಷಕರ ಸಂದರ್ಶನ ಪ್ರಕ್ರಿಯೆ ಕಾರ್ಯಕ್ರಮ ಉದ್ಘಾಟನೆ
ಉಡುಪಿ: ರಾಜ್ಯದ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪೀಠೋಪಕರಣಗಳ ವಿತರಣೆ, ಶಾಲಾ ಕಟ್ಟಡ ಮತ್ತು ಶೌಚಾಲಯಗಳ ನಿರ್ಮಾಣಕ್ಕೆ ಅನುದಾನ, 25 ಸಾವಿರಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ಶಿಷ್ಯವೇತನ ನೀಡಲಾಗುತ್ತಿದೆ. ಅಲ್ಲದೆ, ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗಾಗಿ ಈ ಬಾರಿ ರಾಜ್ಯಾದ್ಯಂತ 1 ಸಾವಿರ ಗೌರವ ಶಿಕ್ಷಕರನ್ನು ನೇಮಿಸಲಾಗುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ 100 'ಜ್ಞಾನ ದೀಪ' ಶಿಕ್ಷಕರನ್ನು ಸಂಸ್ಥೆಯ ವತಿಯಿಂದ ನಿಯೋಜಿಸಲಾಗುತ್ತಿದೆ ಎಂದು ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ ಮಾಹಿತಿ ನೀಡಿದರು.
ಉಡುಪಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಸೌಧ ಕಟ್ಟಡದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ 'ಜ್ಞಾನ ದೀಪ' ಶಿಕ್ಷಣ ಕಾರ್ಯಕ್ರಮದಡಿ 2026-27ನೇ ಸಾಲಿನಲ್ಲಿ ಶಿಕ್ಷಕರ ಕೊರತೆ ಇರುವ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಮಂಜೂರಾತಿ ಆಗಿರುವ 100 ಮಂದಿ ಜ್ಞಾನ ದೀಪ ಶಿಕ್ಷಕರ ಸಂದರ್ಶನ ಪ್ರಕ್ರಿಯೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಆನಂದ್ ಸುವರ್ಣ ಮಾರ್ಗದರ್ಶನದಲ್ಲಿ ಸಂದರ್ಶನ ನಡೆಯಿತು. ಕೇಂದ್ರ ಕಚೇರಿಯ ಸಮುದಾಯ ಅಭಿವೃದ್ಧಿ ವಿಭಾಗದ ಯೋಜನಾಧಿಕಾರಿ ಶೇಖರ್ ಮಾತನಾಡಿ, ಜ್ಞಾನ ದೀಪ ಶಿಕ್ಷಕರ ಕರ್ತವ್ಯದ ಕುರಿತು ಮಾಹಿತಿ ನೀಡಿದರು.
ಜಿಲ್ಲೆಯ ಎಂಐಎಸ್ ಯೋಜನಾಧಿಕಾರಿ ಸ್ವಪ್ನಾ ಪ್ರಕಾಶ್, ಯೋಜನಾಧಿಕಾರಿಗಳಾದ ಸುರೇಂದ್ರ ನಾಯ್ಕ, ಬಾಲಕೃಷ್ಣ ಹಿರಿಂಜ, ಉಮೇಶ್, ಸುಧೀರ್, ರಮೇಶ್ ಪಿ.ಕೆ. ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲೆ ಅನಿತಾ ಶೆಟ್ಟಿ ಉಪಸ್ಥಿತರಿದ್ದರು.
ಜಿಲ್ಲಾ ಕಚೇರಿ ಪ್ರಬಂಧಕರಾದ ಜ್ಯೋತಿ ಸ್ವಾಗತಿಸಿದರು. ಚೈತ್ರಾ ಕಾರ್ಯಕ್ರಮ ನಿರೂಪಿಸಿದರು. ನಿತೇಶ್ ವಂದಿಸಿದರು. ಅರ್ಪಿತಾ, ಸರೋಜಿನಿ, ಕೀರ್ತಿಕ್, ಯಶೋದಾ, ಕಿರಣ್ ಸಹಕರಿಸಿದರು.